Political News: ರಾಜ್ಯ ರಾಜಕರಾಣದಲ್ಲಿ ಸದ್ಯ ಸ್ಟಿಂಗ್ ಆಪರೇಷನ್ದ್ದೇ ಚರ್ಚೆ ಜೋರಾಗಿದೆ. ಕಾಂಗ್ರೆಸ್-ಜೆಡಿಎಸ್-ಬಿಜೆಪಿ ನಾಯಕರು ಪರಸ್ಪರ ವಾಗ್ದಾಳಿ ನಡೆಸುತ್ತಿದ್ದು, ಬಿಜೆಪಿ-ಜೆಡಿಎಸ್ ನಾಯಕರು ಸೇರಿ ಕಾಂಗ್ರೆಸ್ನವರಿಗೆ ಕಾಂಗ್ರೆಸ್ಸಿಗರೇ ಸ್ಟಿಂಗ್ ಆಪರೇಷನ್ ಮಾಡಿಸಿ, ಮೋಸ ಮಾಡುತ್ತಿದ್ದಾರೆ. ಅಧಿಕಾರದಿಂದ ಕೆಳಗಿಳಿಸುತ್ತಿದ್ದಾರೆ. ಹೆದರಿಸುತ್ತಿದ್ದಾರೆಂದು ಆರೋಪಿಸುತ್ತಿದ್ದಾರೆ.
ಈ ನಡುವೆ ಬಿಜೆಪಿ ನಾಯಕ ಛಲವಾದಿ ನಾರಾಯಣಸ್ವಾಮಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದು, “ಕಾಂಗ್ರೆಸ್ ಪಕ್ಷವೇ ಒಂದು ‘ಸ್ಟಿಂಗ್ ಆಪರೇಷನ್ ಕಾರ್ಖಾನೆ’! ಆಡಿಯೋ-ವೀಡಿಯೋಗಳನ್ನು ತಯಾರಿಸುವುದೇ ಇವರ ಕೆಲಸ.” ಎಂದು ಕಿಡಿಕಾರಿದ್ದಾರೆ.
ನನ್ನನ್ನೇ ಸ್ಟಿಂಗ್ ಆಪರೇಷನ್ ಮಾಡಲು ಬಂದಿದ್ದರು ಎಂದು ಅಸಹಾಯಕರಂತೆ ಹೇಳಿಕೆ ನೀಡುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೇ, ಆ ರೀತಿ ಬಂದವರನ್ನು ಒದ್ದು ಒಳಗೆ ಹಾಕುವ ಅಧಿಕಾರ ನಿಮಗಿರಲಿಲ್ಲವೇ? ಇದು ಬ್ಲ್ಯಾಕ್ಮೇಲ್ ತಂತ್ರವೋ ಅಥವಾ ಸತ್ಯವೋ ಎಂಬುದು ಹೊರಬರಲು ಕೂಡಲೇ ಈ ಪ್ರಕರಣವನ್ನು ಸಿಬಿಐ (CBI) ತನಿಖೆಗೆ ಒಪ್ಪಿಸಿ ಎಂದು ಛಲವಾದಿ ಆಗ್ರಹಿಸಿದ್ದಾರೆ.
ರಾಜ್ಯದಲ್ಲಿ ಆಡಳಿತ ಯಂತ್ರ ಹಾಗೂ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಅಧಿಕಾರ ತ್ಯಾಗ ಮಾಡಿ ಮನೆಯಲ್ಲಿರುವ ಮಾಜಿ ಸಿಎಂ ಸಿದ್ದರಾಮಯ್ಯನವರನ್ನೂ ನೆಮ್ಮದಿಯಾಗಿರಲು ಬಿಡದೆ ಅವರ ವೀಡಿಯೊವನ್ನೂ ಹೊರಬಿಟ್ಟಿದ್ದೀರಿ. ಗೃಹ ಇಲಾಖೆ ಬಿಟ್ಟು ಬೇರೆಲ್ಲಾ ಮಾಡುವ ಗೃಹ ಸಚಿವರು ಯಾವ ಗ್ರಹದಲ್ಲಿ ಬಚ್ಚಿಟ್ಟುಕೊಂಡಿದ್ದಾರೆ ಎಂಬುದೇ ತಿಳಿಯುತ್ತಿಲ್ಲ! ಎಂದು ಛಲವಾದಿ ನಾರಾಯಣಸ್ವಾಮಿ ವ್ಯಂಗ್ಯವಾಡಿದ್ದಾರೆ.




