Hubli News: ಹುಬ್ಬಳ್ಳಿಯಲ್ಲಿ ನಿಷೇಧಿತ ಮಾಂಜಾ ದಾರಕ್ಕೆ ಮಹಿಳೆಯೊಬ್ಬರು ಬಲಿಯಾದ ಬೆನ್ನಲ್ಲೇ ಪೊಲೀಸ್ ಇಲಾಖೆ ಅಲರ್ಟ್ ಆಗಿದೆ..! ಮಾಂಜಾ ದಾರ ಮಾರಾಟ ಮತ್ತು ಬಳಕೆ ವಿರುದ್ಧ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರೇಟ್ ವಿಶೇಷ ಕಾರ್ಯಾಚರಣೆ ನಡೆಸಿದೆ. ಅವಳಿ ನಗರದಲ್ಲಿ ಒಟ್ಟು 11 ಪ್ರಕರಣಗಳನ್ನು ದಾಖಲಿಸಿ, ಮಾಂಜಾ ದಾರ ಮಾರಾಟಗಾರರು ಹಾಗೂ ಬಳಕೆದಾರರಿಗೆ ಬಿಸಿ ಮುಟ್ಟಿಸಿದೆ.
ಹುಬ್ಬಳ್ಳಿಯಲ್ಲಿ ಮಾಂಜಾ ದಾರಕ್ಕೆ ಮಹಿಳೆ ಮೃತಪಟ್ಟ ಘಟನೆ ಬೆನ್ನಲ್ಲೇ ಎಚ್ಚೆತ್ತ ಪೊಲೀಸ್ ಇಲಾಖೆ, ನಿಷೇಧಿತ ಮಾಂಜಾ ದಾರ ವಿರುದ್ಧ ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ.
ಪೊಲೀಸ್ ಆಯುಕ್ತ ಭೂಷಣ್ ಬೊರಸೆ ಅವರ ಸೂಚನೆಯಂತೆ ಅವಳಿ ನಗರದಲ್ಲಿ ವಿಶೇಷ ಕಾರ್ಯಾಚರಣೆ ನಡೆಸಲಾಗಿದ್ದು, ಒಟ್ಟು 11 ಪ್ರಕರಣಗಳನ್ನು ದಾಖಲಿಸಲಾಗಿದೆ. ಮಾಂಜಾ ದಾರ ಮಾರಾಟ ಮಾಡುತ್ತಿದ್ದ 9 ಅಂಗಡಿಗಳ ಮೇಲೆ ದಾಳಿ ನಡೆಸಿ ಪ್ರಕರಣ ದಾಖಲಿಸಲಾಗಿದೆ. ಮಕ್ಕಳಿಗೆ ಮಾಂಜಾ ದಾರ ನೀಡಿದ ಓರ್ವ ಪಾಲಕ ಹಾಗೂ ಮಾಂಜಾ ದಾರ ಬಳಸಿ ಗಾಳಿಪಟ ಹಾರಿಸುತ್ತಿದ್ದ ಓರ್ವ ವ್ಯಕ್ತಿಯ ವಿರುದ್ಧವೂ ಪ್ರಕರಣ ದಾಖಲಾಗಿದೆ.
ಇನ್ನೊಂದೆಡೆ, ನಗರದ ವಿವಿಧೆಡೆ ಮರಗಳು ಹಾಗೂ ವಿದ್ಯುತ್ ತಂತಿಗಳಲ್ಲಿ ಸಿಲುಕಿಕೊಂಡಿದ್ದ ಗಾಳಿಪಟಗಳಿಗೆ ಕಟ್ಟಿದ ಅಪಾಯಕಾರಿ ಮಾಂಜಾ ದಾರಗಳು ರಸ್ತೆಗಳ ಮೇಲೆ ನೇತಾಡುತ್ತಿದ್ದವು. ಸಾರ್ವಜನಿಕರಿಗೆ ಅಪಾಯ ಉಂಟುಮಾಡುವ ಸಾಧ್ಯತೆ ಹಿನ್ನೆಲೆಯಲ್ಲಿ ವಿಶೇಷ ತಂಡಗಳನ್ನು ರಚಿಸಿ, ಇಂತಹ ದಾರಗಳನ್ನು ತೆರವುಗೊಳಿಸಲಾಗಿದೆ.
ಪ್ರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲೂ ಗಾಳಿಪಟ ಹಾರಿಸುವವರು ಹಾಗೂ ಮಾಂಜಾ ದಾರ ಮಾರಾಟ ಮಾಡುವ ಅಂಗಡಿಗಳ ಮೇಲೆ ನಿಗಾ ವಹಿಸುವಂತೆ ಪೊಲೀಸ್ ಆಯುಕ್ತರು ಸೂಚನೆ ನೀಡಿದ್ದಾರೆ.
ಠಾಣಾವಾರು ಪ್ರಕರಣಗಳ ವಿವರ ನೋಡುವುದಾದರೆ, ಕೇಶ್ವಾಪುರದಲ್ಲಿ ಒಂದು, ವಿದ್ಯಾನಗರದಲ್ಲಿ ಒಂದು, ಹುಬ್ಬಳ್ಳಿ ಶಹರದಲ್ಲಿ ಎರಡು, ಘಂಟಿಕೇರಿಯಲ್ಲಿ ಒಂದು, ವಿದ್ಯಾಗಿರಿಯಲ್ಲಿ ಒಂದು, ಹಳೇ ಹುಬ್ಬಳ್ಳಿಯಲ್ಲಿ ಎರಡು, ಗೋಕುಲ್ ರಸ್ತೆಯಲ್ಲಿ ಒಂದು, ಧಾರವಾಡ ಶಹರದಲ್ಲಿ ಒಂದು ಹಾಗೂ ಕಸಬಾಪೇಟೆಯಲ್ಲಿ ಒಂದು ಪ್ರಕರಣ ದಾಖಲಾಗಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಅಪಾಯಕಾರಿ ಮಾಂಜಾ ದಾರ ನೇತಾಡುತ್ತಿರುವುದು ಕಂಡುಬಂದರೆ, ಸಾರ್ವಜನಿಕರು 112 ತುರ್ತು ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ. ಅಪಾಯಕಾರಿ ದಾರಗಳನ್ನು ಸ್ವತಃ ತೆರವುಗೊಳಿಸಲು ಹೋಗಬಾರದು ಎಂದೂ ಎಚ್ಚರಿಕೆ ನೀಡಿದ್ದಾರೆ.
ಒಂದು ಜೀವ ಬಲಿಯಾದ ಬಳಿಕವಾದರೂ ಮಾಂಜಾ ದಾರದ ಅಪಾಯಕ್ಕೆ ಕಡಿವಾಣ ಹಾಕಲು ಪೊಲೀಸ್ ಇಲಾಖೆ ಕಾರ್ಯಾಚರಣೆ ಚುರುಕುಗೊಳಿಸಿದೆ. ಆದರೆ ಕೇವಲ ಪ್ರಕರಣ ದಾಖಲಿಸುವುದಷ್ಟೇ ಅಲ್ಲ, ನಿಷೇಧಿತ ದಾರದ ಮಾರಾಟ ಮತ್ತು ಬಳಕೆ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬರಬೇಕಿದೆ. ಸಾರ್ವಜನಿಕರೂ ಎಚ್ಚರಿಕೆ ವಹಿಸಿ, ಅಪಾಯಕಾರಿ ಮಾಂಜಾ ದಾರ ಕಂಡುಬಂದರೆ 112ಕ್ಕೆ ಮಾಹಿತಿ ನೀಡಬೇಕಿದೆ.




