ಮಕ್ಕಳು ಶೂ ನೆಲಕ್ಕೆ ಎಸೆದಿದ್ದಲ್ಲ, ಕಾಂಗ್ರೆಸ್ ಸರ್ಕಾರದ ಮುಖಕ್ಕೆ ಬಡಿದಿದ್ದು!: ಛಲವಾದಿ ನಾರಾಯಣಸ್ವಾಮಿ

Political News: ಶಾಲಾ ಮಕ್ಕಳಿಗೆ ಕಳಪೆ ಗುಣಮಟ್ಟದ ಶೂ, ಸಾಕ್ಸ್ ವಿತರಣೆ ಆರೋಪಕ್ಕೆ ಸಂಬಂಧಿಸಿದಂತೆ ಪಾಲಕರು ಹಾಗೂ ಮಕ್ಕಳು ವಿರೋಧ ವ್ಯಕ್ತಪಡಿಸಿದ್ದರು. ಮಕ್ಕಳಿಗೆ ವಿತರಿಸಲಾದ ಶೂಗಳು ಕೆಲವೇ ದಿನಗಳಲ್ಲಿ ಹಾಳಾಗುತ್ತಿವೆ, ಗುಣಮಟ್ಟ ಕಳಪೆಯಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಪ್ರಕರಣ ಇದೀಗ ಲೋಕಾಯುಕ್ತದ ಮೆಟ್ಟಿಲೇರಿದ್ದು, ಲೋಕಾಯುಕ್ತದಲ್ಲಿ ಸುಮೋಟೋ ಕೇಸ್ ಕೂಡ ದಾಖಲಾಗಿತ್ತು.

ಇದೀಗ ಪ್ರಕರಣದ ಬೆನ್ನಲ್ಲೇ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದು, ಶಾಲಾ ಮಕ್ಕಳಿಗೆ ವಿತರಿಸಲಾದ ಶೂಗಳ ಗುಣಮಟ್ಟ ಪರಿಶೀಲನೆಗೆ ಮುಂದಾಗಿದ್ದಾರೆ. ಧಾರವಾಡ ಜಿಲ್ಲೆಯ ಏಳು ತಾಲೂಕುಗಳಿಂದ ಶೂಗಳ ಸ್ಯಾಂಪಲ್‌ಗಳನ್ನು ಅಧಿಕಾರಿಗಳು ಸಂಗ್ರಹಿಸಿದ್ದಾರೆ.

ಧಾರವಾಡ, ಹುಬ್ಬಳ್ಳಿ, ಕಲಘಟಗಿ, ಕುಂದಗೋಳ, ನವಲಗುಂದ, ಅಣ್ಣಿಗೇರಿ ಹಾಗೂ ಅಳ್ನಾವರ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳಿಂದ ಸಂಗ್ರಹಿಸಲಾದ ಶೂಗಳ ಸ್ಯಾಂಪಲ್‌ಗಳನ್ನು ಗುಣಮಟ್ಟ ಪರೀಕ್ಷೆಗಾಗಿ ಬೆಂಗಳೂರಿನ ಮೈನಾರಿಟಿ ಆಯುಕ್ತರ ಕಚೇರಿಗೆ ರವಾನಿಸಲಾಗಿದೆ.

ಇನ್ನು ಮಕ್ಕಳು ಶೂವನ್ನು ನೆಲಕ್ಕೆ ಬಿಸಾಕಿದ್ದ ಫೋಟೋ ಎಲ್ಲೆಡೆ ವೈರಲ್ ಆಗಿದ್ದು, ಈ ಬಗ್ಗೆ ಬಿಜೆಪಿ ಹಿರಿಯ ನಾಯಕ ಛಲವಾದಿ ನಾರಾಯಣಸ್ವಾಮಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮಕ್ಕಳು ಶೂ ನೆಲಕ್ಕೆ ಎಸೆದಿದ್ದಲ್ಲ, ಕಾಂಗ್ರೆಸ್ ಸರ್ಕಾರದ ಮುಖಕ್ಕೆ ಬಡಿದಿದ್ದು! ಶಾಲೆ ಪ್ರಾರಂಭವಾಗಿ 4-5 ತಿಂಗಳು ಕಳೆದರೂ ಶೂ, ಸಾಕ್ಸ್‌ ಕೊಡದೆ ಸತಾಯಿಸಿದ ಸರ್ಕಾರ ಈಗ ಕೆಲವು ಮಕ್ಕಳಿಗೆ ಕೊಟ್ಟಿರುವುದು ಕಳಪೆ ಶೂ ! ಅದನ್ನು ನೋಡಿ ದಂಗಾದ ಮಕ್ಕಳು ಕೋಪದಿಂದ ಶೂಗಳನ್ನು ಎಸೆದು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ವಿಡಿಯೋ ನೋಡಿಯಾದರೂ ಶಿಕ್ಷಣ ಸಚಿವರು ತಮ್ಮ ಅಸಮರ್ಥತೆಯನ್ನು ಒಪ್ಪಿಕೊಂಡು ರಾಜೀನಾಮೆ ನೀಡಬೇಕು. ಜಾತಿಯ ಕಾರಣಕ್ಕಾಗಿಯೋ, ಬಣದ ಕಾರಣಕ್ಕಾಗಿಯೋ ಸಚಿವಾಲಯವನ್ನು ಭರ್ತಿ ಮಾಡಲು ಹೊರಟರೆ ಮಧು ಬಂಗಾರಪ್ಪ ಅವರಂತಹ ಅಸಮರ್ಥರೇ ಸಿಗುವುದು ಎಂದು ಕಾಂಗ್ರೆಸ್ ಮತ್ತು ಸಚಿವರ ವಿರುದ್ಧ ಛಲವಾದಿ ನಾರಾಯಣಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

About The Author