ಉದ್ಯೋಗಿಗಳ ಭವಿಷ್ಯಕ್ಕೆ ದೊಡ್ಡ ನಿರ್ಧಾರ ಕೈಗೊಂಡ ಕೇಂದ್ರ!

ದೇಶದ ಲಕ್ಷಾಂತರ ಉದ್ಯೋಗಿಗಳಿಗೆ ಸಾಮಾಜಿಕ ಭದ್ರತೆ ಹಾಗೂ ನಿವೃತ್ತಿ ಜೀವನದ ಸೌಲಭ್ಯಗಳನ್ನು ವಿಸ್ತರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಐತಿಹಾಸಿಕ ನಿರ್ಧಾರ ಕೈಗೊಂಡಿದೆ. ನೌಕರರ ಭವಿಷ್ಯ ನಿಧಿ ಸಂಸ್ಥೆಯ ಅಂದರೆ ಇಪಿಎಫ್‌ಒ ಕಡ್ಡಾಯ ಮಾಸಿಕ ವೇತನ ಮಿತಿಯನ್ನು ಹಾಲಿ ಇರುವ ₹15,000 ರಿಂದ ₹25,000 ಕ್ಕೆ ಹೆಚ್ಚಿಸಲು ಪ್ರಧಾನಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಅಧಿಕೃತ ಅನುಮೋದನೆ ನೀಡಿದೆ. ಸರ್ಕಾರದ ಈ ಮಹತ್ವದ ಕ್ರಮದಿಂದಾಗಿ ಸಂಘಟಿತ ವಲಯದ 51 ಲಕ್ಷಕ್ಕೂ ಹೆಚ್ಚು ಹೆಚ್ಚುವರಿ ಉದ್ಯೋಗಿಗಳು ಕಡ್ಡಾಯ ಸಾಮಾಜಿಕ ಭದ್ರತೆಯ ತೆಕ್ಕೆಗೆ ಬರಲಿದ್ದಾರೆ.

ಪ್ರಸ್ತುತ ನಿಯಮದ ಪ್ರಕಾರ, ಮಾಸಿಕ ₹15,000 ಕ್ಕಿಂತ ಹೆಚ್ಚು ಮೂಲ ವೇತನ ಪಡೆಯುವ ಹೊಸ ಉದ್ಯೋಗಿಗಳಿಗೆ ಇಪಿಎಫ್‌ಒ ಸದಸ್ಯತ್ವ ಕಡ್ಡಾಯವಾಗಿರಲಿಲ್ಲ. ಆದರೆ ಈ ಪರಿಷ್ಕೃತ ಮಿತಿಯ ಅನ್ವಯ, ಇನ್ನು ಮುಂದೆ ತಿಂಗಳಿಗೆ ₹15,000 ದಿಂದ ₹25,000 ವರೆಗೆ ಗಳಿಸುವ ಎಲ್ಲ ಉದ್ಯೋಗಿಗಳು ಕಡ್ಡಾಯವಾಗಿ ಈ ಸಾಮಾಜಿಕ ಭದ್ರತಾ ಚೌಕಟ್ಟಿನೊಳಗೆ ಸೇರ್ಪಡೆಗೊಳ್ಳಲಿದ್ದಾರೆ. ಕೊನೆಯ ಬಾರಿಗೆ 2014ರ ಸೆಪ್ಟೆಂಬರ್‌ನಲ್ಲಿ ಈ ಮಿತಿಯನ್ನು ₹15,000 ಕ್ಕೆ ಹೆಚ್ಚಿಸಲಾಗಿದ್ದು, ದಶಕದ ಬಳಿಕ ಕಾಲಕ್ಕೆ ತಕ್ಕಂತೆ ಈ ಬದಲಾವಣೆ ತರಲಾಗಿದೆ.

ಹೌದು ‘ಈ ವೇತನ ಮಿತಿಯ ಪರಿಷ್ಕರಣೆಯು ಕೇವಲ ಪಿಎಫ್ ಉಳಿತಾಯಕ್ಕೆ ಮಾತ್ರ ಸೀಮಿತವಾಗಿಲ್ಲ. ಇದರೊಂದಿಗೆ ನೌಕರರ ಪಿಂಚಣಿ ಯೋಜನೆ ಹಾಗೂ ನೌಕರರ ಠೇವಣಿ ಲಿಂಕ್ಡ್ ವಿಮಾ ಯೋಜನೆ ಅಡಿಯಲ್ಲಿ ಸಿಗುವ ವಿಮಾ ರಕ್ಷಣೆಯೂ ನೌಕರರಿಗೆ ಲಭಿಸಲಿದ್ದು, ಇದು ಕಾರ್ಮಿಕರ ಕುಟುಂಬಗಳಿಗೆ ದೊಡ್ಡ ಮಟ್ಟದ ಆರ್ಥಿಕ ಭದ್ರತೆ ಒದಗಿಸಲಿದೆ ಎನ್ನಲಾಗ್ತಿದೆ.

ಈ ಸಾಮಾಜಿಕ ಭದ್ರತೆಯ ವಿಸ್ತರಣೆಯಿಂದಾಗಿ ಕೇಂದ್ರ ಸರ್ಕಾರದ ಮೇಲಿನ ಆರ್ಥಿಕ ಹೊಣೆಗಾರಿಕೆ ಹೆಚ್ಚಾಗಲಿದ್ದು, ಮುಂದಿನ ಐದು ವರ್ಷಗಳಲ್ಲಿ ಸರ್ಕಾರದ ಒಟ್ಟು ಅಂದಾಜು ವೆಚ್ಚ ₹56,696 ಕೋಟಿ ತಲುಪಲಿದೆ. ಶೀಘ್ರದಲ್ಲೇ ಅಧಿಕೃತ ಅಧಿಸೂಚನೆ ಹೊರಡಿಸುವ ಮೂಲಕ ಈ ಹೊಸ ನಿಯಮ ಜಾರಿಗೆ ಬರಲಿದೆ.

About The Author