Hubli News: ಕಬ್ಬಿಗೆ ನ್ಯಾಯಯುತ ಬೆಲೆ ನಿಗದಿ ಮಾಡುವಂತೆ ಆಗ್ರಹಿಸಿ ಅನ್ನದಾತರು ನಡೆಸುತ್ತಿರುವ ಹೋರಾಟ ಈಗ ರಾಜ್ಯಾದ್ಯಂತ ಕಿಚ್ಚು ಹೊತ್ತಿಸಿದೆ. ನಿನ್ನೆ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಆರಂಭವಾದ ಹೋರಾಟ ಇಂದೂ ಮುಂದುವರಿದಿದ್ದು, ಧಾರವಾಡ, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಹಾವೇರಿ ಸೇರಿದಂತೆ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಪ್ರತಿಭಟನೆ ತೀವ್ರಗೊಂಡಿದೆ. ಚಿತ್ರದುರ್ಗ, ದಾವಣಗೆರೆ ಸೇರಿದಂತೆ ವಿವಿಧ ಭಾಗಗಳಲ್ಲೂ ರೈತರ ಆಕ್ರೋಶದ ಕಾವು ಹೆಚ್ಚುತ್ತಿದೆ. ಹೆದ್ದಾರಿಗಳಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದು, ಪ್ರಯಾಣಿಕರು ಮತ್ತು ಸರಕು ಸಾಗಣೆ ವಾಹನಗಳ ಸಂಚಾರಕ್ಕೆ ಅಡಚಣೆಯಾಗಿದೆ. ಇತ್ತ ರೈತರ ಹೋರಾಟಕ್ಕೆ ಬೆಂಬಲವಾಗಿ ಫಕೀರ ದಿಂಗಾಲೇಶ್ವರ ಮಹಾಸ್ವಾಮಿಗಳು ಸಕ್ಕರೆ ತಿನ್ನುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದಾರೆ. ಕೇಂದ್ರ ಸರ್ಕಾರ ಸಮಿತಿ ರಚನೆಯ ಪ್ರಸ್ತಾವನೆ ಮುಂದಿಟ್ಟಿದ್ದರೂ ರೈತರ ಬೇಡಿಕೆಗಳಿಗೆ ಅಂತಿಮ ಪರಿಹಾರ ಸಿಕ್ಕಿಲ್ಲ. ಹಾಗಾದರೆ ನಿನ್ನೆ ಆರಂಭವಾಗಿ ಇಂದಿಗೂ ಮುಂದುವರಿದಿರುವ ರೈತರ ಹೋರಾಟದ ಚಿತ್ರಣ ಹೇಗಿದೆ? ಇಲ್ಲಿದೆ ಸಂಪೂರ್ಣ ವರದಿ.
ಕಬ್ಬು ಬೆಳೆದ ರೈತನಿಗೆ ನ್ಯಾಯ ಬೇಕು… ಬೆವರಿನ ದುಡಿಮೆಗೆ ತಕ್ಕ ಬೆಲೆ ಸಿಗಬೇಕು… ಸರ್ಕಾರದ ಭರವಸೆಗಳು ಕಾರ್ಯರೂಪಕ್ಕೆ ಬರಬೇಕು… ಈ ಆಗ್ರಹದೊಂದಿಗೆ ಬೀದಿಗಿಳಿದ ಅನ್ನದಾತರ ಆಕ್ರೋಶ ಈಗ ರಾಜ್ಯಾದ್ಯಂತ ವ್ಯಾಪಿಸಿದೆ.
ಕೇಂದ್ರ ಸರ್ಕಾರದ ಜೊತೆ ದೆಹಲಿಯಲ್ಲಿ ನಡೆದ ಸಭೆಯಲ್ಲಿ ಬೆಲೆ ವಿಚಾರವಾಗಿ ತಕ್ಷಣದ ಪರಿಹಾರ ಸಿಗದ ಹಿನ್ನೆಲೆಯಲ್ಲಿ ರೈತ ಸಂಘಟನೆಗಳು ಪ್ರತಿಭಟನೆಯ ಹಾದಿ ಹಿಡಿದವು. ನಿನ್ನೆ ರಾಜ್ಯದ ವಿವಿಧೆಡೆ ರಾಷ್ಟ್ರೀಯ ಹೆದ್ದಾರಿಗಳನ್ನು ತಡೆದು ರೈತರು ಆಕ್ರೋಶ ವ್ಯಕ್ತಪಡಿಸಿದರು. ರಾತ್ರಿಯಾದರೂ ಹೋರಾಟ ಹಿಂಪಡೆಯದೆ ರಸ್ತೆಯಲ್ಲೇ ಕುಳಿತು ಪ್ರತಿಭಟನೆ ಮುಂದುವರಿಸಿದರು. ಇಂದೂ ಹಲವೆಡೆ ಹೋರಾಟದ ಕಾವು ಮುಂದುವರಿದಿದ್ದು, ಸರ್ಕಾರದ ಮುಂದಿನ ನಡೆ ಏನು ಎಂಬ ಕುತೂಹಲ ಹೆಚ್ಚಾಗಿದೆ.
ಒಂದೆಡೆ ಧಾರವಾಡ… ಮತ್ತೊಂದೆಡೆ ಬೆಳಗಾವಿ… ಬಾಗಲಕೋಟೆ, ವಿಜಯಪುರ, ಹಾವೇರಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ರೈತರ ಹೋರಾಟದ ಕಿಚ್ಚು!
ಧಾರವಾಡ ಜಿಲ್ಲೆಯ ಯರಿಕೊಪ್ಪ ಕ್ರಾಸ್, ಹುಬ್ಬಳ್ಳಿಯ ಗಬ್ಬೂರು ಬೈಪಾಸ್ ಹಾಗೂ ನೂಲ್ವಿ ಕ್ರಾಸ್ ಸುತ್ತಮುತ್ತ ಪ್ರತಿಭಟನೆಯ ಕಾವು ಕಂಡುಬಂದಿದೆ. ಬೆಳಗಾವಿ ಜಿಲ್ಲೆಯ ಹತ್ತರಗಿ ಟೋಲ್ ಪ್ಲಾಜಾ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ರೈತರು ಹೆದ್ದಾರಿ ತಡೆ ನಡೆಸಿದ್ದಾರೆ. ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳಲ್ಲೂ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಗಿದೆ. ಹಾವೇರಿ ಭಾಗದಲ್ಲೂ ಕಬ್ಬು ಬೆಳೆಗಾರರ ಆಕ್ರೋಶ ತೀವ್ರಗೊಂಡಿದೆ. ಕೊಪ್ಪಳ ಮತ್ತು ಗದಗ ಜಿಲ್ಲೆಗಳಲ್ಲಿಯೂ ಹೆದ್ದಾರಿ ತಡೆ ಹೋರಾಟ ನಡೆದಿರುವ ವರದಿಗಳಿವೆ. ಈ ಬೆಳವಣಿಗೆಗಳಿಂದ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ.
ಚಿತ್ರದುರ್ಗ, ದಾವಣಗೆರೆ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿನ ರೈತರ ಆಕ್ರೋಶವೂ ರಾಜ್ಯಮಟ್ಟದ ಹೋರಾಟದ ತೀವ್ರತೆಯನ್ನು ತೋರಿಸುತ್ತಿದೆ. ರೈತರ ಪ್ರಮುಖ ಬೇಡಿಕೆಗಳು ಈಡೇರುವವರೆಗೆ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂಬ ನಿಲುವು ಪ್ರತಿಭಟನಾಕಾರರದ್ದು.
ಹೆದ್ದಾರಿಗಳಲ್ಲಿ ಸರಕು ತುಂಬಿದ ಲಾರಿಗಳು ಸಾಲುಗಟ್ಟಿ ನಿಂತಿವೆ. ದೂರದ ಊರುಗಳಿಗೆ ತೆರಳುವ ಪ್ರಯಾಣಿಕರು, ಸರಕು ಸಾಗಣೆ ವಾಹನಗಳ ಚಾಲಕರು ಸಂಚಾರ ಅಡಚಣೆಯಿಂದ ತೊಂದರೆ ಅನುಭವಿಸುವಂತಾಗಿದೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಸ್ಥಳಗಳಲ್ಲಿ ಭದ್ರತೆ ಹೆಚ್ಚಿಸಿದ್ದು, ಅಗತ್ಯವಿರುವ ಕಡೆ ವಾಹನಗಳ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಮಾಡುತ್ತಿದ್ದಾರೆ.
ಹುಬ್ಬಳ್ಳಿ-ಧಾರವಾಡ ಭಾಗದಲ್ಲಿ ಪ್ರತಿಭಟನಾ ಸ್ಥಳಗಳಿಗೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಭದ್ರತಾ ವ್ಯವಸ್ಥೆ ಪರಿಶೀಲಿಸಿದ್ದಾರೆ. ಶಾಂತಿ ಕಾಪಾಡುವಂತೆ ರೈತರಿಗೆ ಮನವಿ ಮಾಡಿದ್ದು, ಪ್ರತಿಭಟನೆಯ ನಡುವೆಯೂ ಕಾನೂನು ಸುವ್ಯವಸ್ಥೆ ಕಾಪಾಡಲು ಕ್ರಮ ಕೈಗೊಂಡಿದ್ದಾರೆ.
ಆದರೆ ರೈತರ ಪ್ರಶ್ನೆ ಮಾತ್ರ ಒಂದೇ… ಕಬ್ಬಿಗೆ ಸೂಕ್ತ ಬೆಲೆ ಯಾವಾಗ?
ಕೃಷಿಗೆ ಬೇಕಾದ ಗೊಬ್ಬರ, ವಿದ್ಯುತ್, ನೀರು, ಕಾರ್ಮಿಕರ ವೆಚ್ಚ ಸೇರಿದಂತೆ ಎಲ್ಲವೂ ದುಬಾರಿಯಾಗುತ್ತಿರುವ ಸಂದರ್ಭದಲ್ಲಿ ಕಬ್ಬಿಗೆ ನ್ಯಾಯಯುತ ಬೆಲೆ ಸಿಗದಿದ್ದರೆ ರೈತರು ಸಂಕಷ್ಟಕ್ಕೆ ಸಿಲುಕುತ್ತಾರೆ. ಕಬ್ಬಿನ ಬೆಲೆ ಹೆಚ್ಚಿಸಬೇಕು, ಸಕ್ಕರೆಗೆ ಕನಿಷ್ಠ ಮಾರಾಟ ಬೆಲೆ ಹೆಚ್ಚಿಸಬೇಕು, ಸ್ವಾಮಿನಾಥನ್ ಆಯೋಗದ ಶಿಫಾರಸುಗಳನ್ನು ಜಾರಿಗೊಳಿಸಬೇಕು ಹಾಗೂ ರೈತರ ಹಿತಾಸಕ್ತಿಗಳನ್ನು ರಕ್ಷಿಸಬೇಕು ಎಂಬುದು ಹೋರಾಟಗಾರರ ಪ್ರಮುಖ ಆಗ್ರಹವಾಗಿದೆ.
ಕಬ್ಬು ಬೆಳೆಗಾರರು ಪ್ರತಿ ಟನ್ ಕಬ್ಬಿಗೆ 5,500 ರೂಪಾಯಿ ಬೆಲೆ ನೀಡಬೇಕು, ಸಕ್ಕರೆಯ ಕನಿಷ್ಠ ಮಾರಾಟ ಬೆಲೆಯನ್ನು ಪ್ರತಿ ಕೆ.ಜಿ.ಗೆ 60 ರೂಪಾಯಿಗೆ ಹೆಚ್ಚಿಸಬೇಕು ಎಂಬ ಬೇಡಿಕೆಗಳನ್ನೂ ಮುಂದಿಟ್ಟಿದ್ದಾರೆ. ಕಬ್ಬಿನ ತೂಕ, ಸಕ್ಕರೆ ಇಳುವರಿ ಲೆಕ್ಕಾಚಾರ ಮತ್ತು ಕಬ್ಬಿನ ಹಣ ಪಾವತಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ರೈತ ಸಂಘಟನೆಗಳು ಆಗ್ರಹಿಸುತ್ತಿವೆ.
ದೆಹಲಿಯ ಸಭೆ ವಿಫಲ – ಕೇಂದ್ರದಿಂದ ಸಮಿತಿ ಪ್ರಸ್ತಾವನೆ
ರೈತರ ಪ್ರತಿಭಟನೆ ತೀವ್ರಗೊಳ್ಳುತ್ತಿರುವ ನಡುವೆಯೇ ಕೇಂದ್ರ ಸರ್ಕಾರದ ಕಡೆಯಿಂದಲೂ ಬೆಳವಣಿಗೆ ನಡೆದಿದೆ. ರೈತರ ಪ್ರತಿನಿಧಿಗಳು ಮತ್ತು ಕೇಂದ್ರ ಸಚಿವರ ನಡುವೆ ನಡೆದ ಸಭೆಯಲ್ಲಿ ತಕ್ಷಣದ ಬೆಲೆ ನಿರ್ಧಾರ ಹೊರಬೀಳದಿದ್ದರೂ, ರೈತರ ಸಮಸ್ಯೆಗಳನ್ನು ಪರಿಶೀಲಿಸಲು ಜಂಟಿ ಸಮಿತಿ ರಚಿಸುವ ಪ್ರಸ್ತಾವನೆಯನ್ನು ಕೇಂದ್ರ ಮುಂದಿಟ್ಟಿದೆ. ಕಬ್ಬಿಗೆ ರಾಜ್ಯ ಸಲಹಾ ಬೆಲೆ ನಿಗದಿ ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವೂ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಸೂಚಿಸಿದೆ.
ಆದರೆ ಸಮಿತಿ ರಚನೆಯ ಭರವಸೆ ಮಾತ್ರದಿಂದ ರೈತರ ಬೇಡಿಕೆಗಳು ಈಡೇರಿದಂತಾಗುವುದಿಲ್ಲ ಎಂಬುದು ಪ್ರತಿಭಟನಾಕಾರರ ನಿಲುವು. ಬೆಲೆ ನಿಗದಿ ಸೇರಿದಂತೆ ಪ್ರಮುಖ ಬೇಡಿಕೆಗಳಿಗೆ ಸ್ಪಷ್ಟ ನಿರ್ಧಾರ ಹೊರಬೀಳಬೇಕು, ಇಲ್ಲದಿದ್ದರೆ ಹೋರಾಟ ಮುಂದುವರಿಯಲಿದೆ ಎಂಬ ಎಚ್ಚರಿಕೆಯನ್ನು ರೈತ ಸಂಘಟನೆಗಳು ನೀಡಿವೆ.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ರೈತರು ಪ್ರತಿಭಟನೆ ಹಿಂಪಡೆಯುವಂತೆ ಮನವಿ ಮಾಡಿದ್ದು, ಸರ್ಕಾರ ರೈತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಿದೆ ಎಂದು ಭರವಸೆ ನೀಡಿದ್ದಾರೆ. ಆದರೆ ರೈತರು ಕೇಳುತ್ತಿರುವುದು ಭರವಸೆಯಲ್ಲ, ತಮ್ಮ ಬೆಳೆಗೆ ನ್ಯಾಯಯುತ ಬೆಲೆ ಎಂಬುದೇ ಅವರ ವಾದ.
ರೈತರ ಬೆಂಬಲಕ್ಕೆ ದಿಂಗಾಲೇಶ್ವರ ಶ್ರೀಗಳು
ಇತ್ತ ರೈತರ ಹೋರಾಟಕ್ಕೆ ಮಠಾಧೀಶರ ಬೆಂಬಲವೂ ವ್ಯಕ್ತವಾಗಿದೆ. ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಫಕೀರ ದಿಂಗಾಲೇಶ್ವರ ಮಹಾಸ್ವಾಮಿಗಳು ರೈತರ ಸಂಕಷ್ಟದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾವು ಕೂಡ 15 ವರ್ಷ ಕಬ್ಬು ಬೆಳೆದಿದ್ದು, ರೈತರ ಕಷ್ಟ ಏನೆಂಬುದು ತಮಗೆ ಗೊತ್ತಿದೆ ಎಂದು ಹೇಳಿರುವ ಶ್ರೀಗಳು, ರೈತರು ಉರಿ ಬಿಸಿಲಿನಲ್ಲಿ ಕುಟುಂಬವನ್ನು ಬಿಟ್ಟು ರಸ್ತೆ ಮೇಲೆ ಕುಳಿತು ಹೋರಾಟ ನಡೆಸುತ್ತಿರುವುದು ಮಾನವೀಯತೆ ತಲೆತಗ್ಗಿಸುವ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಪೆಟ್ರೋಲ್ ಸೇರಿದಂತೆ ಇತರ ವಸ್ತುಗಳ ಬೆಲೆ ಹೆಚ್ಚಿಸುವ ಸರ್ಕಾರಗಳು ರೈತರ ಬೆಳೆಗಳಿಗೆ ನ್ಯಾಯಯುತ ಬೆಲೆ ನೀಡಲು ಏಕೆ ಹಿಂದೇಟು ಹಾಕುತ್ತಿವೆ ಎಂದು ಪ್ರಶ್ನಿಸಿದ್ದಾರೆ. ಸ್ವಾಮಿನಾಥನ್ ವರದಿಯನ್ನು ಜಾರಿಗೊಳಿಸಬೇಕು, ರೈತರ ವಿಚಾರದಲ್ಲಿ ರಾಜಕಾರಣ ಮಾಡಬಾರದು ಎಂದು ಆಗ್ರಹಿಸಿದ್ದಾರೆ.
ಕೇಂದ್ರ ಸರ್ಕಾರ ಹಾಗೂ ಸಚಿವರ ವಿರುದ್ಧ ವಾಗ್ದಾಳಿ ನಡೆಸಿದ ಶ್ರೀಗಳು, ರೈತರ ಬೇಡಿಕೆ ಈಡೇರಿಸಲು ಸಾಧ್ಯವಾಗದಿದ್ದರೆ ರಾಜೀನಾಮೆ ನೀಡಿ ಎಂದು ಸವಾಲು ಹಾಕಿದ್ದಾರೆ. ರೈತರ ಹೋರಾಟಕ್ಕೆ ರಾಜ್ಯದ ಮಠಾಧೀಶರು, ಸಾಹಿತಿಗಳು ಹಾಗೂ ಸಿನಿಮಾ ನಟ-ನಟಿಯರು ಬೆಂಬಲ ನೀಡಬೇಕು ಎಂದು ಕರೆ ನೀಡಿದ್ದಾರೆ.
ರೈತನಿಗೆ ನ್ಯಾಯ ಸಿಗುವವರೆಗೆ ಸಕ್ಕರೆ ತಿನ್ನುವುದಿಲ್ಲ!
ಇದು ದಿಂಗಾಲೇಶ್ವರ ಶ್ರೀಗಳು ಮಾಡಿದ ಪ್ರತಿಜ್ಞೆ. ರೈತರ ಸಂಕಷ್ಟಕ್ಕೆ ಸ್ಪಂದಿಸುವ ಉದ್ದೇಶದಿಂದ ಸಕ್ಕರೆ ತಿನ್ನುವುದನ್ನು ತ್ಯಜಿಸುವುದಾಗಿ ಘೋಷಿಸಿರುವ ಶ್ರೀಗಳು, ರೈತರು ಆತ್ಮಹತ್ಯೆಯಂತಹ ತೀವ್ರ ನಿರ್ಧಾರಕ್ಕೆ ಮುಂದಾಗದೆ ಧೈರ್ಯದಿಂದ ಹೋರಾಟ ಮುಂದುವರಿಸಬೇಕು ಎಂದು ಮನವಿ ಮಾಡಿದ್ದಾರೆ.
ರಾಜ್ಯ ಸರ್ಕಾರ ಒಂದು ವರ್ಷದ ಮಟ್ಟಿಗಾದರೂ ಗ್ಯಾರಂಟಿ ಯೋಜನೆಗಳನ್ನು ಸ್ಥಗಿತಗೊಳಿಸಿ, ಆ ಹಣವನ್ನು ರೈತರ ನೆರವಿಗೆ ಬಳಸುವ ಪ್ರಸ್ತಾವನೆ ಮುಂದಿಡಬೇಕು ಎಂಬ ಅಭಿಪ್ರಾಯವನ್ನೂ ಶ್ರೀಗಳು ವ್ಯಕ್ತಪಡಿಸಿದ್ದಾರೆ. ಇದು ವ್ಯಕ್ತಿಯ ವಿರುದ್ಧದ ಹೋರಾಟವಲ್ಲ, ರೈತರಿಗೆ ನ್ಯಾಯ ಒದಗಿಸದ ವ್ಯವಸ್ಥೆಯ ವಿರುದ್ಧದ ಹೋರಾಟ ಎಂದು ಸ್ಪಷ್ಟಪಡಿಸಿದ್ದಾರೆ.
ಒಟ್ಟಿನಲ್ಲಿ, ನಿನ್ನೆ ಆರಂಭವಾದ ಕಬ್ಬು ಬೆಳೆಗಾರರ ಹೋರಾಟ ಇಂದಿಗೂ ಮುಂದುವರಿದಿದ್ದು, ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಪ್ರತಿಭಟನೆಯ ಕಿಚ್ಚು ತೀವ್ರಗೊಂಡಿದೆ. ರಾಷ್ಟ್ರೀಯ ಹೆದ್ದಾರಿ ಬಂದ್ನಿಂದ ವಾಹನ ಸಂಚಾರಕ್ಕೆ ಅಡಚಣೆಯಾಗಿದ್ದರೆ, ಮತ್ತೊಂದೆಡೆ ರೈತರ ಹೋರಾಟಕ್ಕೆ ದಿಂಗಾಲೇಶ್ವರ ಶ್ರೀಗಳ ಬೆಂಬಲ ಹೊಸ ಆಯಾಮ ನೀಡಿದೆ.
ಕೇಂದ್ರ ಸರ್ಕಾರ ಸಮಿತಿ ರಚನೆಯ ಪ್ರಸ್ತಾವನೆ ಮುಂದಿಟ್ಟಿದೆ. ಆದರೆ ರೈತರು ನಿರೀಕ್ಷಿಸುತ್ತಿರುವುದು ಕಬ್ಬಿಗೆ ನ್ಯಾಯಯುತ ಬೆಲೆ ಮತ್ತು ತಮ್ಮ ಬೇಡಿಕೆಗಳಿಗೆ ಸ್ಪಷ್ಟ ಪರಿಹಾರ. ಸರ್ಕಾರಗಳ ಮುಂದಿನ ನಿರ್ಧಾರವೇ ಹೋರಾಟದ ದಿಕ್ಕನ್ನು ನಿರ್ಧರಿಸಲಿದೆ.
ಅನ್ನದಾತನ ಆಕ್ರೋಶಕ್ಕೆ ಸರ್ಕಾರ ಸ್ಪಂದಿಸುತ್ತಾ? ಕಬ್ಬು ಬೆಳೆಗಾರರ ಬೇಡಿಕೆಗಳಿಗೆ ನ್ಯಾಯ ಸಿಗುತ್ತಾ? ರೈತರ ಹೋರಾಟ ಯಾವ ತಿರುವು ಪಡೆದುಕೊಳ್ಳಲಿದೆ?
ಈಗ ಎಲ್ಲರ ಚಿತ್ತ ಸರ್ಕಾರಗಳ ಮುಂದಿನ ನಿರ್ಧಾರದತ್ತ.
ಸಂಗಮೇಶ್ ಸತ್ತಿಗೇರಿ, ಕರ್ನಾಟಕ ಟಿವಿ, ಹುಬ್ಬಳ್ಳಿ




