Political News: ಬಿಜೆಪಿ ಶಾಸಕ ಹರೀಶ್ ಅವರ ವಿರುದ್ಧ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಈ ವಿರುದ್ಧ ಬಿಜೆಪಿ ಶಾಸಕ ಸಿ.ಟಿ.ರವಿ ಕಿಡಿಕಾರಿದ್ದಾರೆ.
ರಾಜ್ಯದ ಓರ್ವ ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವರ ಬಾಯಿಂದ ‘ಬೀಪ್ ಬೀಪ್’ ಪದಗಳನ್ನು ಕೇಳುವ ದೌರ್ಭಾಗ್ಯ ಕನ್ನಡಿಗರಿಗೆ ಬಂದಿದೆ! ರೈತರು, ಜನ ಪ್ರತಿನಿಧಿಯಾದ ಬಿಜೆಪಿ ಶಾಸಕ ಶ್ರೀ ಬಿ. ಪಿ. ಹರೀಶ್ ಅವರ ಮೇಲೆ ಸಮಸ್ಯೆ ಕೇಳಿಸಿಕೊಂಡು ಪರಿಹಾರ ನೀಡಬೇಕಾದ ಸಚಿವ ಎಸ್ ಎಸ್ ಮಲ್ಲಿಕಾರ್ಜುನ ಅವರು ಅವಾಚ್ಯ ಪದಗಳಿಂದ ನಿಂದಿಸಿರುವುದು ಅಕ್ಷಮ್ಯ ಎಂದು ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಲ್ಲಿಕಾರ್ಜುನ ಅವರಿಗೆ ಬಹುಶಃ ಪ್ರಜಾಪ್ರಭುತ್ವದಲ್ಲಿ ಪ್ರಜೆಗಳಿಗೆ ಪ್ರಶ್ನಿಸುವ ಹಕ್ಕಿದೆ ಎನ್ನುವುದು ಮರೆತು ಹೋಗಿದೆಯೇನೋ! ತಾನು ಸಚಿವ, ಪುತ್ರ ಶಾಸಕ, ಪತ್ನಿ ಸಂಸದೆಯಾಗಿರುವುದರಿಂದ ತಾವೇ ರಾಜರು ಎನ್ನುವ ಭಾವನೆ ಮೂಡಿದೆಯೇ? ಜನ ಪ್ರತಿನಿಧಿಯಾದ ಶಾಸಕರನ್ನೇ ಹೀನಾಯವಾಗಿ ನಿಂದಿಸಿರುವ ಸಚಿವರದು ಎಂತಹ ಫ್ಯೂಡಲ್ ಮನಸ್ಥಿತಿ ಇರಬೇಕು? ಇಂತಹ ಗೂಂಡಾವರ್ತನೆಗೆ ಪ್ರಜಾಪ್ರಭುತ್ವದಲ್ಲಿ ಅವಕಾಶವಿಲ್ಲ.
ಕೋಟೆ ಕಟ್ಟಿ ಮೆರೆದವರೆಲ್ಲ ಏನಾದರು ಎನ್ನುವುದನ್ನು ಕರ್ನಾಟಕದ ಜನರು ಕಂಡಿದ್ದಾರೆ. ಇಂತಹ ದುರಂಹಕಾರ ಮುಂದುವರಿಸಿದರೆ ನಿಮ್ಮ ಅಧಿಕಾರದ ಕೋಟೆಯನ್ನೂ ಜನರು ಕೆಡವುತ್ತಾರೆ. ಸಚಿವ ಮಲ್ಲಿಕಾರ್ಜುನ ಅವರು ತನ್ನ ಮಾತಿಗೆ ತಕ್ಷಣವೇ ಕ್ಷಮೆ ಯಾಚಿಸಲೇಬೇಕು ಎಂದು ರವಿ ಆಗ್ರಹಿಸಿದ್ದಾರೆ.




