ನಮ್ಮ ಕಾರ್ಯಕರ್ತರು ಹಾಸನಾಂಬೆ ದೇಗುಲಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡ್ತಾರೆ: ಹೆಚ್.ಡಿ.ರೇವಣ್ಣ

Hassan News: ಮಾಜಿ ಸಚಿವ ಹೆಚ್.ಡಿ.ರೇವಣ್ಣ ಕಾರ್ಯಕರ್ತರನ್ನು ಕರೆತಂದು ಹಾಸನಾಂಬಾ ದೇವಿ ದೇಗುಲಕ್ಕೆ ಮುತ್ತಿಗೆ ಹಾಕುವ ಹೇಳಿಕೆ ನೀಡಿದ್ದಾರೆ.

ಇದಕ್ಕೆ ಕಾರಣವೇನೆಂದರೆ, ವಿಐಪಿಗೆ ಗಳಿಗೆ ಇರುವ ಸ್ಪೆಶಲ್ ಪಾಸ್‌ನ್ನು ಈ ಬಾರಿ ರೇವಣ್ಣ ಅವರಿಗೆ ನೀಡಲಾಗಿಲ್ಲ ಎಂದು ರೇವಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಾಸನದಲ್ಲಿ ಪ್ರೆಸ್‌ಮೀಟ್ ನಡೆಸಿ ಮಾತನಾಡಿರುವ ರೇವಣ್ಣ, ಹಾಸನಾಂಬೆ ದರ್ಶನಕ್ಕೆ ಇರುವ ಸ್ಪೆಶಲ್‌ ಪಾಸನ್ನು ಶಾಸಕರಿಗೆ ನೀಡದೇ, ನಮ್ಮನ್ನು ಕಡೆಗಣಿಸಿ, ಆಡಳಿತಾರೂಢ ಶಾಸಕರಿಗೆ ಮಾತ್ರ ನೀಡಲಾಗುತ್ತಿದೆ. ತಾರತಮ್ಯ ಮಾಡಲಾಗುತ್ತಿದೆ ಎಂದು ದೂರಿದ್ದಾರೆ.

ದರ್ಶನ ಪಾಸ್ ವಿತರಿಸುವಾಗ ಜಿಲ್ಲೆಯ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿತ್ತು. ಆದರೆ ಕೇವಲ ಒಂದೇ ಪಕ್ಷಕ್ಕೆ ಅನುಕೂಲವಾಗುವಂತೆ ಪಾಸ್ ಹಂಚಿಕೆ ಮಾಡಲಾಗಿದೆ. ಈ ವಿಚಾರದಲ್ಲಿ ಜಿಲ್ಲಾಡಳಿತವಾಗಲಿ, ಉಸ್ತುವಾರಿ ಸಚಿವರಾಗಲಿ ತಮ್ಮೊಂದಿಗೆ ಚರ್ಚಿಸಿಲ್ಲ ಎಂದು ದೂರಿದರು.

ಇದೇ ವೇಳೆ, ಪಾಸ್ ವಿಚಾರದಲ್ಲಿ ತಮ್ಮನ್ನು ದೂರವಿಟ್ಟಿರುವುದರಿಂದ ತಾವೇನು ಈ ಬಾರಿ ದೇವಿಯ ದರ್ಶನಕ್ಕೆ ಹೋಗುವುದಿಲ್ಲ. ಜಿಲ್ಲಾಧಿಕಾರಿಯವರೇ ಪಾಸ್ ಇಟ್ಟುಕೊಂಡು ಪೂಜೆ ಮಾಡಲಿ ಎಂದು ವ್ಯಂಗ್ಯವಾಡಿದ ರೇವಣ್ಣ, ನಗರದಲ್ಲಿ ಅಳವಡಿಸಿರುವ ಸ್ವಾಗತ ಕಮಾನುಗಳಲ್ಲಿ ಶಾಸಕರ ಭಾವಚಿತ್ರ ಕಡೆಗಣಿಸಿರುವುದನ್ನೂ ಸಹ ಪ್ರಶ್ನಿಸಿದ್ದಾರೆ.

ಈ ತಾರತಮ್ಯವನ್ನು ಎರಡು ದಿನಗಳೊಳಗೆ ಸರಿಪಡಿಸದಿದ್ದರೆ ನವೆಂಬರ್ 4ರಂದು ಐದು ಸಾವಿರ ಜೆಡಿಎಸ್ ಕಾರ್ಯಕರ್ತರೊಂದಿಗೆ ದೇವಾಲಯಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುವುದಾಗಿ ರೇವಣ್ಣ ಎಚ್ಚರಿಕೆ ನೀಡಿದ್ದಾರೆ. ಸದ್ಯ ಜಿಲ್ಲಾಡಳಿತ ಈ ಗೊಂದಲವನ್ನು ಹೇಗೆ ಬಗೆಹರಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ

About The Author