Political News: ಪ್ರದೀಪ್ ಈಶ್ವರ್ ವರ್ಸಸ್ ಸುಧಾಕರ್: ಅಂದು ರಾಜಕೀಯ ಗುರು, ಇಂದು ಬದ್ಧ ವಿರೋಧಿ..?

Political News: ಕಾಂಗ್ರೆಸ್ ಪಾಳಯದಲ್ಲಿ ಭಿನ್ನಮತ ಸ್ಪೋಟವಾಗಿದ್ದು ಡಾ.ಎಂ.ಸಿ.ಸುಧಾಕರ್ ಮತ್ತು ಪ್ರದೀಪ್ ಈಶ್ವರ್ ನಡುವಿನ ಜಟಾಪಟಿ ಜೋರಾಗಿದೆ. ನನ್ನ ರಾಜಕೀಯ ಗುರು ಡಾ.ಸುಧಾಕರ್. ನನಗೆ ಟಿಕೇಟ್ ಸಿಗಲು ಅವರೇ ಕಾರಣ ಎನ್ನುತ್ತಿದ್ದ ಶಾಸಕ ಪ್ರದೀಪ್ ಈಶ್ವರ್ ಈಗ ಸುಧಾಕರ ಅವರ ವಿರುದ್ಧವೇ ಕಿಡಿಕಾರಿದ್ದಾರೆ. ಇಬ್ಬರು ಹಾಲಿ ಶಾಸಕರ ನಡುವಿನ ಈ ಸಂಘರ್ಷ ಜಿಲ್ಲಾ ಕಾಂಗ್ರೆಸ್‌ನಲ್ಲಿ ಸಂಚಲನ ಸೃಷ್ಟಿಸಿದ್ದಲ್ಲದೆ, ಹೈಕಮಾಂಡ್‌ಗೆ ನುಂಗಲಾರದ ತುತ್ತಾಗಿದೆ.

ಪ್ರದೀಪ್ ಈಶ್ವರ್ ವಿರುದ್ಧ ಅತೃಪ್ತ ನಾಯಕನ್ನು ಒಟ್ಟುಗೂಡಿಸಿದ ಸುಧಾಕರ್!

ಇಕ್ಕಟ್ಟಲ್ಲಿ ಸಿಲುಕಿಸಿದ ಗುರುವಿನ ನಡೆಗೆ ಪ್ರದೀಪ್ ಈಶ್ವರ್ ಗರಂ

ಕ್ಷೇತ್ರದಲ್ಲಿ ಪ್ರದೀಪ್ ಈಶ್ವರ್ ಅವರ ಏಕಪಕ್ಷೀಯ ನಿರ್ಧಾರಗಳು, ಸ್ಥಳೀಯ ಮುಖಂಡರನ್ನು ಕಡೆಗಣಿಸುತ್ತಿರುವ ಶೈಲಿ ಹಾಗೂ ಪಕ್ಷ ವಿರೋಧಿ ನಡವಳಿಕೆಗಳ ವಿರುದ್ಧ ಚಿಕ್ಕಬಳ್ಳಾಪುರ ಅತೃಪ್ತ ಮುಖಂಡರ ದಂಡನ್ನು ಕಟ್ಟಿಕೊಂಡು ಮಾಜಿ ಸಚಿವ ಡಾ. ಎಂ.ಸಿ. ಸುಧಾಕರ್ ಇತ್ತೀಚಿಗೆ ಬೆಂಗಳೂರಿನ ಕಪಿಸಿಸಿ ಕಚೇರಿಗೆ ತೆರಳಿ ಹೈಕಮಾಂಡ್‌ಗೆ ದೂರು ಸಲ್ಲಿಸಿದ್ದರು. ತನ್ನದೇ ಕ್ಷೇತ್ರದ ಮುಖಂಡರನ್ನು ಕರೆದುಯ್ದು ತನಗೆ ರಾಜಕೀಯವಾಗಿ ಇಕ್ಕಟ್ಟು ತಂದ ಗುರುವಿನ ನಡೆ ಶಾಸಕ ಪ್ರದೀಪ್ ಈಶ್ವರ್ ಅವರನ್ನು ಕೆರಳಿಸಿತ್ತು.

ಇಡೀ ಪ್ರತಿಕ್ರಿಯೆಗೆ ಸುಧಾಕರ್ ಅವರ ತವರು ಕ್ಷೇತ್ರವೇ ಚಿಂತಾಮಣಿಯನ್ನೇ ಗುರಿಯಾಗಿಸಿಕೊಂಡ ಪ್ರದೀಪ್ ಈಶ್ವರ್, ಲೂಲವಾಡಿ ಗ್ರಾಮದಲ್ಲಿರುವ ವೇಣು ಗೋಪಾಲಸ್ವಾಮಿ ದೇಗುಲಕ್ಕೆ ದಲಿತರ ಪ್ರವೇಶ ನಿರಾಕರಿಸಲಾಗಿದೆ ಎಂದು ಆರೋಪಿಸಿ ಜಿಲ್ಲಾಡಳಿತಕ್ಕೆ ಪತ್ರ ಬರೆದು ಶಾಕ್ ನೀಡಿದ್ದರು.

ಆದರೆ, ತಾಲೂಕಾ ಆಡಳಿತ ಹಾಗೂ ಪೊಲೀಸ್ ಇಲಾಖೆ ಹಿರಿಯ ಅಧಿಕಾರಿಗಳು ತಕ್ಷಣ ಲೂಲವಾಡಿಗೆ ಭೇಟಿ ನೀಡಿ ಪರಿಶೀಲಿಸಿದಾಗ, ಗ್ರಾಮದಲ್ಲಿ ಯಾವುದೇ ರೀತಿಯ ಅಸ್ಪೃಶ್ಯತೆ ಅಥವಾ ದೇವಸ್ಥಾನ ಪ್ರವೇಶಕ್ಕೆ ನಿರ್ಬಂಧವಿಲ್ಲ, ಎಲ್ಲ ಸಮುದಾಯಗಳೂ ಸೌಹಾರ್ದತೆಯಿಂದ ಇವೆ ಎಂದು ಸ್ಪಷ್ಟಪಡಿಸುವ ಮೂಲಕ ಪ್ರದೀಪ್ ಈಶ್ವರ್ ಆರೋಪ ಬಲ ತಗ್ಗಿಸಿತು.

ಬೃಹತ್ ಪ್ರೆಸ್‌ಮೀಟ್ ಮಾಡಲು ನಿರ್ಧರಿಸಿದ್ದ ಶಾಸಕ ಪ್ರದೀಪ್

ಮಧ್ಯ ಪ್ರವೇಶಿಸಿ ಸುದ್ದಿಗೋಷ್ಠಿ ರದ್ದು ಮಾಡಿದ ಸಿಎಂ ಡಿ.ಕೆ.ಶಿ

ಅಧಿಕಾರಿಗಳ ಸ್ಪಷ್ಟನೆಯಿಂದ ಮತ್ತಷ್ಟು ಕೆರಳಿದ ಪ್ರದೀಪ್ ಈಶ್ವರ್, ಅ. 1ರಂದು ಚಿಂತಾಮಣಿಯಲ್ಲೇ ಬೃಹತ್ ಸುದ್ದಿಗೋಷ್ಠಿ ನಡೆಸುತ್ತೇನೆ ಎಂದು ಘೋಷಿಸಿದ್ದರು. ಆದರೆ, ಇಬ್ಬರು ಪ್ರಮುಖ ನಾಯಕ ರ ಜಗಳ ಬೀದಿಗೆ ಬಂದರೆ ಸರಕಾರಕ್ಕೆ ಮುಜುಗರವಾಗಲಿದೆ ಎಂಬುದನ್ನು ಅರಿತ ಮುಖ್ಯಮಂತ್ರಿ ಕೊನೆ ಕ್ಷಣದಲ್ಲಿ ಮಧ್ಯಪ್ರವೇಶಿಸಿ ಸುದ್ದಿಗೋಷ್ಠಿ ರದ್ದುಪಡಿಸುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಒಟ್ಟಾರೆಯಾಗಿ ಗುರು-ಶಿಷ್ಯರ ಜಟಾಪಟಿ ಯಾವ ಹಂತಕ್ಕೆ ಬಂದು ನಿಲ್ಲಲಿದೆ ಎಂಬುದನ್ನ ಕಾದು ನೋಡಬೇಕಿದೆ.

About The Author