Political News: ಎಸ್‌ಐಆರ್ ಪ್ರಕ್ರಿಯೆ ಕುರಿತಂತೆ ರಾಜ್ಯ ರಾಜಕೀಯದಲ್ಲಿ ವಾಗ್ವಾದ ಜೋರಾಗಿದೆ. ಇದೀಗ ಬಿಜೆಪಿ ಸರ್ಕಾರ ಎಸ್‌ಐಆರ್ ಪ್ರಕ್ರಿಯೆ ಸರಿಯಾಗಿ ಮಾಡದೇ, ಮತಗಳ್ಳತನ ಮಾಡುತ್ತಿದೆ ಎಂದು ಕಾಂಗ್ರೆಸ್ ನಾಯಕರು ವಾಗ್ದಾಳಿ ನಡೆಸಿದ್ದು, ಈ ವಾಗ್ದಾಳಿಗೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ಈ ಹಿಂದೆ ಮನೆ ಮನೆಗೆ ಹೋಗಿ ಎಸ್‌ಐಆರ್ ಪ್ರತಿಕ್ರಿಯೆ ನಡೆಸಬೇಕು ಎಂಬ ನಿಯಮವಿದ್ದರೂ, ಎಸ್‌ಐಆರ್ ಪ್ರಕ್ರಿಯೆ ಮಾಡುವವರು, ಮಸೀದಿ, ಹಾಲ್, ಮನೆ ಇಂಥ ಕಡೆ ಎಲ್ಲರಲ್ಲೂ ಸೇರಿಸಿ, ಎಸ್‌ಐಆರ್ ಪ್ರಕ್ರಿಯೆ ಮಾಡುತ್ತಿದ್ದರು. ಈ ವಿಷಯಕ್ಕೆ ಸಂಬಂಧಿಸಿದಂತೆ ಹೆಚ್ಡಿಕೆ ಎಕ್ಸ್ ಖಾತೆ ಮೂಲಕ ವಾಗ್ದಾಳಿ ನಡೆಸಿದ್ದಾರೆ.
ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆ (SIR) ಆರಂಭದಲ್ಲಿ ವ್ಯಾಪಕ ಅಕ್ರಮ ಎಸಗಿದ ಕಾಂಗ್ರೆಸ್ ಈಗ ಅದರ ವಿರುದ್ಧ ಮಾತನಾಡುತ್ತಿರುವುದು ನಾಚಿಕೆಗೇಡು. ಮುಖ್ಯಮಂತ್ರಿ ಮತ್ತು ಅವರ ಸಂಪುಟ ಸದಸ್ಯರು ಸಂಪುಟ ಸಭೆಯನ್ನೇ ಅಲಕ್ಷಿಸಿ ರಸ್ತೆಯಲ್ಲಿ ಕೂತು ನಡೆಸಿದ ಪ್ರಹಸನ ಹಾಸ್ಯಾಸ್ಪದ. ಪ್ರತಿಭಟನೆ ನಡೆಸಿ ವಾಹನ ಸಂಚಾರ ಮತ್ತು ಜನತೆಗೆ ಅಡ್ಡಿಪಡಿಸಿದ ಕಾಂಗ್ರೆಸ್ ನಾಯಕರ ವಿರುದ್ಧ ಪೊಲೀಸರು ಕೂಡಲೇ ಪ್ರಕರಣ ದಾಖಲಿಸಬೇಕು ಎಂದು ಹೆಚ್ಡಿಕೆ ಆಗ್ರಹಿಸಿದ್ದಾರೆ.
ವೋಟ್ ಚೋರಿ ಎಂದು ಕಾಂಗ್ರೆಸ್ ಅನಗತ್ಯವಾಗಿ ರಂಪ ಮಾಡುತ್ತಿರುವುದು ಭೂತದ ಬಾಯಲ್ಲಿ ಭಗವದ್ಗೀತೆ ಬಂದ ಹಾಗಿದೆ. ಇವರು ಕಲ್ಯಾಣ ಮಂಟಪಗಳು, ಸಮುದಾಯ ಭವನಗಳು, ಮನೆಗಳು ಸೇರಿ ನಾನಾ ಕಡೆ ಜನರನ್ನು ಗುಂಪುಗುಂಪಾಗಿ ಸೇರಿಸಿ ಮತದಾರರ ಪಟ್ಟಿ ಪರಿಷ್ಕರಣೆ ಮಾಡಿಸಿದ್ದನ್ನು ನೋಡಿದ್ದೇವೆ. ಅದರ ವಿರುದ್ಧ ಜೆಡಿಎಸ್ ವತಿಯಿಂದ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇವೆ. ಆಮೇಲೆ #NDA ಮೈತ್ರಿಕೂಟದ ನಾಯಕರೆಲ್ಲರೂ ಹೋಗಿ ಆಯೋಗಕ್ಕೆ ಪಿರ್ಯಾದು ನೀಡಿದ್ದೇವೆ. ಆದರೂ ಅಕ್ರಮ ಎಸಗಿದ ಕಾಂಗ್ರೆಸ್ ಪಕ್ಷದವರೇ ‘ಅಕ್ರಮ ಅಕ್ರಮ’ ಎಂದು ಬಾಯಿ ಬಡಿದುಕೊಳ್ಳುತ್ತಿದ್ದಾರೆ. ನಾವು ದೂರು ಕೊಟ್ಟಾಗ ಮೌನಕ್ಕೆ ಶರಣಾಗಿದ್ದ ಸರಕಾರ, ಈಗ ಮಾತನಾಡುತ್ತಿದೆ. ದೆಹಲಿ ನಾಯಕರು ಬಿಸಿ ಮುಟ್ಟಿಸಿದ ಮೇಲೆ ಇವರು ಈ ಪ್ರಹಸನ ಆರಂಭ ಮಾಡಿದ್ದಾರೆ.
3 ದಿನಗಳ ಹಿಂದೆ ನಾನು #Nice ಯೋಜನೆ ಬಗ್ಗೆ ಮಾಧ್ಯಮಗೋಷ್ಠಿ ನಡೆಸಿ, ನೈಸ್ ಕಂಪನಿ ಜತೆ ಶಾಮೀಲಾಗಿ ಮುಖ್ಯಮಂತ್ರಿ ಮತ್ತು ಅವರ ಕುಟುಂಬ ಸದಸ್ಯರು ಯೋಜನೆಯ ಭೂಮಿ ಲಪಟಾಯಿಸುವ ಬಗ್ಗೆ ದಾಖಲೆಗಳ ಸಮೇತ ಬಹಿರಂಗ ಮಾಡಿದ್ದೆ. ಆ ವಿಷಯ ರಾಜಕೀಯವಾಗಿ, ಸಾರ್ವಜನಿಕವಾಗಿ ತೀವ್ರ ಚರ್ಚೆಗೆ ಒಳಗಾಗುತ್ತಿರುವ ಸಂದರ್ಭದಲ್ಲಿ ಜನರ ಗಮನ ಬೇರೆಡೆಗೆ ಸೆಳೆಯಲು ಈ SIR ವಿಷಯ ಮುನ್ನೆಲೆಗೆ ತಂದಿದ್ದಾರೆ ಮುಖ್ಯಮಂತ್ರಿ. ಅಂಗೈ ಹುಣ್ಣಿಗೆ ಕನ್ನಡಿ ಬೇಕಿಲ್ಲ!! ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಹೆಚ್ಡಿಕೆ ಕಿಡಿಕಾರಿದ್ದಾರೆ.




