ದೇಶದ ಅನ್ನದಾತರಿಗೆ ಮತ್ತೊಮ್ಮೆ ಆರ್ಥಿಕ ನೆರವು ಸಿಗಲಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶೀಘ್ರದಲ್ಲೇ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 24ನೇ ಕಂತಿನ ಹಣವನ್ನು ಬಿಡುಗಡೆ ಮಾಡಲಿದ್ದಾರೆ. ಗುಜರಾತ್ ಕೃಷಿ ಸಚಿವ ಜಿತು ವಾಘಾನಿ ಈ ಕುರಿತು ಮಾಹಿತಿ ನೀಡಿದ್ದು, ಅಕ್ಟೋಬರ್ 30 ಮತ್ತು 31ರಂದು ಗುಜರಾತ್ ಪ್ರವಾಸ ಕೈಗೊಳ್ಳಲಿರುವ ಪ್ರಧಾನಿ ಮೋದಿ, ಬನಾಸಕಾಂಠಾ ಜಿಲ್ಲೆಯ ಭೀಲ್ಡಿ ಪಟ್ಟಣದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಕಾರ್ಯಕ್ರಮದಲ್ಲಿ ಈ ಆರ್ಥಿಕ ನೆರವನ್ನು ನೇರವಾಗಿ ರೈತರ ಖಾತೆಗಳಿಗೆ ವರ್ಗಾಯಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಈ ಕಂತಿನಲ್ಲಿ ದೇಶಾದ್ಯಂತ ಇರುವ 9 ಕೋಟಿ 34 ಲಕ್ಷಕ್ಕೂ ಹೆಚ್ಚು ರೈತ ಕುಟುಂಬಗಳಿಗೆ ಒಟ್ಟು 18 ಸಾವಿರದ 680 ಕೋಟಿಗೂ ಅಧಿಕ ರೂಪಾಯಿ ತಲುಪಲಿದೆ. ಇದರಲ್ಲಿ ಗುಜರಾತ್ನ 52 ಲಕ್ಷಕ್ಕೂ ಅಧಿಕ ರೈತ ಕುಟುಂಬಗಳಿಗೆ 1 ಸಾವಿರದ 51 ಕೋಟಿ ರೂ. ಗೂ ಹೆಚ್ಚಿನ ನೆರವು ಸಿಗಲಿದೆ. ಇದೇ ವೇಳೆ, ಬನಾಸ್ ಡೈರಿ ವತಿಯಿಂದ ಎರಡು ಸಂಕುಚಿತ ಬಯೋ ಗ್ಯಾಸ್ ಘಟಕಗಳಿಗೆ ಪ್ರಧಾನಮಂತ್ರಿಯವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಅಲ್ಲದೆ, ನೂರಾರು ಕೋಟಿ ವೆಚ್ಚದ ‘ಭಾರತ್ ಬೋವೈನ್ ಬ್ರೀಡಿಂಗ್ ಅಂಡ್ ರಿಸರ್ಚ್ ಸೆಂಟರ್’ ಹಾಗೂ ಆಲೂಗಡ್ಡೆ ಸಂಸ್ಕರಣಾ ವಿಸ್ತರಣಾ ಯೋಜನೆಯನ್ನೂ ಸಹ ಉದ್ಘಾಟಿಸಲಿದ್ದಾರೆ.
ಪಿಎಂ-ಕಿಸಾನ್ ಯೋಜನೆಯಡಿ ಅರ್ಹ ರೈತರಿಗೆ ವರ್ಷಕ್ಕೆ ಮೂರು ಕಂತುಗಳಲ್ಲಿ ಒಟ್ಟು 6 ಸಾವಿರ ರೂಪಾಯಿ ನೀಡಲಾಗುತ್ತಿದ್ದು, ಇದುವರೆಗೆ ದೇಶಾದ್ಯಂತ 4 ಲಕ್ಷದ 47 ಸಾವಿರ ಕೋಟಿ ರೂ. ಗೂ ಹೆಚ್ಚು ಹಣವನ್ನು ನೇರವಾಗಿ ವಿತರಿಸಲಾಗಿದೆ. ನಾಳಿನ ಈ ವಿಶೇಷ ಕಾರ್ಯಕ್ರಮದ ನೇರ ಪ್ರಸಾರಕ್ಕೆ ದೇಶಾದ್ಯಂತ ವ್ಯಾಪಕ ವ್ಯವಸ್ಥೆ ಮಾಡಲಾಗಿದೆ.




