JDS ಆಫೀಸಿನಲ್ಲಿ ಕೆಲಸ ಮಾಡುತ್ತಿದ್ದ ಯುವಕನ ಬಂಧನ: ಟಾರ್ಗೆಟ್ ಮಾಡುತ್ತಿದ್ದೀರಿ ಎಂದು ಹೆಚ್ಡಿಕೆ ಆಕ್ರೋಶ

Political News: ಇಂದು ಬೆಳಿಗ್ಗೆ ಜೆಡಿಎಸ್ ಆಫೀಸಿನಲ್ಲಿ ಕೆಲಸ ಮಾಡುತ್ತಿದ್ದ ಯುವಕನನ್ನು ಪೋಲೀಸರು ಕರೆದ`ಯ್ದಿದ್ದು, ಆತನಿಂದ ಆತನ ಪತ್ನಿಗೆ ಕಾಲ್ ಮಾಡಿಸಿ, ನನಗೆ ಪೋಲೀಸರು ಬಂಧಿಸಿದ್ದಾರೆ ಎಂದಷ್ಟೇ ಹೇಳಿಸಿ, ಕಾಲ್ ಕಟ್ ಮಾಡಿಸಿದ್ದಾರೆಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.

ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಬರೆದು, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಹೆಚ್ಡಿಕೆ,  ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು, ಎಂಟು ವರ್ಷಗಳಿಗೂ ಹೆಚ್ಚುಕಾಲ ರಾಜ್ಯವನ್ನು ಆಳಿದ ಮಾಜಿ ಮುಖ್ಯಮಂತ್ರಿ ವರ್ಚಸ್ಸಿಗೆ ಹನಿಟ್ರ್ಯಾಪ್ ಹೆಸರಿನಲ್ಲಿ ಮಸಿ ಬಳಿಯಲು ರೂಪಿಸಿದ ವ್ಯವಸ್ಥಿತ, ಸಂಘಟಿತ ಷಡ್ಯಂತ್ರವನ್ನು ಪ್ರಶ್ನಿಸಿದ್ದಕ್ಕೆ ನನ್ನನ್ನು ಹಾಗೂ ನನ್ನ ಜೊತೆಗಿರುವ ಹುಡುಗರನ್ನು ಟಾರ್ಗೆಟ್ ಮಾಡುತ್ತಿರುವುದು ಲಜ್ಜೆಗೆಡಿತನ ಎಂದು ಕಿಡಿಕಾರಿದ್ದಾರೆ.

ಯಾವುದೇ ಪ್ರಕರಣ ದಾಖಲಿಸದೇ ಇಂದು ಬೆಳಗ್ಗೆ ಜನತಾದಳ ಸಾಮಾಜಿಕ ಜಾಲತಾಣ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಶಂಕರ್ ಎಂಬ ಯುವಕನನ್ನು ಪೊಲೀಸರು ಕರೆದುಕೊಂಡು ಹೋಗಿದ್ದಾರೆ. ನಂತರ ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ಪಕ್ಷದ ಕಾನೂನು ವಿಭಾಗ ದೂರು ದಾಖಲಿಸಿದ ಮೇಲೆ ಆ ಯುವಕನಿಂದ ಆತನ ಪತ್ನಿಗೆ ಕರೆ ಮಾಡಿಸಿ, “ಸಿಸಿಬಿ ಪೊಲೀಸರು ನನ್ನನ್ನು ಕರೆದುಕೊಂಡು ಹೋಗಿದ್ದಾರೆ” ಎಂದಷ್ಟೇ ಹೇಳಿಸಿ ಕರೆ ಕಟ್ ಮಾಡಿದ್ದೀರಿ! ಸಾಕು ಮಾಡಿ ನಿಮ್ಮ ಕಪಟ ನಾಟಕ. ಯಾವ ಆಧಾರದ ಮೇಲೆ ಆತನನ್ನು ಕರೆದುಕೊಂಡು ಹೋಗಿದ್ದೀರಿ? ಎಂದು ಹೆಚ್ಡಿಕೆ ಪೋಲೀಸರ ವರ್ತನೆಯನ್ನು ಪ್ರಶ್ನಿಸಿದ್ದಾರೆ.

ಸಿದ್ದರಾಮಯ್ಯ ಅವರ ವಿರುದ್ಧ ಸ್ಟಿಂಗ್ ಮಾಡಿ, ದೃಶ್ಯಗಳನ್ನು ಚಿತ್ರೀಕರಿಸಿ ಅವರ ಚಾರಿತ್ರ್ಯಹರಣಕ್ಕೆ ಕಾರಣನಾದ ನೀಚನನ್ನು ಬಿಟ್ಟು, ಆ ನೀಚತನವನ್ನು ಪ್ರಶ್ನಿಸಿದ ನನ್ನನ್ನು ನೇರವಾಗಿ ಎದುರಿಸಲಾಗದೆ ನನ್ನ ಹುಡುಗರ ಬೆನ್ಹತ್ತಿದ್ದೀರಿ! ಎಲ್ಲವನ್ನೂ ರೆಕಾರ್ಡ್ ಮಾಡಿದ ‘ಮಾಧ್ಯಮದ ಮುಸುಕು’ ಹಾಕಿಕೊಂಡಿರುವ ಆ ‘ಸಂಚುಕೋರ’ ರಾಜಾರೋಷವಾಗಿ ತಿರುಗಾಡುತ್ತಿದ್ದರೆ, ಆ ನೈಜ ಅಪರಾಧಿಯನ್ನು ಬಿಟ್ಟು ನಮ್ಮ ಸೋಶಿಯಲ್ ಮೀಡಿಯಾ ಹುಡುಗರ ಮೇಲೆ ಬಿದ್ದಿದ್ದೀರಿ.

ಪ್ರಶ್ನೆ ಮಾಡಿದ್ದು ನಾನು. ಸಿಬಿಐ ತನಿಖೆಗೆ ಒತ್ತಾಯಿಸಿದ್ದು ನಾನು. ಧೈರ್ಯವಿದ್ದರೆ ನನ್ನ ಬಳಿಗೇ ನಿಮ್ಮ ಪೊಲೀಸರನ್ನು ಕಳಿಸಬೇಕಿತ್ತು, ಅಮಾಯಕರ ಮೇಲೇನು ನಿಮ್ಮ ಪ್ರತಾಪ.. ಎಂದು ಹೆಚ್ಡಿಕೆ ವಾಗ್ದಾಳಿ ನಡೆಸಿದ್ದಾರೆ.

ಅಷ್ಟೇ ಅಲ್ಲ, ಈಗ ನಮ್ಮ ಸೋಶಿಯಲ್ ಮೀಡಿಯಾ ತಂಡದ ಮೋಹನ್ ಎಂಬ ಇನ್ನೊಬ್ಬ ಹುಡುಗನ ಮನೆ ಮುಂದೆ ಹೋಗಿ ಪೊಲೀಸರು ಗಲಾಟೆ ಮಾಡುತ್ತಿದ್ದಾರೆ, ಅವರ ಕುಟುಂಬದವರಿಗೆ ಕಿರುಕುಳ ಕೊಡುತ್ತಿದ್ದಾರೆ ಎಂಬ ಮಾಹಿತಿ ನನಗೆ ಬಂದಿದೆ. ಇದೆಲ್ಲವನ್ನೂ ಸಹಿಸುವ ಪ್ರಶ್ನೆಯೇ ಇಲ್ಲ. ನಮ್ಮವರಿಗೆ ಹೀಗೆ ಸುಖಾಸುಮ್ಮನೆ ಕಿರುಕುಳ ಕೊಟ್ಟರೆ ಕೈಕಟ್ಟಿ ಕೂರುವುದಿಲ್ಲ ನಾವು. ರಾಜಕೀಯವಾಗಿ ಮತ್ತು ಕಾನೂನಾತ್ಮಕವಾಗಿ ಎದುರಿಸಲು ಸಿದ್ಧರಿದ್ದೇವೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಸವಾಲ್ ಹಾಕಿದ್ದಾರೆ.

About The Author