ಲೋಕ ಶಕ್ತಿ ಪಕ್ಷದ ರಾಜ್ಯಾಧ್ಯಕ್ಷ ಸಿ.ವಿ. ಸ್ಥಾವರಮಠ ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆ

ಬೆಂಗಳೂರು: ಕರ್ನಾಟಕದಲ್ಲಿ ಮೌಲ್ಯಯುತ, ನೈತಿಕ ಹಾಗೂ ಉತ್ತರದಾಯಿತ್ವದ ರಾಜಕಾರಣಕ್ಕೆ ಮುನ್ನುಡಿ ಬರೆಯುವ ಉದ್ದೇಶದಿಂದ ಲೋಕ ಶಕ್ತಿ ಪಕ್ಷದ ರಾಜ್ಯಾಧ್ಯಕ್ಷ ಸಿ.ವಿ. ಸ್ಥಾವರಮಠ ಅವರು ತಮ್ಮ ಹಲವು ಪದಾಧಿಕಾರಿಗಳು, ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಯಾದರು.

ನಗರದ ಪ್ರೆಸ್ ಕ್ಲಬ್ ಆವರಣದಲ್ಲಿ ನಡೆದ ಸೇರ್ಪಡೆ ಸಮಾರಂಭದಲ್ಲಿ ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು ಅವರು ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಚಂದ್ರು, ರಾಮಕೃಷ್ಣ ಹೆಗಡೆಯವರ ಒತ್ತಾಯದ ಮೇರೆಗೆ ತಾವು ರಾಜಕೀಯ ಕ್ಷೇತ್ರಕ್ಕೆ ಬಂದಿದ್ದು, ರಾಜಕೀಯದಲ್ಲಿ ನೈತಿಕ ಹಾಗೂ ಮೌಲ್ಯಯುತ ವಿಚಾರಗಳಿಗೆ ಆದ್ಯತೆ ನೀಡಬೇಕು ಎಂಬುದು ತಮ್ಮ ನಿಲುವಾಗಿದೆ ಎಂದು ಹೇಳಿದರು.

ಇಂದಿನ ರಾಜಕೀಯ ಕ್ಷೇತ್ರದಲ್ಲಿ ಮೌಲ್ಯಯುತ ಮತ್ತು ನೈತಿಕ ರಾಜಕಾರಣ ಕಡಿಮೆಯಾಗುತ್ತಿರುವುದು ಕಂಡುಬರುತ್ತಿದೆ. ಹೀಗಾಗಿ ಮೌಲ್ಯಯುತ ರಾಜಕಾರಣದ ಮರುಸ್ಥಾಪನೆಗಾಗಿ ನಿರಂತರವಾಗಿ ಹೋರಾಟ ನಡೆಸುತ್ತಿರುವುದಾಗಿ ಅವರು ತಿಳಿಸಿದರು.

ದೇಶದಲ್ಲಿ ಮತ್ತೆ ನೈತಿಕ, ಮೌಲ್ಯಯುತ ಹಾಗೂ ಉತ್ತರದಾಯಿತ್ವದ ಆಡಳಿತ ವ್ಯವಸ್ಥೆಯನ್ನು ಸ್ಥಾಪಿಸುವ ಅಗತ್ಯವಿದೆ. ಪ್ರಾಮಾಣಿಕ ರಾಜಕಾರಣ ಮತ್ತು ಜನಪರ ಆಡಳಿತಕ್ಕಾಗಿ ಆಮ್ ಆದ್ಮಿ ಪಕ್ಷ ನಡೆಸುತ್ತಿರುವ ಹೋರಾಟಕ್ಕೆ ಸಿ.ವಿ. ಸ್ಥಾವರಮಠ ಅವರ ಸೇರ್ಪಡೆ ಮತ್ತಷ್ಟು ಬಲ ನೀಡಲಿದೆ ಎಂದು ಮುಖ್ಯಮಂತ್ರಿ ಚಂದ್ರು ವಿಶ್ವಾಸ ವ್ಯಕ್ತಪಡಿಸಿದರು.

ಕೇಜ್ರಿವಾಲ್ ಆಡಳಿತ ಮಾದರಿಯಿಂದ ಪ್ರಭಾವಿತ

ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಗೊಂಡ ಬಳಿಕ ಮಾತನಾಡಿದ ಸಿ.ವಿ. ಸ್ಥಾವರಮಠ, ಅರವಿಂದ್ ಕೇಜ್ರಿವಾಲ್ ಅವರ ವಿಚಾರಧಾರೆ ಹಾಗೂ ಜನಪರ ಮತ್ತು ಪ್ರಾಮಾಣಿಕ ಆಡಳಿತದ ಕಾರ್ಯವೈಖರಿಯಿಂದ ತಾವು ಪ್ರಭಾವಿತರಾಗಿರುವುದಾಗಿ ಹೇಳಿದರು.

ಶಿಕ್ಷಣ, ಆರೋಗ್ಯ ಮತ್ತು ಪಾರದರ್ಶಕ ಆಡಳಿತಕ್ಕೆ ಆದ್ಯತೆ ನೀಡುವ ಮೂಲಕ ಸಾಮಾನ್ಯ ಜನರು ಸುಖವಾಗಿ ಹಾಗೂ ಸಮೃದ್ಧವಾಗಿ ಬದುಕಲು ಸಾಧ್ಯ ಎಂಬುದನ್ನು ದೆಹಲಿಯಲ್ಲಿ ಹಲವು ವರ್ಷಗಳ ಆಡಳಿತದ ಮೂಲಕ ತೋರಿಸಿಕೊಡಲಾಗಿದೆ ಎಂದು ಅವರು ಹೇಳಿದರು.

ಅದೇ ರೀತಿ ಪಂಜಾಬ್‌ನಲ್ಲಿ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ನೇತೃತ್ವದಲ್ಲಿ ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಕಷ್ಟು ಪರಿವರ್ತನೆಗಳನ್ನು ತರಲಾಗಿದೆ. ವಿಶೇಷವಾಗಿ ಶಿಕ್ಷಣ ಕ್ಷೇತ್ರದಲ್ಲಿ ಪಂಜಾಬ್ ಸಾಧಿಸಿರುವ ಪ್ರಗತಿ ಶ್ಲಾಘನೀಯವಾಗಿದೆ ಎಂದು ಸ್ಥಾವರಮಠ ತಿಳಿಸಿದರು.

ಈ ಹಿನ್ನೆಲೆಯಲ್ಲಿ ಅರವಿಂದ್ ಕೇಜ್ರಿವಾಲ್ ಅವರ ನೇತೃತ್ವದ ರಾಜಕೀಯ ಹೋರಾಟಕ್ಕೆ ಇಂದಿನಿಂದ ಸಂಪೂರ್ಣವಾಗಿ ಕೈಜೋಡಿಸುತ್ತಿದ್ದು, ಕರ್ನಾಟಕದಲ್ಲಿ ಮೌಲ್ಯಯುತ, ನೈತಿಕ, ಪಾರದರ್ಶಕ ಹಾಗೂ ಉತ್ತರದಾಯಿತ್ವದ ರಾಜಕಾರಣವನ್ನು ಸ್ಥಾಪಿಸಲು ಕಂಕಣಬದ್ಧರಾಗಿರುವುದಾಗಿ ಅವರು ಘೋಷಿಸಿದರು.

About The Author