ಕುಂದಗೋಳ: ಮಳೆಯ ನಿರೀಕ್ಷೆಯಲ್ಲಿ ಒಣ ಮಣ್ಣಿನಲ್ಲೇ ಬಿತ್ತನೆ..! ರೈತರಲ್ಲಿ ಆತಂಕ

ಕುಂದಗೋಳ: ಆಗೋದು ಎಂದು ಕೈಲಾಗದು ಎಂದು ಕೈಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ, ಮನಸ್ಸೊಂದಿದ್ದರೆ ಮಾರ್ಗವುಂಟು..! ಎಂಬ ಹಾಡಿನ ಸಾಲುಗಳಂತೆ, ಮಳೆಯ ನಿರೀಕ್ಷೆಯಲ್ಲೂ ರೈತ ತನ್ನ ಕಾಯಕವನ್ನು ನಿಲ್ಲಿಸಿಲ್ಲ. ಹಿಂಗಾರು ಮಳೆ ಇನ್ನೂ ಸಮರ್ಪಕವಾಗಿ ಸುರಿಯದಿದ್ದರೂ ಕುಂದಗೋಳ ತಾಲೂಕಿನ ಗ್ರಾಮಗಳಲ್ಲಿ ರೈತರು ಒಣ ಮಣ್ಣಿನಲ್ಲೇ ಬಿತ್ತನೆಗೆ ಮುಂದಾಗಿದ್ದಾರೆ. ಮಳೆಯ ನಿರೀಕ್ಷೆ ಒಂದೆಡೆಯಾದರೆ, ಮಳೆ ಕೈಕೊಟ್ಟರೆ ಬಿತ್ತನೆ ಬೀಜ ಹಾಗೂ ಕೃಷಿ ವೆಚ್ಚ ವ್ಯರ್ಥವಾಗುವ ಆತಂಕ ಮತ್ತೊಂದೆಡೆ ಇದೆ.

ಕುಂದಗೋಳ ತಾಲೂಕಿನ ಗ್ರಾಮಗಳಲ್ಲಿ ಮಳೆಗಾಗಿ ಕಾಯುತ್ತಿರುವ ರೈತರು, ಮುಂದಿನ ದಿನಗಳಲ್ಲಿ ಮಳೆಯಾಗಬಹುದು ಎಂಬ ನಿರೀಕ್ಷೆಯೊಂದಿಗೆ ಕೃಷಿ ಚಟುವಟಿಕೆ ಆರಂಭಿಸಿದ್ದಾರೆ. ಭೂಮಿಯಲ್ಲಿ ತೇವಾಂಶದ ಕೊರತೆ ಇದ್ದರೂ ಹವಾಮಾನ ಮುನ್ಸೂಚನೆಯ ಹಿನ್ನೆಲೆಯಲ್ಲಿ ಜೋಳ, ಕಡಲೆ, ಕುಸುಬೆ ಸೇರಿದಂತೆ ವಿವಿಧ ಒಣ ಬೇಸಾಯದ ಬೆಳೆಗಳನ್ನು ಬಿತ್ತನೆ ಮಾಡುತ್ತಿದ್ದಾರೆ.

ಈಗಾಗಲೇ ಬರದ ಸಂಕಷ್ಟ ಎದುರಿಸಿರುವ ರೈತರಿಗೆ ಬಿತ್ತನೆಯೂ ಸವಾಲಾಗಿ ಪರಿಣಮಿಸಿದೆ. ಬಿತ್ತಿದ ಬೀಜಗಳು ಮೊಳಕೆಯೊಡೆದು ಉತ್ತಮ ಬೆಳೆ ನೀಡುತ್ತವೆಯೇ ಎಂಬ ಆತಂಕ ರೈತರನ್ನು ಕಾಡುತ್ತಿದೆ. ಮಳೆ ಕೈಕೊಟ್ಟರೆ ಬೀಜದ ವೆಚ್ಚದ ಜೊತೆಗೆ ಕೃಷಿಗಾಗಿ ಮಾಡಿದ ಖರ್ಚೂ ವ್ಯರ್ಥವಾಗುವ ಭೀತಿ ಎದುರಾಗಿದೆ.

ಇಂತಹ ಸಂಕಷ್ಟದ ಸಂದರ್ಭದಲ್ಲಿ ಬರಪೀಡಿತ ತಾಲೂಕುಗಳ ರೈತರಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಶೀಘ್ರ ಬರ ಪರಿಹಾರ ಹಾಗೂ ಬೆಳೆ ನಷ್ಟದ ನೆರವು ನೀಡಬೇಕು ಎಂದು ರೈತ ಮುಖಂಡ ಬಸವರಾಜ ಯೋಗಪ್ಪನವರ ಒತ್ತಾಯಿಸಿದ್ದಾರೆ.

ಒಣ ಮಣ್ಣಿನಲ್ಲಿ ಬಿತ್ತಿದ ಬೀಜಕ್ಕೆ ಮಳೆಯೇ ಜೀವಜಲ..! ರೈತನ ಶ್ರಮಕ್ಕೆ ಫಲ ಸಿಗಬೇಕಾದರೆ ವರುಣನ ಕೃಪೆ ಅಗತ್ಯ. ಮಳೆಯ ನಿರೀಕ್ಷೆಯಲ್ಲಿ ಬಿತ್ತನೆಗೆ ಮುಂದಾಗಿರುವ ರೈತರ ಬದುಕಿಗೆ ಮಳೆ ಕೈಹಿಡಿಯುತ್ತದೆಯೇ? ಅಥವಾ ಅನ್ನದಾತನ ಆತಂಕ ಮತ್ತಷ್ಟು ಹೆಚ್ಚಾಗುತ್ತದೆಯೇ? ಎಂಬುದನ್ನು ಕಾದು ನೋಡಬೇಕಿದೆ. ರೈತರ ಸಂಕಷ್ಟಕ್ಕೆ ಸರ್ಕಾರಗಳು ಕೂಡಲೇ ಸ್ಪಂದಿಸಬೇಕಿದೆ.

About The Author