ಯಾರು ಸಿಎಂ ಅನ್ನೋದನ್ನ ಅವರು ತಿರ್ಮಾನಿಸಲಿ – ವಿಜಯೇಂದ್ರ!

ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಅಧಿಕಾರಕ್ಕೇರಲು ರಣತಂತ್ರ ರೂಪಿಸುತ್ತಿರುವ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಕೂಟ, ಬೆಂಗಳೂರಿನಲ್ಲಿ ಮಹತ್ವದ ಸಮನ್ವಯ ಸಮಿತಿ ಸಭೆ ನಡೆಸಿದೆ. ಎನ್‌ಡಿಎ ಮೈತ್ರಿಕೂಟದಿಂದ ಬಿಹಾರ ಮಾದರಿ ಎಲೆಕ್ಷನ್ ತಂತ್ರಗಾರಿಕೆಯನ್ನು ರಾಜ್ಯದಲ್ಲೂ ಅಳವಡಿಸಿಕೊಳ್ಳಲು ನಿರ್ಧರಿಸಿರುವ ದೋಸ್ತಿ ನಾಯಕರು, ಬರೋಬ್ಬರಿ 180 ಸ್ಥಾನಗಳನ್ನು ಗೆಲ್ಲುವ ಬಿಗ್ ಟಾರ್ಗೆಟ್ ಫಿಕ್ಸ್ ಮಾಡಿಕೊಂಡಿದ್ದಾರೆ.

ಇದೇ ವೇಳೆ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ‘ಕುಮಾರಸ್ವಾಮಿ ಹಾಗೂ ನನ್ನ ಮಧ್ಯೆ ಯಾವುದೇ ಮುಖ್ಯಮಂತ್ರಿ ರೇಸ್ ಸೃಷ್ಟಿಸಬೇಡಿ’ ಎಂದು ಮನವಿ ಮಾಡಿದರು. ಮುಂದಿನ ಮುಖ್ಯಮಂತ್ರಿ ಯಾರು ಎಂಬುದನ್ನು ಹೈಕಮಾಂಡ್ ತೀರ್ಮಾನಿಸಲಿದೆ ಎಂದ ಅವರು, ಇದರ ಬಗ್ಗೆ ಕಾರ್ಯಕರ್ತರು ಬಹಿರಂಗ ಚರ್ಚೆ ನಡೆಸುವುದು ಅಥವಾ ಗೊಂದಲ ಮಾಡಿಕೊಳ್ಳುವುದು ಬೇಡ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಸಭೆಯಲ್ಲಿ ಮಾತನಾಡಿದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಮುಂಬರುವ ಎಲ್ಲಾ ಚುನಾವಣೆಗಳನ್ನೂ ಎನ್‌ಡಿಎ ಮೈತ್ರಿಯಡಿ ಒಗ್ಗಟ್ಟಿನಿಂದ ಎದುರಿಸಬೇಕಿದೆ ಎಂದರು. ಬಿಹಾರ ಮಾದರಿಯ ಚುನಾವಣಾ ತಂತ್ರಗಾರಿಕೆಯನ್ನು ಜಾರಿಗೆ ತರುವ ಮೂಲಕ ರಾಜ್ಯದಲ್ಲಿ ಎನ್‌ಡಿಎ ಸರ್ಕಾರವನ್ನು ಅಧಿಕಾರಕ್ಕೆ ತರಲು 180 ಕ್ಷೇತ್ರಗಳ ಗುರಿಯನ್ನು ತಲುಪಲು ಶ್ರಮಿಸಬೇಕು ಎಂದು ಕರೆ ನೀಡಿದರು. ಕುಮಾರಸ್ವಾಮಿ ಅವರ ಈ ಪ್ರಸ್ತಾವನೆಯನ್ನು ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ಸಂಪೂರ್ಣವಾಗಿ ಸ್ವಾಗತಿಸಿದ್ದಾರೆ.

ಒಟ್ಟಿನಲ್ಲಿ, ಆಡಳಿತರೂಢ ಕಾಂಗ್ರೆಸ್ ಸರ್ಕಾರವನ್ನು ಎದುರಿಸಲು ಒಗ್ಗಟ್ಟಿನ ಮಂತ್ರ ಜಪಿಸಿರುವ ಜೆಡಿಎಸ್-ಬಿಜೆಪಿ ನಾಯಕರು, ಮುಂದಿನ ಚುನಾವಣೆಗೆ ಈಗಿನಿಂದಲೇ ಭರ್ಜರಿ ಕಸರತ್ತು ಆರಂಭಿಸಿದ್ದಾರೆ ಎಂದೇ ಹೇಳಬಹುದು..

About The Author