‘ಬ್ಯಾಲೆಟ್ ಬಾಕ್ಸ್​​ ರಾಜೀನಾಮೆ ಕೊಡು’- ಸೋಲಿನ ಬಗ್ಗೆ ಅಮಿತ್ ಶಾ ವ್ಯಂಗ್ಯ!

ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಆದ ಭಾರಿ ಹಿನ್ನಡೆಯನ್ನು ಮುಂದಿಟ್ಟುಕೊಂಡು ಬಿಜೆಪಿ ನಾಯಕರು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಜಾಲತಾಣದ ಮೂಲಕ ಕಾಂಗ್ರೆಸ್‌ನ ಚುನಾವಣಾ ಸಾಧನೆಯನ್ನು ತೀವ್ರವಾಗಿ ವ್ಯಂಗ್ಯವಾಡಿದ್ದಾರೆ.

ಎಸ್ ‘ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅಮಿತ್ ಶಾ, ನಾಲ್ಕು ರಾಜ್ಯಗಳ 28 ವಿಧಾನ ಪರಿಷತ್ ಸ್ಥಾನಗಳ ಚುನಾವಣೆಯಲ್ಲಿ ಕಾಂಗ್ರೆಸ್ ಎಷ್ಟು ಸ್ಥಾನಗಳನ್ನು ಗೆದ್ದಿದೆ ಎಂದು ಪ್ರಶ್ನಿಸಿ, ಉತ್ತರವಾಗಿ ‘0’ ಎಂದು ಉಲ್ಲೇಖಿಸಿದ್ದಾರೆ. ಅಲ್ಲದೆ “ಬ್ಯಾಲೆಟ್ ಬಾಕ್ಸ್, ರಾಜೀನಾಮೆ ಕೊಡು” ಎಂದು ವ್ಯಂಗ್ಯವಾಡಿದ್ದು, ರಾಹುಲ್ ಗಾಂಧಿಯನ್ನು ಹೋಲುವ ವ್ಯಕ್ತಿಯೊಬ್ಬರ ಫಲಕದ ಚಿತ್ರವನ್ನೂ ಹಂಚಿಕೊಂಡಿದ್ದಾರೆ.

ಉತ್ತರ ಪ್ರದೇಶ, ಮಹಾರಾಷ್ಟ್ರ, ಬಿಹಾರ ಮತ್ತು ಕರ್ನಾಟಕದಲ್ಲಿ ಒಟ್ಟು 28 ವಿಧಾನ ಪರಿಷತ್ ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಇವಿಎಂ ಬದಲು ಮತಪತ್ರಗಳ ಮೂಲಕವೇ ಈ ಚುನಾವಣೆ ನಡೆದಿದ್ದರೂ, ಆಡಳಿತದಲ್ಲಿರುವ ಕರ್ನಾಟಕ ಸೇರಿದಂತೆ ಎಲ್ಲೆಡೆ ಕಾಂಗ್ರೆಸ್‌ಗೆ ನಿರಾಶೆಯಾಗಿದೆ. ಇದು ಬಿಜೆಪಿ ನಾಯಕರಿಗೆ ಪ್ರಮುಖ ಅಸ್ತ್ರವಾಗಿದೆ.

ಚುನಾವಣಾ ಪ್ರಕ್ರಿಯೆ ಹಾಗೂ ಮತದಾರರ ಪಟ್ಟಿ ಕುರಿತು ಕಾಂಗ್ರೆಸ್ ನಿರಂತರವಾಗಿ ಪ್ರಶ್ನೆಗಳನ್ನು ಎತ್ತುತ್ತಾ ಬಂದಿದೆ. ಆದರೆ, ಮತಪತ್ರದ ಮೂಲಕ ನಡೆದ ಚುನಾವಣೆಯಲ್ಲೂ ಕಾಂಗ್ರೆಸ್‌ಗೆ ಗೆಲುವು ಸಿಗದಿದ್ದನ್ನು ಬಿಜೆಪಿ ನಾಯಕರು ಟೀಕೆಗೆ ಬಳಸಿಕೊಂಡಿದ್ದಾರೆ. ಅಮಿತ್ ಶಾ ಅವರಿಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಕೂಡ ಇದೇ ವಿಚಾರವಾಗಿ ಕಾಂಗ್ರೆಸ್ ಕಾಲೆಳೆದಿದ್ದರು. ಒಟ್ಟಿನಲ್ಲಿ, ವಿಧಾನ ಪರಿಷತ್ ಚುನಾವಣಾ ಫಲಿತಾಂಶ ಈಗ ರಾಷ್ಟ್ರ ರಾಜಕಾರಣದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ವಾಕ್ಸಮರಕ್ಕೆ ಮತ್ತಷ್ಟು ತುಪ್ಪ ಸುರಿದಂತಾಗಿದೆ.

About The Author