ಶಕ್ತಿ ಯೋಜನೆಯ ಲೆಕ್ಕ ಬಯಲು – ಫ್ರೀ ಬಸ್ ಪ್ರಯಾಣದ ಹೊರೆ ಯಾರಿಗೆ?

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಶಕ್ತಿ’ ಗ್ಯಾರಂಟಿ ಯೋಜನೆ ಮಹಿಳೆಯರಿಗೆ ದೊಡ್ಡ ಮಟ್ಟದಲ್ಲಿ ನೆರವಾಗಿರುವುದು ನಿಜ. ಆದರೆ, ಸಾರಿಗೆ ನಿಗಮಗಳಿಗೆ ಮಾತ್ರ ಇದು ತೀವ್ರ ಆರ್ಥಿಕ ಸಂಕಷ್ಟವನ್ನು ತಂದೊಡ್ಡಿದೆ. ಯೋಜನೆ ಜಾರಿಗೆ ಬಂದಾಗಿನಿಂದ 2026ರ ಜುಲೈ ಅಂತ್ಯದವರೆಗೆ ನಾಲ್ಕು ಸಾರಿಗೆ ನಿಗಮಗಳ ಬಸ್‌ಗಳಲ್ಲಿ ಬರೋಬ್ಬರಿ 797 ಕೋಟಿಗೂ ಅಧಿಕ ಮಹಿಳಾ ಪ್ರಯಾಣಿಕರು ಉಚಿತವಾಗಿ ಪ್ರಯಾಣಿಸಿದ್ದಾರೆ. ಈ ಒಟ್ಟು ಟಿಕೆಟ್ ಮೌಲ್ಯ ಬರೋಬ್ಬರಿ 20,955 ಕೋಟಿ ರೂ.ಗಳಾಗಿದ್ದು, ಇದರಲ್ಲಿ ಸರ್ಕಾರವು ಇದುವರೆಗೆ 15,304 ಕೋಟಿ ರೂ. ಮಾತ್ರ ಬಿಡುಗಡೆ ಮಾಡಿದೆ. ಇನ್ನೂ ಬೃಹತ್ ಮೊತ್ತದ 5,651 ಕೋಟಿ ರೂಪಾಯಿ ಟಿಕೆಟ್ ಹಣ ಸರ್ಕಾರದಿಂದ ಬಾಕಿ ಉಳಿದುಕೊಂಡಿದೆ.

ಹಣ ಸಕಾಲದಲ್ಲಿ ಮರುಪಾವತಿಯಾಗದ ಕಾರಣ ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ವಾಯವ್ಯ ಹಾಗೂ ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಗಳು ತೀವ್ರ ತೊಂದರೆಗೆ ಸಿಲುಕಿವೆ ಎಂದು ತಿಳಿದುಬಂದಿದೆ. ಸಿಬ್ಬಂದಿಗೆ ಕಾಲಕ್ಕೆ ಸರಿಯಾಗಿ ವೇತನ ಪಾವತಿಸಲು, ಡೀಸೆಲ್ ಹಾಗೂ ಬಸ್‌ಗಳ ಬಿಡಿಭಾಗಗಳನ್ನು ಖರೀದಿಸಲು ಮತ್ತು ನಿವೃತ್ತ ನೌಕರರ ಬಾಕಿ ಹಣವನ್ನು ಹೊಂದಿಸಲು ನಿಗಮಗಳ ಅಧಿಕಾರಿಗಳು ಹೆಣಗಾಡುತ್ತಿದ್ದಾರೆ.

ಸರ್ಕಾರ ವಿವಿಧ ರೀತಿಯ ಸಹಾಯಧನಗಳನ್ನು ನೀಡುತ್ತಿದ್ದರೂ, ಬಾಕಿ ಉಳಿದಿರುವ ಈ ಟಿಕೆಟ್ ಮೊತ್ತದ ಹೊರೆಯಿಂದ ನಿಗಮಗಳ ಆರ್ಥಿಕ ಸ್ಥಿತಿ ಮತ್ತೆ ಹದಗೆಟ್ಟಿದೆ ಅಂತಾನೆ ಹೇಳಬಹುದು. ಎಸ್ ‘ಮಹಿಳೆಯರಿಗೆ ಉಚಿತ ಪ್ರಯಾಣದ ಶಕ್ತಿ ಯೋಜನೆ ಮುಂದುವರಿಯುತ್ತಿರೋದ್ರಿಂದ, ನಿಗಮಗಳಿಗೆ ಆಗುತ್ತಿರುವ ಈ ಆರ್ಥಿಕ ನಷ್ಟವನ್ನು ತಪ್ಪಿಸಲು ಸರ್ಕಾರ ಬಾಕಿ ಹಣವನ್ನು ಶೀಘ್ರವೇ ಬಿಡುಗಡೆ ಮಾಡಬೇಕೆಂಬ ಒತ್ತಡ ಕೇಳಿಬಂದಿದ್ದು, ಈ ಯೋಜನೆಯಿಂದಾಗಿ ಸಾರಿಗೆ ಸಂಸ್ಥೆಗಳು ನಡೆಸುವ ದಿನನಿತ್ಯದ ಕಾರ್ಯಾಚರಣೆ ಹಾಗೂ ನಿರ್ವಹಣೆಗೆ ದೊಡ್ಡ ಸವಾಲು ಎದುರಾಗಿದೆ ಎನ್ನಲಾಗ್ತಿದೆ.

About The Author