Bengaluru News: ಸಿದ್ದರಾಮಯ್ಯ ಅವರನ್ನು ಮುಗಿಸಲು ಕಾಂಗ್ರೆಸ್ಸಿಗರೇ ಸಂಚು ರೂಪಿಸಿದ್ದಾರೆಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ ನೀಡಿದ್ದು, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಚಿವ ಪ್ರಿಯಾಂಕ್ ಖರ್ಗೆ, ನಾಲಿಗೆ ಬಿಗಿ ಹಿಡಿದು ಮಾತನಾಡಬೇಕೆಂದು ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮದ ಜತೆ ಮಾತನಾಡಿರುವ ಸಚಿವ ಪ್ರಿಯಾಂಕ್ ಖರ್ಗೆ, ಕುಮಾರಸ್ವಾಮಿಯವರು ಗೌರವಯುತ ಸ್ಥಾನದಲ್ಲಿದ್ದು ಇಷ್ಟು ಕ್ಷುಲ್ಲಕವಾದ ಹೇಳಿಕೆ ನೀಡಬಾರದು. ಇದು ಅವರಿಗೆ ಶೋಭೆ ತರುವುದಿಲ್ಲ ಎಂದು ಹೇಳಿದ್ದಾರೆ.
ಅಲ್ಲದೇ ಪ್ರಜ್ವಲ್ ರೇವಣ್ಣ ಕೇಸ್ಗೂ ಕಾಂಗ್ರೆಸ್ಗೂ ಏನು ಸಂಬಂಧ..? ಅವರ ವಿಕೃತಿ ಬಯಲು ಮಾಡಿದ್ದು ಕಾಂಗ್ರೆಸ್ಸಿಗರೇ..? ತಮ್ಮ ಮನೆ ಮಕ್ಕಳನ್ನು ಸರಿಯಾಗಿ ಬೆಳೆಸಲಾಗದಿದ್ದಲ್ಲಿ, ಇತರರ ವಿರುದ್ಧ ಮಾತನಾಡುವ ಯಾವ ಹಕ್ಕೂ ಅವರಗಿಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
ಅಲ್ಲದೇ ಪ್ರಜ್ವಲ್ ವೀಡಿಯೋ ವೈರಲ್ ಮಾಡಿದ್ದು ಡಿ.ಕೆ.ಶಿವಕಮಾರ್ ಅವರಾ..? ನಿಮ್ಮವರೇ ನಿಮ್ಮ ಮನೆ ಗೌರವ ಹಾಳು ಮಾಡಿದ್ದು. ಕಾಂಗ್ರೆಸ್ ಎಂದಿಗೂ ಯಾರ ಮನೆ ಮುರಿಯಲು, ಮರ್ಯಾದೆ ತೆಗೆಯಲು ಹೋಗಲಿಲ್ಲ. ಅಂಥ ಸಂಸ್ಕೃತಿ ಕಾಂಗ್ರೆಸ್ ಪಕ್ಷದ್ದಲ್ಲ ಎಂದು ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ.
ಸ್ಟಿಂಗ್ ಆಪರೇಷನ್ಗೆ ಸಂಬಂಧಿಸಿದಂತೆ ಯಾವುದೇ ವಿಚಾರಣೆ, ತನಿಖೆ ಮಾಡಲಾಗುವುದಿಲ್ಲ. ಯಾವುದೇ ತನಿಖಾ ತಂಡ ರಚಿಸುತ್ತಿಲ್ಲವೆಂದು ಗೃಹ ಸಚಿವರು ಸ್ಪಷ್ಟನೆ ನೀಡಿದ್ದಾರೆ.




