ಕರ್ನಾಟಕ ರಾಜಕಾರಣದಲ್ಲಿ ಮತ್ತೊಮ್ಮೆ ಸಂಚಲನ ಮೂಡಿಸಿದ್ದಾರೆ ಹಿರಿಯ ನಾಯಕ ಕೆ.ಎಸ್. ಈಶ್ವರಪ್ಪ. 2028ರ ವಿಧಾನಸಭಾ ಚುನಾವಣೆಯ ಕುರಿತು ಮಹತ್ವದ ಘೋಷಣೆ ಮಾಡಿರುವ ಅವರು, ಶಿವಮೊಗ್ಗ ನಗರ ಕ್ಷೇತ್ರದಿಂದ ತಾವು ಅಥವಾ ತಮ್ಮ ಪುತ್ರ ಕಾಂತೇಶ್ ಸ್ಪರ್ಧಿಸುವುದು ನೂರಕ್ಕೆ ನೂರರಷ್ಟು ಖಚಿತ ಎಂದು ಸ್ಪಷ್ಟಪಡಿಸುವ ಮೂಲಕ, ತಮ್ಮ ರಾಜಕೀಯ ಭವಿಷ್ಯದ ಬಗ್ಗೆ ಎದ್ದಿದ್ದ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ಶಿವಮೊಗ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಈಶ್ವರಪ್ಪ, ರಾಜ್ಯ ಬಿಜೆಪಿ ನಾಯಕರ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ತಮ್ಮ ಮಗನಿಗೆ ಟಿಕೆಟ್ ನೀಡದೆ ಪಕ್ಷದ ನಾಯಕರು ಅನ್ಯಾಯ ಮಾಡಿದ್ದಾರೆ ಎಂಬ ನೋವು ತಮಗೆ ಇನ್ನೂ ಮಾಸಿಲ್ಲ ಎಂದು ಅವರು ಬಹಿರಂಗವಾಗಿ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಕುಟುಂಬ ರಾಜಕಾರಣದ ವಿರುದ್ಧ ಗುಡುಗಿರುವ ಅವರು, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪುತ್ರರಾದ ಬಿ.ವೈ. ವಿಜಯೇಂದ್ರ ಮತ್ತು ಬಿ.ವೈ. ರಾಘವೇಂದ್ರ ಅವರಿಗೆ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ನೀಡಲಾಗಿದೆ, ಹಾಗೆಯೇ ಬೊಮ್ಮಾಯಿ ಅವರ ಪುತ್ರನಿಗೂ ಟಿಕೆಟ್ ದೊರೆತಿದೆ. ಆದರೆ ತಮ್ಮ ಮಗನಿಗೆ ಮಾತ್ರ ಉದ್ದೇಶಪೂರ್ವಕವಾಗಿ ಟಿಕೆಟ್ ತಪ್ಪಿಸಿ ಮೋಸ ಮಾಡಲಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಪಕ್ಷದ ಆಂತರಿಕ ಬೆಳವಣಿಗೆಗಳ ಬಗ್ಗೆ ಸ್ಫೋಟಕ ಮಾಹಿತಿ ನೀಡಿರುವ ಈಶ್ವರಪ್ಪ, ಬಿಜೆಪಿಯ ಹಲವು ಪ್ರಮುಖ ನಾಯಕರು ಇಂದಿಗೂ ತಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ತಿಳಿಸಿದರು. ಪ್ರಸ್ತುತ ಬಿಜೆಪಿ ಪಕ್ಷವು ಒಳಜಗಳ ಮತ್ತು ಗಂಭೀರ ಸಮಸ್ಯೆಗಳಿಂದ ಕೂಡಿದ್ದು, ಒಂದು ವೇಳೆ ಈಗಿನ ಪರಿಸ್ಥಿತಿಯಲ್ಲಿಯೇ ಪಕ್ಷ ಚುನಾವಣೆಗೆ ಹೋದರೆ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು ಸಾಧ್ಯವಿಲ್ಲ. ಹೀಗಾಗಿ ಪಕ್ಷವನ್ನು ಸರಿಪಡಿಸಲು ಹೆಚ್ಚಿನ ಸಂಘಟನೆಯ ಅಗತ್ಯವಿದೆ ಎಂದರು.
ಅದರ ಜೊತೆಗೆ ‘ಹೈಕಮಾಂಡ್ ತೆಗೆದುಕೊಳ್ಳುವ ಮುಂದಿನ ನಿರ್ಧಾರಗಳಿಗಾಗಿ ತಾವು ಕಾಯುತ್ತಿರುವುದಾಗಿ ತಿಳಿಸಿರುವ ಈಶ್ವರಪ್ಪ, ತಮ್ಮ ಮುಂದಿನ ರಾಜಕೀಯ ನಡೆ ರಾಜ್ಯ ರಾಜಕಾರಣದಲ್ಲಿ ಹೊಸ ಬದಲಾವಣೆಗೆ ಸಾಕ್ಷಿಯಾಗಲಿದೆ ಎಂಬ ಸ್ಪಷ್ಟ ಸುಳಿವು ನೀಡಿದರು.
2028ರ ಚುನಾವಣೆಯಲ್ಲಿ ಶಿವಮೊಗ್ಗದ ಕಣದಲ್ಲಿ ಈಶ್ವರಪ್ಪ ಕುಟುಂಬದ ಸ್ಪರ್ಧೆ ಖಚಿತವಾಗಿರುವುದರಿಂದ, ಈ ಬೆಳವಣಿಗೆಯು ಈಗಿನಿಂದಲೇ ಜಿಲ್ಲೆಯ ರಾಜಕೀಯ ಸಮೀಕರಣಗಳನ್ನು ಬದಲಾಯಿಸಿದ್ದು, ರಾಜ್ಯ ಬಿಜೆಪಿ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ ಅಂತಾನೆ ಹೇಳಬಹುದು.




