Political News: ಗೌರಿ ಗಣೇಶ ಹಬ್ಬ ಮುಗಿದು 2 ದಿನಗಳಾಗಿದೆ. ಆದರೂ ಇನ್ನುವರೆಗೆ ಬೆಂಗಳೂರಿನ ಕೆಲವೆಡೆ ಕಸದ ರಾಶಿ ಹಾಗೇ ಇದೆ ಎಂಬ ಆರೋಪ ಕೇಳಿ ಬರುತ್ತಿದೆ. ಹಬ್ಬಕ್ಕೂ ಮುನ್ನ ಚೆನ್ನಾಗಿ ಪ್ರಿಪೇರ್ ಆಗುವವರು, ಹಬ್ಬ ಮುಗಿದ ಮೇಲೆ ಕಸವನ್ನು ಸ್ವಚ್ಛಗೋಳಿಸಲು ಮಾತ್ರ ನಿರ್ಲಕ್ಷ್ಯ ತೋರುತ್ತಾರೆ ಎಂದು ಆರೋಪಿಸಲಾಗಿದೆ.
ಈ ಆರೋಪಕ್ಕೆ ಸಂಬಂಧಿಸಿದಂತೆ ವಿಪಕ್ಷ ನಾಯಕ ಆರ್.ಅಶೋಕ್, ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಗೌರಿ-ಗಣೇಶ ಹಬ್ಬದ ಸಂಭ್ರಮ ಮುಗಿದು ದಿನಗಳಾದರೂ ಬೆಂಗಳೂರಿನ ಹಲವು ರಸ್ತೆ ಬದಿಗಳಲ್ಲಿ ಹೂವು, ಹಣ್ಣು, ಬಾಳೆಕಂದು, ಪೂಜಾ ಸಾಮಗ್ರಿ, ಪ್ಲಾಸ್ಟಿಕ್ ಸೇರಿದಂತೆ ತ್ಯಾಜ್ಯದ ರಾಶಿಗಳು ಹಾಗೆಯೇ ಬಿದ್ದಿವೆ. ಕೊಳೆತ ತ್ಯಾಜ್ಯದಿಂದ ದುರ್ವಾಸನೆ, ನೊಣ-ಸೊಳ್ಳೆಗಳ ಹಾವಳಿ. ಬೀದಿ ನಾಯಿಗಳು ಕಸವನ್ನು ಎಳೆದಾಡುತ್ತಿವೆ. ಜನರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ! ಎಂದು ಅಶೋಕ್ ಕಿಡಿಕಾಾರಿದ್ದಾರೆ.
ಮಾನ್ಯ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ, ನೀವು ಹೇಳುವ ‘Brand Bengaluru’ ಎಲ್ಲಿದೆ? ಬ್ರ್ಯಾಂಡ್ ಬೆಂಗಳೂರು ಎಂದು ಪ್ರಚಾರ ಮಾತ್ರ ಜೋರಾಗಿದೆ; ಆದರೆ ವಾಸ್ತವದಲ್ಲಿ ನಮ್ಮ ಬೆಂಗಳೂರು ಕಸದ ರಾಶಿಯಲ್ಲಿ ಮುಳುಗುತ್ತಿದೆ!
ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣಭೈರೇಗೌಡ ಅವರು ಕಸದಿಂದ ಸ್ವಾತಂತ್ರ್ಯ ಅಭಿಯಾನ ಆರಂಭಿಸಿ ಪ್ರಚಾರ ಮಾಡಿದ್ದು ಬಿಟ್ಟರೆ ಯಾವ ಸ್ವಚ್ಛತೆಯೂ ಆಗಿಲ್ಲ. ಹಬ್ಬದ ಮುನ್ನ ಪ್ರಚಾರಕ್ಕಾಗಿ ಸ್ವಚ್ಛತಾ ವ್ಯವಸ್ಥೆ, ಹಬ್ಬ ಮುಗಿದ ಮೇಲೆ ಮಾತ್ರ ಅಧಿಕಾರಿಗಳ ನಿರ್ಲಕ್ಷ್ಯ — ಇದೇನಾ ನಿಮ್ಮ ಆಡಳಿತ ಮಾದರಿ? ರಾಜಧಾನಿ ಜನರಿಗೆ ಬೇಕಿರುವುದು ಹೋರ್ಡಿಂಗ್ಗಳ ಮೇಲಿನ Brand Bengaluru ಅಲ್ಲ, ರಸ್ತೆಗಳ ಮೇಲಿನ ಸ್ವಚ್ಛ ಬೆಂಗಳೂರು ಎಂದು ಆರ್.ಅಶೋಕ್ ಹೇಳಿದ್ದಾರೆ.
ಬೆಂಗಳೂರು ನಗರವನ್ನು ಕಸದ ತೊಟ್ಟಿಯನ್ನಾಗಿ ಮಾಡುವ ಬದಲು, ತಕ್ಷಣ ತ್ಯಾಜ್ಯ ತೆರವುಗೊಳಿಸಿ. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕಡಿವಾಣ ಹಾಕಿ. ಪ್ರಚಾರಕ್ಕೆ ‘Brand Bengaluru’… ವಾಸ್ತವದಲ್ಲಿ ‘Garbage Bengaluru’ ಆಗದಂತೆ ನೋಡಿಕೊಳ್ಳಿ! ಎಂದು ಅಶೋಕ್ ಎಚ್ಚರಿಕೆ ನೀಡಿದ್ದಾರೆ.




