Bengaluru News: ಪ್ರಜ್ವಲ್ ರೇವಣ್ಣ ಅವರ ಕಾರು ಚಾಲಕನಾಗಿದ್ದ , ಅಶ್ಲೀಲ ವಿಡಿಯೋಗಳನ್ನು ಹಂಚಿದ ಆರೋಪ ಎದುರಿಸುತ್ತಿರುವ ಕಾರ್ತಿಕ್ ಮತ್ತು ಹಾಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವೆ ನೇರ ನಂಟಿದೆ ಎಂದು ಆರೋಪಿಸಿದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು, ಅದಕ್ಕೆ ಸಂಬಂಧಿಸಿದ ದಾಖಲೆಯನ್ನು ಮಾಧ್ಯಮಗೋಷ್ಠಿಯಲ್ಲಿ ಪ್ರದರ್ಶಿಸಿದರು.
ಜೆಡಿಎಸ್ ಪಕ್ಷದ ಕೇಂದ್ರ ಕಚೇರಿಯಲ್ಲಿ ಕಿಕ್ಕಿರಿದ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವರು; ಮಾಜಿ ಸಿಎಂ ವಿರುದ್ಧ ಸ್ಟಿಂಗ್ ವಿಡಿಯೋ ಹರಡಿದ ವ್ಯಕ್ತಿ ಜತೆ ನನಗೆ ಸಂಬಂಧವಿದೆ ಎಂದು ಇವರು ಆರೋಪ ಮಾಡಿದ್ದಾರೆ. ಈ ಸರ್ಕಾರಕ್ಕೆ ಮತ್ತು ರಾಜ್ಯದ ಜನತೆಗೆ ಒಂದು ಮಾಹಿತಿಯನ್ನು ತಿಳಿಸಲು ಬಯಸುತ್ತೇನೆ. ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ 2ನೇ ಆರೋಪಿ ಕಾರ್ತಿಕ್ ಜತೆ ಹಾಲಿ ಮುಖ್ಯಮಂತ್ರಿ ಸಂಬಂಧ ಹೊಂದಿದ್ದಾರೆ. ಕಾರ್ತಿಕ್ ಎನ್ನುವ ವ್ಯಕ್ತಿ ಡಿಕೆಶಿ ಮನೆಗೆ ಬಂದಿರುವ ಸಿಡಿಆರ್ ದಾಖಲೆ ನನ್ನ ಬಳಿ ಇದೆ. ಅಶ್ಲೀಲ ವಿಡಿಯೋಗಳನ್ನು ಹಂಚಿದ ಪ್ರಕರಣದಲ್ಲಿ ಕಾರ್ತಿಕ್ ಮತ್ತು ಡಿಕೆಶಿ ಇಬ್ಬರೂ ಶಾಮೀಲಾಗಿದ್ದಾರೆ ಎಂದು ಕೇಂದ್ರ ಸಚಿವರು ಗಂಭೀರ ಆರೋಪ ಮಾಡಿದರು.
ನನ್ನ ಮೇಲೆ ಆರೋಪ ಮಾಡುವ ಮುಖ್ಯಮಂತ್ರಿ, ತಾವು ಎಸಗಿರುವ ಅಕ್ರಮದ ಬಗ್ಗೆ ಏನು ಹೇಳುತ್ತಾರೆ? ಅದರ ಬಗ್ಗೆ ನಾನು ನೇರವಾಗಿ ಜನರಿಗೆ ಹೇಳಿದ್ದೇನೆ. ಈ ವ್ಯಕ್ತಿಯ ಬಗ್ಗೆ ಜನರೇ ತೀರ್ಮಾನ ಮಾಡಲಿ ಎಂದು ಸಚಿವ ಕುಮಾರಸ್ವಾಮಿ ಅವರು ಹೇಳಿದರು.
ಪ್ರಜ್ವಲ್ ರೇವಣ್ಣ ಮಾಜಿ ಚಾಲಕ ಕಾರ್ತಿಕ್ ಎಂಬಾತ ಅಶ್ಲೀಲ ವಿಡಿಯೋಗಳು ಹೊರಕ್ಕೆ ಬರುವ ಮೊದಲೇ 2023 ಆಗಸ್ಟ್ 5 ಮತ್ತು 6ರಂದು ಅಂದಿನ ಡಿಸಿಎಂ ಆಗಿದ್ದ ಡಿ.ಕೆ ಶಿವಕುಮಾರ್ ಅವರ ಮನೆಗೆ ಭೇಟಿ ನೀಡಿದ್ದರು. ಇದರ ದಾಖಲೆಗಳು ನನ್ನ ಬಳಿ ಇವೆ ನೋಡಿ ಎಂದು ಸಚಿವರು ಹೇಳಿದರು.
ಪ್ರಕರಣದ ಎರಡನೇ ಆರೋಪಿ ಕಾರ್ತಿಕ್ ಜತೆ ಹಾಲಿ ಮುಖ್ಯಮಂತ್ರಿ ಹೊಂದಿದ್ದ ಸಂಬಂಧದ ಅವರು ಉತ್ತರ ಕೊಡಲೇಬೇಕಾಗುತ್ತದೆ. ಈ ಬಗ್ಗೆ ಬಹಿರಂಗವಾಗಿ ಡಿಕೆಶಿ ಅವರು ಸ್ಪಷ್ಟೀಕರಣ ನೀಡಬೇಕು. ಪ್ರಿಯಾಂಕೆ ಪಾಸ್ ಟ್ರೇಲರ್ ಹೈ.. ಹಮಾರೇ ಪಾಸ್ ಪಿಕ್ಚರ್ ಹೈ ಎಂದ ಕುಮಾರಸ್ವಾಮಿ ಅವರು ಗುಡುಗಿದರು.
ಪೊಲೀಸ್ ಆಯುಕ್ತರು ಹೇಳಿಕೆ ಕೊಟ್ಟಿದ್ದಾರೆ. ಹೇಳಿಕೆ ಬಂದ ಮೇಲೆ ಅನೇಕ ವ್ಯಾಖ್ಯಾನಗಳು ಆಗಿವೆ. ಸ್ಟಿಂಗ್ ಆಪರೇಷನ್ ಕುಮಾರಸ್ವಾಮಿಗೆ ತಿರುಗುಬಾಣ ಆಗುತ್ತದೆ ಎಂದು ಹೇಳುತ್ತಿದ್ದಾರೆ. ಕಾರ್ತಿಕ್ ವಿಷಯದಲ್ಲಿ ಯಾರಿಗೆ ತಿರುಗುಬಾಣ ಆಗುತ್ತದೆ ಎಂಬುದನ್ನು ನಾನು ಚರ್ಚೆ ಮಾಡಲು ಹೋಗುವುದಿಲ್ಲ. ಆದರೆ, ಈ ಮುಖ್ಯಮಂತ್ರಿ ಇದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಸಚಿವರು ಹೇಳಿದರು.
ಪ್ರಜ್ವಲ್ ರೇವಣ್ಣ ಅವರ ವಿಷಯವನ್ನು ಇಟ್ಟುಕೊಂಡು ಕಾಂಗ್ರೆಸ್ ನಾಯಕರು ನಮ್ಮ ಕುಟುಂಬವನ್ನು ಮುಗಿಸಲು ಹೊರಟಿದೆ. ಅಲ್ಲದೆ, ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಯನ್ನು ತಪ್ಪಿಸಲು ಇವರು ಅಶ್ಲೀಲ ವೀಡಿಯೊಗಳನ್ನು ಬಳಸಿಕೊಂಡರು. ಆ ಮಹಿಳೆಯರ ಮುಖಗಳನ್ನು ಮರೆಮಾಚದೆ ವಿಡಿಯೋಗಳನ್ನು ಹಾಗೆಯೇ ಹೊರಗೆ ಬಿಟ್ಟರು. ಇಂತಹ ವಿಡಿಯೋಗಳನ್ನು ಹರಡಿದ ಕಾರ್ತಿಕ್ನನ್ನು ಡಿಕೆಶಿ ಭೇಟಿ ಮಾಡಿದ್ದಾರೆ ಎಂದರೆ ಏನರ್ಥ? ನಾನು ಆ ಕಾರ್ತಿಕ್ ನನ್ನು ತನ್ನ ಮನೆಗೆ ಕರೆಸಿಕೊಂಡಿರಲಿಲ್ಲ ಎಂದು ಈ ಮುಖ್ಯಮಂತ್ರಿ ಎದೆ ಮುಟ್ಟಿಕೊಂಡು ಹೇಳಲಿ ಎಂದು ಸಚಿವರು ಸವಾಲು ಹಾಕಿದರು.
ಇಂತಹ ಆರೋಪ ಹೊತ್ತ ವ್ಯಕ್ತಿ ಜತೆ ಸಂಬಂಧ ಹೊಂದಿರುವ ಮುಖ್ಯಮಂತ್ರಿ ನನ್ನ ವಿರುದ್ಧ ಆರೋಪ ಹೊರಿಸಲು ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಅವರ ದುರುದ್ದೇಶ ಸಫಲ ಆಗುವುದಿಲ್ಲ ಎಂದು ಸಚಿವರು ಹೇಳಿದರು.
ಸಚಿವ ಕಾಶಪ್ಪನವರ್ ನೀಡಿರುವ ಹೇಳಿಕೆ ಗಮನಿಸಿದ್ದೇನೆ. ಕುಮಾರಸ್ವಾಮಿ ಪ್ರಜ್ವಲ್ ಪೆನ್ ಡ್ರೈವ್ ಹಂಚಿಕೆ ಮಾಡಿದ್ದರು ಎಂದು ಹೇಳಿದ್ದಾರೆ ಎಂದಿದ್ದಾರೆ. ಮಂಡ್ಯದವನೊಬ್ಬ ದೇವೇಗೌಡರ ಕುಟುಂಬವನ್ನು ಮುಗಿಸುತ್ತೇವೆ ಎನ್ನುತ್ತಾನೆ. ಇವರಿಗೆ ಮಾನವೀಯತೆ ಎನ್ನುವುದು ಇದೆಯಾ? ಹಾಸನ ಪ್ರಕರಣದಲ್ಲಿ ಎಷ್ಟು ಮಹಿಳೆಯರು ದೂರು ನೀಡಿದ್ದಾರೆ? ಎಷ್ಟು ಜನಕ್ಕೆ ಈ ಸರಕಾರ ನ್ಯಾಯ ಕೊಡಿಸಿದೆ.
ಅಂದಿನ ಸಿಎಂ, ಡಿಸಿಎಂ ಇಬ್ಬರೂ ನಮ್ಮ ವಿರುದ್ಧ ಹಗೆ ಸಾಧಿಸಿದರು. ಸುರ್ಜೇವಾಲ, ರಾಹುಲ್ ಗಾಂಧಿ ಎಲ್ಲರೂ ಸೇರಿ ಕುತಂತ್ರ ನಡೆಸಿದರು. ರಾಹುಲ್ ಗಾಂಧಿ ಪ್ರಧಾನಿ ಆಗಬೇಕು, ದೇವೇಗೌಡರು ನರೇಂದ್ರ ಮೋದಿ ಜತೆ ಮೈತ್ರಿ ಮಾಡಿಕೊಂಡಿದ್ದಾರೆ. ಹೀಗಾಗಿ ಅವರ ಕುಟುಂಬವನ್ನು ನಿರ್ನಾಮ ಮಾಡಲೇಬೇಕು ಎಂದು ಷಡ್ಯಂತ್ರ್ಯ ನಡೆಸಿದರು. ಹಾಲಿ ಮುಖ್ಯಮಂತ್ರಿ ಮಾತಿನಲ್ಲೇ ಹೇಳುವುದಾದರೆ ಕಾಲವೇ ನಿರ್ಣಯ ಮಾಡುತ್ತದೆ ಎಂದರು ಕುಮಾರಸ್ವಾಮಿ.
ಮಾಧ್ಯಮಗೋಷ್ಟಿಯಲ್ಲಿ ಮಾಜಿ ಸಚಿವರಾದ ಸಾ.ರಾ. ಮಹೇಶ್, ವೆಂಕಟರಾವ್ ನಾಡಗೌಡ, ವಿಧಾನ ಪರಿಷತ್ ಸದಸ್ಯರಾದ ಟಿ.ಎ.ಶರವಣ, ಸಿ.ಎನ್.ಮಂಜೇಗೌಡ, ಗ್ರೇಟರ್ ಬೆಂಗಳೂರು ಜೆಡಿಎಸ್ ಅಧ್ಯಕ್ಷ ಹೆಚ್.ಎಂ.ರಮೇಶ್ ಗೌಡ, ಮಾಜಿ ಶಾಸಕರಾದ ಕೆ.ಎನ್. ತಿಪ್ಪೇಸ್ವಾಮಿ, ಸುರೇಶ್ ಗೌಡ ಮುಂತಾದವರು ಈ ಸಂದರ್ಭದಲ್ಲಿ ಉಪಸ್ತಿತರಿದ್ದರು.




