​ವೋಟರ್ ಲಿಸ್ಟ್‌ನಲ್ಲಿ ನಿಮ್ಮ ಹೆಸರಿದೆಯಾ? ಮೊಬೈಲ್‌ನಲ್ಲಿ ಹೀಗೆ ಚೆಕ್ ಮಾಡಿ

ದೇಶದಲ್ಲಿ ಎಸ್‌ಐಆರ್ ಪ್ರಕ್ರಿಯೆ ಬಿರುಸಿನಿಂದ ಸಾಗುತ್ತಿರುವ ಹಾಗೂ ವಿವಿಧ ಚುನಾವಣೆಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮತದಾನದ ಹಕ್ಕಿಗೆ ಮತ್ತೊಮ್ಮೆ ಅತ್ಯುನ್ನತ ಮಹತ್ವ ಬಂದಿದೆ. ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇನ್ನೂ ಜೀವಂತವಾಗಿದೆಯೇ ಅಥವಾ ಅಳಿಸಿಹಾಕಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಪ್ರತಿ ನಾಗರಿಕನ ಕರ್ತವ್ಯವಾಗಿದೆ.

ಅದರಲ್ಲೂ ಯಾವುದೇ ಇಂಟರ್ನೆಟ್ ಅಥವಾ ಆ್ಯಪ್‌ಗಳ ಗೊಂದಲವಿಲ್ಲದೆ, ಕೇವಲ ನಿಮ್ಮ ಮೊಬೈಲ್‌ನಿಂದ ಒಂದೇ ಒಂದು ಎಸ್‌ಎಂಎಸ್ ಕಳುಹಿಸುವ ಮೂಲಕ ನಿಮ್ಮ ಮತದಾರರ ಪಟ್ಟಿಯ ವಿವರಗಳನ್ನು ಕ್ಷಣಾರ್ಧದಲ್ಲಿ ಹೇಗೆ ಪಡೆಯಬಹುದು ಎಂಬ ಪ್ರಮುಖ ಮಾಹಿತಿ ಇಲ್ಲಿದೆ.
ಎಸ್ ‘ನಿಮ್ಮ ಮೊಬೈಲ್ ಮೂಲಕ SMS ಕಳುಹಿಸಿ ಪರಿಶೀಲಿಸುವುದು ಹೇಗೆ ಎಂಬುದನ್ನು ನೋಡುವುದಾದರೆ – ಮೊದಲು ನಿಮ್ಮ ಮೊಬೈಲ್‌ನ ಮೆಸೇಜ್‌ ಬಾಕ್ಸ್ ತೆರೆಯಿರಿ.

ಅಲ್ಲಿ ದೊಡ್ಡ ಅಕ್ಷರದಲ್ಲಿ ESI ಎಂದು ಟೈಪ್ ಮಾಡಿ, ಒಂದು ಸ್ಪೇಸ್ ನೀಡಿ, ನಂತರ ನಿಮ್ಮ ಮತದಾರರ ಗುರುತಿನ ಚೀಟಿಯ ಸಂಖ್ಯೆಯನ್ನು ನಮೂದಿಸಿ. ಈ ಸಂದೇಶವನ್ನು 1950 ಎನ್ನುವ ಅಧಿಕೃತ ಸಂಖ್ಯೆಗೆ ಕಳುಹಿಸಿ. ಸಂದೇಶ ಕಳುಹಿಸಿದ ಕೆಲವೇ ಕ್ಷಣಗಳಲ್ಲಿ ಚುನಾವಣಾ ಆಯೋಗದಿಂದ ಪ್ರತಿಕ್ರಿಯೆ ಬರಲಿದ್ದು, ಅದರಲ್ಲಿ ನಿಮ್ಮ ಹೆಸರು, ಮತಗಟ್ಟೆ, ಕ್ಷೇತ್ರ ಮತ್ತು ಪಟ್ಟಿಯಲ್ಲಿನ ಕ್ರಮಸಂಖ್ಯೆಯ ಸಂಪೂರ್ಣ ವಿವರಗಳು ಲಭ್ಯವಾಗಲಿವೆ.

ಒಂದು ವೇಳೆ ಯಾವುದೇ ಪ್ರತಿಕ್ರಿಯೆ ಬರದಿದ್ದರೆ, ನಿಮ್ಮ ಹತ್ತಿರದ ಬೂತ್ ಮಟ್ಟದ ಅಧಿಕಾರಿ ಅಂದರೆ BLO ಅವರನ್ನು ಸಂಪರ್ಕಿಸುವುದು ಸೂಕ್ತ. ಇನ್ನು ಆನ್‌ಲೈನ್ ಮೂಲಕ ಪರಿಶೀಲಿಸಲು ಇಚ್ಛಿಸುವವರು, ಭಾರತೀಯ ಚುನಾವಣಾ ಆಯೋಗದ ಅಧಿಕೃತ ವೆಬ್‌ಸೈಟ್ ಆದ voters.eci.gov.in ಪೋರ್ಟಲ್‌ಗೆ ಭೇಟಿ ನೀಡಬಹುದು. ಅಲ್ಲಿ ನಿಮ್ಮ ವೋಟರ್ ಐಡಿ ಸಂಖ್ಯೆ, ವೈಯಕ್ತಿಕ ವಿವರಗಳು ಅಥವಾ ಮೊಬೈಲ್ ಸಂಖ್ಯೆಯನ್ನು ನಮೂದಿಸಿ, ಕ್ಯಾಪ್ಚಾ ಕೋಡ್ ಹಾಕಿ ‘Search’ ಮಾಡಿದರೆ ನಿಮ್ಮ ಸಂಪೂರ್ಣ ಮಾಹಿತಿ ಪರದೆಯ ಮೇಲೆ ಮೂಡುತ್ತದೆ.

ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಸುರಕ್ಷಿತವಾಗಿದೆಯೇ ಎಂಬುದನ್ನು ಇಂದೇ ಪರಿಶೀಲಿಸಿಕೊಳ್ಳಿ, ಒಂದು ವೇಳೆ ಹೆಸರು ಬಿಟ್ಟುಹೋಗಿದ್ದರೆ ತಕ್ಷಣವೇ ಅಗತ್ಯ ತಿದ್ದುಪಡಿ ಅಥವಾ ನೋಂದಣಿಗೆ ಮುಂದಾಗಿ.

About The Author