ರಾಜ್ಯ ರಾಜಕಾರಣದಲ್ಲಿ ದಿನದಿಂದ ದಿನಕ್ಕೆ ರಾಜಕೀಯ ನಾಯಕರ ವಾಕ್ಸಮರ ರಂಗೇರುತ್ತಿದೆ. ಅದರಲ್ಲೂ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಮತ್ತು ಬಿಜೆಪಿ ನಾಯಕ ಛಲವಾದಿ ನಾರಾಯಣಸ್ವಾಮಿ ನಡುವಿನ ಜಟಾಪಟಿ ಈಗ ತೀವ್ರ ಚರ್ಚೆಗೆ ಗ್ರಾಸವಾಗಿದೆ. ರಾಹುಲ್ ಗಾಂಧಿ ಮದುವೆ ಕುರಿತಾಗಿ ಛಲವಾದಿ ನಾರಾಯಣಸ್ವಾಮಿ ಮಾಡಿದ್ದ ವ್ಯಂಗ್ಯದ ಟೀಕೆಗಳಿಗೆ, ಶಾಸಕ ಪ್ರದೀಪ್ ಈಶ್ವರ್ ಅಷ್ಟೇ ತೀವ್ರವಾದ ಹಾಗೂ ಹಾಸ್ಯಭರಿತ ಶೈಲಿಯಲ್ಲಿ ತಿರುಗೇಟು ನೀಡಿದ್ದಾರೆ.
ದಾವಣಗೆರೆಯಲ್ಲಿ ಮಾತನಾಡಿದ ಪ್ರದೀಪ್ ಈಶ್ವರ್, ರಾಹುಲ್ ಗಾಂಧಿಗೆ ಮದುವೆ ಮಾಡಿಸಿದರೆ ಹುಚ್ಚು ಕಡಿಮೆ ಆಗುತ್ತದೆ ಎಂದಿದ್ದ ಛಲವಾದಿ ನಾರಾಯಣಸ್ವಾಮಿ ಅವರ ಹೇಳಿಕೆಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. “ಛಲವಾದಿ ನಾರಾಯಣಸ್ವಾಮಿಗೆ ಮದುವೆಯಾಗಿ ಇಬ್ಬರು ಮೂರು ಮಕ್ಕಳಿದ್ದರೂ ಅವರಿಗೆ ಹುಚ್ಚು ಕಡಿಮೆ ಆಗಿಲ್ಲ ಅನ್ನೋದಕ್ಕೆ ಅವರೇ ಜೀವಂತ ಉದಾಹರಣೆ” ಎಂದು ಸಕ್ಕತ್ ಟಾಂಗ್ ಕೊಟ್ಟಿದ್ದಾರೆ.
ಮುಂದುವರೆದು, ನನಗೆ ಛಲವಾದಿ ನಾರಾಯಣಸ್ವಾಮಿ ಅಂದರೆ ತುಂಬಾ ಇಷ್ಟ, ಏಕೆಂದರೆ ಅವರು ಯಾವುದೇ ಹೋಮ್ ವರ್ಕ್ ಮಾಡದೆ, ಓದಿಕೊಳ್ಳದೆ ಪ್ರೆಸ್ಮೀಟ್ ಮಾಡುತ್ತಾರೆ ಎಂದು ಲೇವಡಿ ಮಾಡಿದರು. 30 ವರ್ಷಗಳ ಕಾಲ ಕಾಂಗ್ರೆಸ್ನಲ್ಲಿದ್ದು ಮಲ್ಲಿಕಾರ್ಜುನ ಖರ್ಗೆ ಅವರ ಪರವಾಗಿ ಬಕೆಟ್ ಹಿಡಿದು ಅವರನ್ನು ಅತಿಯಾಗಿ ಹೊಗಳಿದ್ದನ್ನು ಈ ವೇಳೆ ಪ್ರದೀಪ್ ಈಶ್ವರ್ ನೆನಪಿಸಿದರು.
ಇದೇ ಸಂದರ್ಭದಲ್ಲಿ ವಿಪಕ್ಷ ನಾಯಕ ಆರ್. ಅಶೋಕ್ ಹಾಗೂ ಇತರೆ ಬಿಜೆಪಿ ನಾಯಕರ ಮೇಲೂ ವಾಗ್ದಾಳಿ ನಡೆಸಿದ ಪ್ರದೀಪ್ ಈಶ್ವರ್, ಬಿಜೆಪಿ ನಾಯಕರ ಇಂಗ್ಲಿಷ್ ಶೈಲಿ ಹಾಗೂ ರಾಜಕೀಯ ನಿಲುವುಗಳನ್ನು ವ್ಯಂಗ್ಯವಾಡಿದರು. ಅಪ್ಪಿ ತಪ್ಪಿ ಸಾರ್ವಜನಿಕರು ಬಿಜೆಪಿಯವರಿಗೆ ವೋಟ್ ಹಾಕಿದರೆ ಗ್ಯಾರಂಟಿ ಯೋಜನೆಗಳನ್ನು ಸಂಪೂರ್ಣವಾಗಿ ನಿಲ್ಲಿಸಿಬಿಡುತ್ತಾರೆ ಎಂದು ಎಚ್ಚರಿಸಿದರು.
ಬಸ್ಗೆ ಚಾರ್ಜ್ ಕೊಡಬೇಕಾಗುತ್ತದೆ, 2 ಸಾವಿರ ರೂಪಾಯಿ ಗೃಹಲಕ್ಷ್ಮಿ ಹಣ ಬರುವುದಿಲ್ಲ, ಆದ್ದರಿಂದ ದಯವಿಟ್ಟು ಬಿಜೆಪಿಯವರನ್ನು ನಂಬಬೇಡಿ ಎಂದು ಜನರಿಗೆ ಮನವಿ ಮಾಡಿದರು. ಅಲ್ಲದೆ, ಮುಂಬರುವ ದಿನಗಳಲ್ಲಿ ಬಿಜೆಪಿಯಲ್ಲಿ ಪ್ರಮುಖ ಬದಲಾವಣೆಗಳಾಗಲಿವೆ ಎಂದೂ ಭವಿಷ್ಯ ನುಡಿದರು.
ಇನ್ನು 2028ರ ಸಿಎಂ ಹುದ್ದೆ ಕುರಿತಾದ ಪ್ರಶ್ನೆಗೆ ಉತ್ತರಿಸಿದ ಪ್ರದೀಪ್ ಈಶ್ವರ್, ತಮಗೂ ಸಿಎಂ ಆಗುವ ಆಸೆ ಇದೆ ಎಂದು ಹಾಸ್ಯಭರಿತವಾಗಿ ಹೇಳಿದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಿಎಂ ಡಿ.ಕೆ. ಶಿವಕುಮಾರ್ ಇಬ್ಬರೂ ತಮ್ಮ ಕಣ್ಣುಗಳಿದ್ದ ಹಾಗೆ ಎಂದು ಬಣ್ಣಿಸಿದ ಅವರು, ಡಿ.ಕೆ. ಶಿವಕುಮಾರ್ ತಮಗೆ ಪ್ರೈಮ್ ಏರಿಯಾದಲ್ಲಿ ಸಿಎ ಸೈಟ್ ಕೊಡಿಸಿಕೊಟ್ಟಿರುವುದನ್ನು ಸ್ಮರಿಸಿದರು. ಅಂತಿಮವಾಗಿ ಇಬ್ಬರೂ ನಾಯಕರು ತಮಗೆ ಬೇಕು ಎಂದರೂ, ಪಕ್ಷದ ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದು ಸ್ಪಷ್ಟಪಡಿಸಿದರು.




