Mysuru News: ಪ್ರಿಯಕರನ ಜತೆ ಸೇರಿ ಪತಿಗೆ ಇಡ್ಲಿಯಲ್ಲಿ ದತ್ತೂರಿ ಬೀಜದ ಪುಡಿ ಹಾಕಿ ತಿನ್ನಿಸಿ ಹತ್ಯೆ ಮಾಡಿದ ಪತ್ನಿ

Mysuru News: ಮೈಸೂರಿನ ಹುಣಸೂರಿನಲ್ಲಿ ಪ್ರಿಯಕರನ ಜತೆ ಸೇರಿದ ಪತ್ನಿ, ಪತಿ ತಿನ್ನುವ ಇಡ್ಲಿಗೆ ದತ್ತೂರಿ ಬೀಜದ ಪುಡಿ ಹಾಕಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಗಾರೆ ಕೆಲಸ ಮಾಡುತ್ತಿದ್ದ 35 ವರ್ಷದ ರಾಮ್‌ಪ್ರಸಾದ್ ಮೃತ ದುರ್ದೈವಿಯಾಗಿದ್ದಾನೆ. ಈತನ ಪತ್ನಿ ಪವಿತ್ರಾ ಮತ್ತು ಪ್ರಿಯಕರ ಸುನೀಲ್ ವಿರುದ್ಧ ಸ್ಥಳೀಯ ಪೋಲೀಸ್ ಸ್ಟೇಶನ್‌ನಲ್ಲಿ ದೂರು ದಾಖಲಾಗಿದೆ.

ಪವಿತ್ರಾ ಮತ್ತು ರಾಮ್‌ಪ್ರಸಾದ್‌ಗೆ 11 ವರ್ಷದ ಮಗ ಮತ್ತು 9 ವರ್ಷದ ಹೆಣ್ಣು ಮಗುವಿದ್ದು ಕೂಡ, ಪವಿತ್ರಾ ಸುನೀಲ್ ಎಂಬಾತನ ಜತೆ ಅಕ್ರಮ ಸಂಬಂಧದಲ್ಲಿದ್ದಳು. ಈ ವಿಚಾರಕ್ಕೆ ರಾಮ್‌ಪ್ರಸಾದ್ ಮತ್ತು ಪವಿತ್ರಾ ನಡುವೆ ಹಲವು ಬಾರಿ ಜಗಳ ನಡೆದಿತ್ತು. ಈ ಕಾರಣಕ್ಕೆ ಪತಿಯ ಹತ್ಯೆಗೆ ಪವಿತ್ರಾ ನಿರ್ಧಾರ ಮಾಡಿ ಪ್ಲಾನ್ ಮಾಡಿದ್ದಳು.

ರಾತ್ರಿ ಕುಡಿದು ಬಂದ ಪತಿಗೆ ತಿನ್ನಲು ಇಡ್ಲಿ ನೀಡಿದ್ದ ಪವಿತ್ರಾ ಅದರಲ್ಲಿ ದತ್ತೂರಿ ಬೀಜದ ಪುಡಿ ಸೇರಿಸಿದ್ದಳು. ಯೂಟ್ಯೂಬ್ ನೋಡಿ ದತ್ತೂರಿ ಬೀಜದ ಬಗ್ಗೆ ತಿಳಿದಿದ್ದ ಪವಿತ್ರಾ, ಆ ಪುಡಿ ಸೇವನೆಯಿಂದ ಸಾವು ಸಂಭವಿಸುತ್ತದೆ ಎಂದು ಅರಿತಿದ್ದಳು. ಆದರೆ ರಾಮ್‌ಪ್ರಸಾದ್ ದತ್ತೂರಿ ಪುಡಿ ಸೇವಿಸಿದರೂ, ಅರ್ಧಂಬರ್ಧ ಬದುಕುಳಿದಿದ್ದ. ಹೀಗಾದರೆ ವಿಷಯ ಎಲ್ಲೆಡೆ ತಿಳಿಯುತ್ತದೆ ಎಂದು, ಪವಿತ್ರಾ ,ಸುನೀಲ್‌ನನ್ನು ಮನೆಗೆ ಕರೆಯಿಸಿದ್ದಳು.

ಬಳಿಕ ಇಬ್ಬರೂ ಕತ್ತು ಹಿಸುಕಿ ರಾಮ್‌ಪ್ರಸಾದ್‌ನನ್ನು ಹತ್ಯೆ ಮಾಡಿದ್ದಾರೆ. ಬಳಿಕ ಸುನೀಲ್‌ನನ್ನು ವಾಪಸ್ ಕಳುಹಿಸಿ, ರಾಮ್ ಸಹೋದರ ಚಂದ್ರಹಾಸ್‌ಗೆ ಕಾಲ್ ಮಾಡಿ, ಊಟ ಮಾಡಿ ಮಲಗಿದ ರಾಮ್‌ಪ್ರಸಾದ್ ಏಳುತ್ತಿಲ್ಲ ಎಂದು ಅತ್ತಿದ್ದಾಳೆ. ಬಳಿಕ ಆಕೆಯ ಮಾತು ನಂಬಿದ ಮನೆಯವರು ರಾಮ್‌ಪ್ರಸಾದ್ ಅಂತ್ಯಕ್ರಿಯೆ ಮಾಡಿ ಮುಗಿಸಿದ್ದಾರೆ.

ಬಳಿಕ ಚಂದ್ರಹಾಸ್‌ ಬಳಿ ಸ್ಥಳೀಯರು, ಸಹೋದರ ಮೃತನಾದ ದಿನ ಸುನೀಲ್ ಮನೆಯ ಬಳಿ ಬಂದಿದ್ದನೆಂದು ಮಾಹಿತಿ ನೀಡಿದ್ದಾರೆ. ಅನುಮಾನ ಬಂದ ಚಂದ್ರಹಾಸ ಈ ಬಗ್ಗೆ ದೂರು ನೀಡಿದ್ದು, ಆರೋಪಿಗಳ ಬಂಧನದ ಬಳಿಕ ಸತ್ಯ ಆಚೆ ಬಂದಿದೆ.

About The Author