ಕಾಲುವೆಗೆ ನೀರು‌ ಹರಿಸಲು ನಿರ್ಧಾರ – ಸಚಿವ ಶಿವರಾಜ್ ತಂಗಡಗಿ!

ತುಂಗಭದ್ರಾ ಅಣೆಕಟ್ಟೆಯಿಂದ ರಾಯಚೂರು, ಕೊಪ್ಪಳ, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಿಗೆ ಕುಡಿಯುವ ನೀರು ಮತ್ತು ನಿಂತ ಬೆಳೆಗಳ ರಕ್ಷಣೆಗಾಗಿ ನವೆಂಬರ್ 20ರವರೆಗೆ ನೀರು ಒದಗಿಸಲು ನಿರ್ಧರಿಸಲಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಹಾಗೂ ನೀರಾವರಿ ಸಲಹಾ ಸಮಿತಿ ಅಧ್ಯಕ್ಷರಾದ ಶಿವರಾಜ್ ಎಸ್. ತಂಗಡಗಿ ತಿಳಿಸಿದ್ದಾರೆ.

ವಿಕಾಸಸೌಧದಲ್ಲಿ ಸೋಮವಾರ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ತುಂಗಭದ್ರಾ ನೀರಾವರಿ ಸಲಹಾ ಸಮಿತಿಯ ಮಹತ್ವದ ಸಭೆಯ ಬಳಿಕ ಅವರು ಮಾಧ್ಯಮದೊಂದಿಗೆ ಮಾತನಾಡಿದರು. ಪ್ರಸ್ತುತ ಜಲಾಶಯದಲ್ಲಿ ಒಟ್ಟು 53 ಟಿಎಂಸಿ ನೀರು ಲಭ್ಯವಿದ್ದು, ಇದರಲ್ಲಿ ಡೆಡ್ ಸ್ಟೋರೇಜ್ 2 ಟಿಎಂಸಿ ಹಾಗೂ ಆವಿಯಾಗುವಿಕೆ 3.50 ಟಿಎಂಸಿ ಸೇರಿದೆ ಎಂದು ಅವರು ವಿವರಿಸಿದರು.

ಲಭ್ಯವಿರುವ ನೀರಿನಲ್ಲಿ ಕರ್ನಾಟಕದ ಪಾಲು 25.25 ಟಿಎಂಸಿ, ಆಂಧ್ರಪ್ರದೇಶಕ್ಕೆ 18.50 ಟಿಎಂಸಿ ಮತ್ತು ತೆಲಂಗಾಣದ ಪಾಲು 1.50 ಟಿಎಂಸಿ ಇದೆ. ಜಲಾಶಯದಲ್ಲಿರುವ ನೀರಿನ ಲಭ್ಯತೆಯನ್ನು ಸಂಪೂರ್ಣವಾಗಿ ಪರಿಗಣಿಸಿ, ಈ ನಾಲ್ಕೂ ಜಿಲ್ಲೆಗಳಿಗೆ ಕುಡಿಯುವ ನೀರು ಹಾಗೂ ರೈತರ ನಿಂತ ಬೆಳೆಗಳಿಗೆ ಅನುಕೂಲವಾಗುವಂತೆ ನೀರು ಹಂಚಿಕೆ ಮಾಡಲಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.

ತುಂಗಭದ್ರಾ ಎಡದಂಡೆ ಮುಖ್ಯಕಾಲುವೆ ಮೂಲಕ ಅಕ್ಟೋಬರ್ 21ರಿಂದ ನವೆಂಬರ್ 20ರವರೆಗೆ 3800 ಕ್ಯೂಸೆಕ್ಸ್‌ನಂತೆ ನೀರು ಹರಿಸಲಾಗುವುದು. ಹಾಗೆಯೇ ಬಲದಂಡೆ ಮೇಲ್ಮಟ್ಟದ ಮತ್ತು ಕೆಳಮಟ್ಟದ ಕಾಲುವೆಗಳಿಗೂ ಸಹ ಅಕ್ಟೋಬರ್ 21ರಿಂದ ಹಂತ ಹಂತವಾಗಿ ಅಗತ್ಯಕ್ಕೆ ತಕ್ಕಂತೆ ನೀರು ಬಿಡುಗಡೆ ಮಾಡಲು ವೇಳಾಪಟ್ಟಿ ಸಿದ್ಧಪಡಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.

ರಾಜ್ಯದಲ್ಲಿ ನೀರಿನ ಕೊರತೆ ಮತ್ತು ಬರದ ಛಾಯೆ ಇರುವುದರಿಂದ, ಸಾರ್ವಜನಿಕರಿಗೆ ಹಾಗೂ ಮೂಕಿ ಜಾನುವಾರುಗಳಿಗೆ ಕುಡಿಯುವ ನೀರು ಒದಗಿಸುವುದೇ ಸರ್ಕಾರದ ಪ್ರಥಮ ಆದ್ಯತೆಯಾಗಿದೆ. ಮುಂಬರುವ ಬೇಸಿಗೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಅತ್ಯಂತ ಎಚ್ಚರಿಕೆಯಿಂದ ಈ ನೀರು ಹಂಚಿಕೆಯ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಅವರು ಪುನರುಚ್ಚರಿಸಿದರು.

ಸಭೆಯಲ್ಲಿ ಮಾಜಿ ಸಚಿವರಾದ ಬೋಸರಾಜ್, ಬಿ. ನಾಗೇಂದ್ರ, ವಿವಿಧ ಶಾಸಕರು, ನಾಲ್ಕೂ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಹಾಗೂ ನೀರಾವರಿ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದು, ಕಾಲುವೆಗಳಿಗೆ ಸಮರ್ಪಕವಾಗಿ ನೀರು ತಲುಪಿಸುವ ಕುರಿತು ಚರ್ಚೆ ನಡೆಸಿದರು.

About The Author