Political News: ಬೆಂಗಳೂರು: ರಾಜ್ಯದಲ್ಲಿ ಉಂಟಾಗಿರುವ ಬರಗಾಲದ ಪರಿಸ್ಥಿತಿ, ರೈತರು ಎದುರಿಸುತ್ತಿರುವ ಸಂಕಷ್ಟಗಳು ಹಾಗೂ ಅಗತ್ಯ ಪರಿಹಾರ ಕ್ರಮಗಳ ಕುರಿತು ಇಂದು ವಿಧಾನ ಸೌಧದಲ್ಲಿ ನಡೆದ ವಿಶೇಷ ಅಧಿವೇಶನದಲ್ಲಿ ಶಾಸಕರಾದ ಟಿ.ಎ. ಶರವಣ ಅವರು ಮಾತನಾಡಿದರು.
ರಾಜ್ಯದಲ್ಲಿ ಬರಗಾಲದ ಪರಿಸ್ಥಿತಿ ಗಂಭೀರವಾಗಿದ್ದು, ರೈತರ ಬದುಕಿನ ಮೇಲೆ ಅದರ ನೇರ ಪರಿಣಾಮ ಬೀರುತ್ತಿದೆ. ರೈತರ ಸಂಕಷ್ಟಗಳನ್ನು ಕೇವಲ ಮಾತುಗಳಿಗೆ ಸೀಮಿತಗೊಳಿಸದೆ, ಸರ್ಕಾರ ತಕ್ಷಣ ಅಗತ್ಯ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಟಿ.ಎ. ಶರವಣ ಒತ್ತಾಯಿಸಿದರು.
ರೈತರ ಸಾಲಮನ್ನಾ ಕುರಿತು ಮಾತನಾಡಿದ ಶರವಣ ಅವರು, ಮಾಜಿ ಮುಖ್ಯಮಂತ್ರಿ ಹಾಗೂ ಪ್ರಸ್ತುತ ಕೇಂದ್ರ ಸಚಿವರಾದ ಶ್ರೀ ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸುಮಾರು ₹25,000 ಕೋಟಿ ಮೊತ್ತದ ರೈತರ ಸಾಲಮನ್ನಾ ಮಾಡಿರುವುದನ್ನು ಸರ್ಕಾರದ ಗಮನಕ್ಕೆ ತಂದರು. ಕೇಂದ್ರ ಸರ್ಕಾರದಲ್ಲಿ ಅಂಗಲಾಚದೆ ದೃಢ ಸಂಕಲ್ಪದೊಂದಿಗೆ ರೈತರ ಹಿತದೃಷ್ಟಿಯಿಂದ ಇಂತಹ ಕ್ರಮಗಳ ಅಗತ್ಯವಿದ್ದು, ಪ್ರಸ್ತುತ ಪರಿಸ್ಥಿತಿಯಲ್ಲಿಯೂ ರೈತರಿಗೆ ಅಗತ್ಯ ನೆರವು ಒದಗಿಸುವ ನಿಟ್ಟಿನಲ್ಲಿ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗದಂತೆ ಮೇವು ಖರೀದಿ ವ್ಯವಸ್ಥೆ ಮಾಡಬೇಕು. ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಪ್ರದೇಶಗಳಲ್ಲಿ ಸರ್ಕಾರದ ವತಿಯಿಂದ ಎಲ್ಲಾ ತಾಲೂಕು ಮಟ್ಟದಲ್ಲಿ ಟ್ಯಾಂಕರ್‌ಗಳ ಮೂಲಕ ನೀರು ಪೂರೈಸುವ ವ್ಯವಸ್ಥೆಯನ್ನು ತಕ್ಷಣ ಜಾರಿಗೊಳಿಸಬೇಕು ಎಂದು ಅವರು ಒತ್ತಾಯಿಸಿದರು.
ಬರಗಾಲದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದಿಂದ ಅಗತ್ಯ ನೆರವು ಪಡೆಯಲು ರಾಜ್ಯ ಸರ್ಕಾರವು ಸರ್ವಪಕ್ಷ ನಿಯೋಗವನ್ನು ಕೇಂದ್ರದ ಬಳಿಗೆ ಕರೆದೊಯ್ಯಬೇಕು. ರಾಜ್ಯದ ರೈತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಟಿ.ಎ. ಶರವಣ ಹೇಳಿದರು.




