Koppala: ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನದಲ್ಲಿ ನವರಾತ್ರಿ, ದಸರಾ ಮಹೋತ್ಸವದ ಸಂಭ್ರಮದ ಆಚರಣೆ

Koppala News: ಕೊಪ್ಪಳ :- ಕಲ್ಯಾಣ ಕರ್ನಾಟಕದ ಪ್ರಮುಖ ಹಾಗೂ ಸುಪ್ರಸಿದ್ಧ ಶಕ್ತಿ ಕ್ಷೇತ್ರವಾದ ಕೊಪ್ಪಳ ಜಿಲ್ಲೆಯ ಹುಲಿಗಿಯ ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನದಲ್ಲಿ ನವರಾತ್ರಿ ಮತ್ತು ದಸರಾ ಮಹೋತ್ಸವದ ಸಂಭ್ರಮದಿಂದ ಆಚರಿಸಲಾಯಿತು

ವಿಜಯದಶಮಿಯ ವಿಶೇಷ ಸಂದರ್ಭದಲ್ಲಿ ದೇವಸ್ಥಾನವು ಭಕ್ತರಿಂದ ತುಂಬಿ ತುಳುಕುತ್ತಿದ್ದು, ಭಕ್ತಿಭಾವದ ಪರಾಕಾಷ್ಠೆ ಕಂಡುಬಂದಿದೆ. ​ವಿಜಯದಶಮಿ ಪ್ರಯುಕ್ತ ಹುಲಿಗೆಮ್ಮ ದೇವಿಗೆ ವಿಧಿ-ವಿಧಾನಗಳ ಮೂಲಕ ವಿಶೇಷ ಪೂಜೆಗಳು ಜರುಗಿವೆ.

ಇದರೊಂದಿಗೆ ಚಂಡಿಕಾ ಹೋಮ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಅತ್ಯಂತ ಶ್ರದ್ಧಾಭಕ್ತಿಯಿಂದ ನೆರವೇರಿವೆ. ನಾಡಿನ ಮೂಲೆಮೂಲೆಗಳಿಂದ ಹರಿದುಬಂದ ಭಕ್ತಸಾಗರ, ತಾಯಿಯ ದರ್ಶನ ಪಡೆದು ಕೃತಾರ್ಥರಾಗಿದ್ದಾರೆ.

​ವಿಜಯದಶಮಿ ಅಂಗವಾಗಿ ಉತ್ಸವ ಮೂರ್ತಿಯ ಭವ್ಯ ಮೆರವಣಿಗೆ ಜರುಗಿತು. ಶಮಿ ವೃಕ್ಷದ ಬಳಿ ವಿಧ್ಯುಕ್ತವಾಗಿ ಶಮಿ ಪೂಜೆ ನೆರವೇರಿಸಲಾಗಿದ್ದು, ಭಕ್ತರು ತೊಟ್ಟಿಲು ಸೇವೆ ಹಾಗೂ ಮಹಾಮಂಗಳಾರತಿಯಲ್ಲಿ ಪಾಲ್ಗೊಂಡು ಧನ್ಯತಾ ಭಾವ ವ್ಯಕ್ತಪಡಿಸಿದರು.

ಕ್ಷೇತ್ರದಾದ್ಯಂತ ಮೊಳಗಿದ “ಉಧೋ… ಉಧೋ… ಹುಲಿಗೆಮ್ಮ” ಎಂಬ ಜಯಘೋಷವು ಇಡೀ ವಾತಾವರಣವನ್ನು ಭಕ್ತಿಮಯವಾಗಿಸಿತು. ​ಶಕ್ತಿ, ನಂಬಿಕೆ ಮತ್ತು ಭಕ್ತಿಯ ಸಂಗಮವಾಗಿರುವ ಹುಲಿಗಿ ಕ್ಷೇತ್ರದಲ್ಲಿ ದಸರಾ ಮಹೋತ್ಸವವು ಅತ್ಯಂತ ಸಂಭ್ರಮ ಹಾಗೂ ಸಡಗರದಿಂದ ಯಶಸ್ವಿಯಾಗಿ ಆಚರಿಸಲಾಯಿತು.

About The Author