ಕರ್ನಾಟಕ ರಾಜಕಾರಣದ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಬಿಜೆಪಿ ಹೈಕಮಾಂಡ್‌ನಿಂದ ಬಿಗ್ ಶಾಕ್ ಸಿಗುವ ಸಾಧ್ಯತೆ ದಟ್ಟವಾಗಿದೆ. ಬಿಜೆಪಿಯ ಅತ್ಯುನ್ನತ ನಿರ್ಧಾರ ಕೈಗೊಳ್ಳುವ ವೇದಿಕೆಯಾದ ಸಂಸದೀಯ ಮಂಡಳಿಯನ್ನು ಪುನರ್ರಚಿಸಲು ಕಸರತ್ತು ನಡೆದಿರುವ ಹಿನ್ನೆಲೆಯಲ್ಲಿ, ಯಡಿಯೂರಪ್ಪ ಅವರನ್ನು ಈ ಮಂಡಳಿಯಿಂದ ಕೈಬಿಡುವ ಸಾಧ್ಯತೆ ಹೆಚ್ಚಾಗಿದೆ. ಆದರೆ, ಈ ಬಗ್ಗೆ ಬಿಜೆಪಿ ಇನ್ನೂ ಯಾವುದೇ ಅಧಿಕೃತ ಅಂತಿಮ ನಿರ್ಧಾರವನ್ನು ಪ್ರಕಟಿಸಿಲ್ಲ.
ಬಿಜೆಪಿ ರಾಷ್ಟ್ರೀಯ ಮಟ್ಟದಲ್ಲಿ ಸಂಘಟನೆಯನ್ನು ಹೊಸದಾಗಿ ರೂಪಿಸುತ್ತಿದ್ದು, ಆಗಸ್ಟ್ 17ರಂದು ಹೊಸ ರಾಷ್ಟ್ರೀಯ ಪದಾಧಿಕಾರಿಗಳ ತಂಡ ಪ್ರಕಟವಾಗಿದೆ. ಹಲವು ಹಿರಿಯರಿಗೆ ಸ್ಥಾನ ಬದಲಾವಣೆ ಅಥವಾ ವಿಶ್ರಾಂತಿ ನೀಡುವ ಮೂಲಕ ಹೊಸ ಮುಖಗಳಿಗೆ ಅವಕಾಶ ಕಲ್ಪಿಸಲಾಗುತ್ತಿದೆ. ಇದೇ ಪ್ರಕ್ರಿಯೆಯ ಮುಂದುವರಿದ ಭಾಗವಾಗಿ ಸಂಸದೀಯ ಮಂಡಳಿ ಹಾಗೂ ಕೇಂದ್ರ ಚುನಾವಣಾ ಸಮಿತಿಯಲ್ಲೂ ಮಹತ್ವದ ಬದಲಾವಣೆಗಳ ಸಾಧ್ಯತೆ ವ್ಯಕ್ತವಾಗಿವೆ. ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ಬಳಿಕವೂ ಪಕ್ಷದ ರಾಷ್ಟ್ರೀಯ ಮಟ್ಟದ ನಿರ್ಧಾರ ಪ್ರಕ್ರಿಯೆಯಲ್ಲಿ ಕರ್ನಾಟಕದ ಪ್ರಮುಖ ಪ್ರತಿನಿಧಿಯಾಗಿ ಮುಂದುವರಿಯಲು ಬಿ.ಎಸ್. ಯಡಿಯೂರಪ್ಪ ಅವರಿಗೆ ಸಂಸದೀಯ ಮಂಡಳಿಯಲ್ಲಿ ಸ್ಥಾನ ನೀಡಲಾಗಿತ್ತು. ಆದರೆ ಇದೀಗ ಪಕ್ಷದ ರಾಷ್ಟ್ರೀಯ ನಾಯಕತ್ವದಲ್ಲಿ ಪೀಳಿಗೆಯ ಬದಲಾವಣೆ ಮತ್ತು ಸಂಘಟನಾತ್ಮಕ ಪುನರ್ವ್ಯವಸ್ಥೆಯ ಚರ್ಚೆ ಜೋರಾಗಿ ನಡೆಯುತ್ತಿರುವುದರಿಂದ ಹಿರಿಯ ನಾಯಕರ ಸ್ಥಾನಮಾನಗಳ ಬಗ್ಗೆ ಮರುಪರಿಶೀಲನೆ ನಡೆಯುತ್ತಿದೆ.
ಸಂಸದೀಯ ಮಂಡಳಿಯ ಈ ಪುನರ್ರಚನೆಯಲ್ಲಿ ಹೊಸ ಮುಖಗಳಿಗೆ ಮಣೆ ಹಾಕಲು ಸಿದ್ಧತೆ ನಡೆದಿರುವಂತೆ ಕಾಣುತ್ತಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಗೂ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರ ಹೆಸರುಗಳು ಪ್ರಮುಖವಾಗಿ ಚರ್ಚೆಯಲ್ಲಿವೆ. ಇದರೊಂದಿಗೆ ಪಶ್ಚಿಮ ಬಂಗಾಳದ ನಾಯಕ ಸುವೇಂದು ಅಧಿಕಾರಿ ಅವರ ಹೆಸರೂ ಕೇಳಿಬರುತ್ತಿದೆ. ಒಟ್ಟಿನಲ್ಲಿ ಹಿರಿಯರಿಗೆ ವಿಶ್ರಾಂತಿ ನೀಡುವುದು ಹಾಗೂ ಭವಿಷ್ಯದ ರಾಷ್ಟ್ರೀಯ ನಾಯಕತ್ವಕ್ಕೆ ವೇದಿಕೆ ಸಿದ್ಧಪಡಿಸುವುದು ಬಿಜೆಪಿಯ ಪ್ರಮುಖ ಉದ್ದೇಶವಾಗಿದೆ.
ಒಂದು ವೇಳೆ ಯಡಿಯೂರಪ್ಪ ಅವರನ್ನು ಸಂಸದೀಯ ಮಂಡಳಿಯಿಂದ ಕೈಬಿಟ್ಟರೆ, ಅದು ಕೇವಲ ಒಬ್ಬ ನಾಯಕರ ಹುದ್ದೆ ಬದಲಾವಣೆ ಎನ್ನುವುದಕ್ಕಿಂತ ಕರ್ನಾಟಕ ಬಿಜೆಪಿಯ ರಾಷ್ಟ್ರೀಯ ಮಟ್ಟದ ಪ್ರಾತಿನಿಧ್ಯದ ಪ್ರಶ್ನೆಯನ್ನು ಮುನ್ನೆಲೆಗೆ ತರಲಿದೆ. ದಶಕಗಳಿಂದ ಕರ್ನಾಟಕದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸುವಲ್ಲಿ, ಅಧಿಕಾರಕ್ಕೆ ತರುವಲ್ಲಿ ಮತ್ತು ಲಿಂಗಾಯತ ಸಮುದಾಯದ ರಾಜಕೀಯ ಸಮೀಕರಣಗಳಲ್ಲಿ ಯಡಿಯೂರಪ್ಪ ಅವರ ಪಾತ್ರ ಹಿರಿದಾದದ್ದು. ಆದರೆ ರಾಜ್ಯ ರಾಜಕಾರಣದ ಸಕ್ರಿಯ ನಾಯಕತ್ವದಿಂದ ಹಿಂದೆ ಸರಿದ ಬಳಿಕ, ಈಗ ರಾಷ್ಟ್ರೀಯ ಸಂಘಟನೆಯಲ್ಲೂ ಹೊಸ ತಲೆಮಾರಿಗೆ ಹಾದಿ ಮಾಡಿಕೊಡುವ ಪ್ರಕ್ರಿಯೆ ಆರಂಭವಾಗಿದೆ. ಹಾಗಂದ ಮಾತ್ರಕ್ಕೆ ಇದು ಪಕ್ಷದಿಂದ ಯಡಿಯೂರಪ್ಪ ಅವರನ್ನು ಸಂಪೂರ್ಣವಾಗಿ ದೂರ ಮಾಡುತ್ತದೆ ಎಂದರ್ಥವಲ್ಲ; ಬಿಜೆಪಿಯಲ್ಲಿ ಹಿರಿಯ ನಾಯಕರಿಗೆ ವಿವಿಧ ಹಂತಗಳಲ್ಲಿ ವಿಭಿನ್ನ ಜವಾಬ್ದಾರಿಗಳನ್ನು ನೀಡಿರುವ ನಿದರ್ಶನಗಳಿವೆ.
ಈ ಎಲ್ಲದರ ನಡುವೆಯೂ ಕರ್ನಾಟಕದ ಇಬ್ಬರು ಪ್ರಮುಖ ನಾಯಕರಿಗೆ ರಾಷ್ಟ್ರೀಯ ಮಟ್ಟದಲ್ಲಿ ಮಹತ್ವದ ಜವಾಬ್ದಾರಿಗಳು ಮುಂದುವರಿದಿವೆ. ಕರುನಾಡಿನ ಎಂ. ನಾಗರಾಜ್ ಅವರಿಗೆ ರಾಷ್ಟ್ರೀಯ ಉಪಾಧ್ಯಕ್ಷ ಸ್ಥಾನ ನೀಡಲಾಗಿದ್ದು, ಬಿ.ಎಲ್. ಸಂತೋಷ್ ಅವರು ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಯಾಗಿ ತಮ್ಮ ಜವಾಬ್ದಾರಿಯನ್ನು ಮುಂದುವರಿಸಿದ್ದಾರೆ. ಲೋಕಸಭೆ ಹಾಗೂ ವಿವಿಧ ರಾಜ್ಯಗಳ ವಿಧಾನಸಭೆ ಚುನಾವಣೆಗಳ ಟಿಕೆಟ್ ಹಂಚಿಕೆ, ಮೈತ್ರಿ ನಿರ್ಧಾರಗಳು ಮತ್ತು ಪಕ್ಷದ ನೀತಿ ನಿರೂಪಣೆಯಲ್ಲಿ 12 ಸದಸ್ಯರ ಸಂಸದೀಯ ಮಂಡಳಿಯೇ ಅಂತಿಮ ಪ್ರಾಧಿಕಾರವಾಗಿರುವ ಕಾರಣ, ಈ ಉನ್ನತ ಸಮಿತಿಯಿಂದ ಬಿಎಸ್‌ವೈ ಹೊರಬಿದ್ದರೆ ಅದು ರಾಜ್ಯ ಬಿಜೆಪಿಯಲ್ಲಿ ನಾಯಕತ್ವದ ಸಂಪೂರ್ಣ ಪೀಳಿಗೆಯ ಬದಲಾವಣೆಗೆ ನಾಂದಿ ಹಾಡಲಿದೆ.




