ಬಹಿರಂಗವಾಯ್ತು ಆಂತರಿಕ ವರದಿ – ಕಾಂಗ್ರೆಸ್ ಶಾಸಕರಿಗೆ ಟೆನ್ಷನ್ ಶುರು!

ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದರೂ, ಆಡಳಿತರೂಢ ಪಕ್ಷದ ಶಾಸಕರಿಗೆ ಈಗ ನಿದ್ರೆ ಇಲ್ಲದಂತಾಗಿದೆ! ಹೌದು, 2028ರ ವಿಧಾನಸಭಾ ಚುನಾವಣೆಗೆ ಇನ್ನೂ ಸಮಯವಿದ್ದರೂ, ಈಗಲೇ ಶುರುವಾಗಿದೆ ಅಸಲಿ ಕಸರತ್ತು. ಅದಕ್ಕೆ ಮುಖ್ಯ ಕಾರಣ, ಪಕ್ಷದ ಒಳಗೆ ಸಿದ್ಧವಾಗಿರುವ ಆಂತರಿಕ ವರದಿ ಎಂದು ಹೇಳಲಾಗ್ತಿದೆ.

ರಾಜ್ಯ ರಾಜಕಾರಣದಲ್ಲಿ ಈಗ ‘ಸುನಿಲ್ ಕನುಗೋಳು’ ವರದಿ ಭಾರೀ ಸದ್ದು ಮಾಡುತ್ತಿದೆ. ಸರ್ಕಾರದ ಮೂರು ವರ್ಷಗಳ ಆಡಳಿತದ ಬೆನ್ನಲ್ಲೇ ಬಂದಿರುವ ಈ ಆಂತರಿಕ ಸಮೀಕ್ಷಾ ವರದಿ, ಹಾಲಿ ಶಾಸಕರ ನಿದ್ದೆಗೆಡಿಸಿದೆ. ವರದಿ ಪ್ರಕಾರ, ಕೆಲವು ಹಾಲಿ ಶಾಸಕರ ಕಾರ್ಯವೈಖರಿ ಬಗ್ಗೆ ನಕಾರಾತ್ಮಕ ಅಂಶಗಳು ಕೇಳಿಬಂದಿದ್ದು, ಮುಂದಿನ ಚುನಾವಣೆಯಲ್ಲಿ ಇವರ ಗೆಲುವು ಕಷ್ಟ ಎಂಬ ಸುಳಿವು ಸಿಕ್ಕಿದೆಯಂತೆ!

ಇದೇ ಕಾರಣಕ್ಕೆ ಎಚ್ಚೆತ್ತುಕೊಂಡಿರುವ ಸಿಎಂ ಡಿ.ಕೆ. ಶಿವಕುಮಾರ್, ಶಾಸಕರಿಗೆ ಖಡಕ್ ಸಂದೇಶ ರವಾನಿಸಿದ್ದಾರೆ. “ಕ್ಷೇತ್ರದ ಕಡೆ ಗಮನ ಕೊಡಿ, ಜನರ ಮಧ್ಯೆ ಇರಿ, ಇಲ್ಲವಾದರೆ 2028ರಲ್ಲಿ ಟಿಕೆಟ್ ಸಿಗುವುದು ಸುಲಭವಲ್ಲ” ಎಂದು ನೇರ ಎಚ್ಚರಿಕೆ ನೀಡಿದ್ದಾರೆ. ಸಭೆಯಲ್ಲಿ ಹೈಕಮಾಂಡ್ ನೀಡಿರುವ ಸೂಚನೆಗಳು ಬಹಳ ಸ್ಪಷ್ಟವಾಗಿವೆ ನೋಡಿ.

ಮೊದಲನೆಯದಾಗಿ, ದೆಹಲಿ ಅಥವಾ ಬೆಂಗಳೂರಿನಲ್ಲೇ ಕೂರದೆ, ಶಾಸಕರು ಕಡ್ಡಾಯವಾಗಿ ತಮ್ಮ ಕ್ಷೇತ್ರದಲ್ಲಿ ಬೀಡುಬಿಡಬೇಕು. ಎರಡನೆಯದಾಗಿ, ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಿ ವಿರೋಧ ಪಕ್ಷಗಳ ತಂತ್ರಗಾರಿಕೆಯನ್ನು ಮಣಿಸಬೇಕು. ಮೂರನೆಯದಾಗಿ, ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಇಲ್ಲಿ ಬರುವ ಫಲಿತಾಂಶವೇ 2028ರ ಅಗ್ನಿಪರೀಕ್ಷೆಗೆ ದಿಕ್ಸೂಚಿ ಎಂದಿದ್ದಾರೆ.

ಒಟ್ಟಿನಲ್ಲಿ, ‘ಜನರ ಕೆಲಸ ಮಾಡಿ, ಇಲ್ಲವೇ ಟಿಕೆಟ್ ಕಳೆದುಕೊಳ್ಳಲು ಸಿದ್ಧರಾಗಿ’ ಎಂಬ ಸಂದೇಶ ಈಗ ಕಾಂಗ್ರೆಸ್ ಪಾಳಯದಲ್ಲಿ ಸಂಚಲನ ಮೂಡಿಸಿದೆ. ಆಂತರಿಕ ವರದಿಯ ಈ ಬಿಸಿ, ಶಾಸಕರನ್ನು ಎಷ್ಟರ ಮಟ್ಟಿಗೆ ಎಚ್ಚರಿಸಲಿದೆ ಮತ್ತು 2028ರ ಕಲಿಗಳ ಕದನದಲ್ಲಿ ಟಿಕೆಟ್ ಯಾರಿಗೆ ಸಿಗಲಿದೆ ಎಂಬುದನ್ನ ಕಾಲವೇ ಉತ್ತರಿಸಬೇಕಿದೆ.

About The Author