EPFO ಪಿಂಚಣಿದಾರರಿಗೆ ಗುಡ್‌ನ್ಯೂಸ್ – ಪಿಂಚಣಿ ಮೂರು ಪಟ್ಟು ಹೆಚ್ಚಳ?

ದೇಶದ ಕೋಟ್ಯಂತರ ಉದ್ಯೋಗಿಗಳಿಗೆ ಹಾಗೂ ಪಿಂಚಣಿದಾರರಿಗೆ ಒಂದು ದೊಡ್ಡ ಗುಡ್‌ನ್ಯೂಸ್ ಸಿಗುವ ಸಾಧ್ಯತೆಯಿದೆ. ಹೌದು, ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ ಅಂದರೆ ಇಪಿಎಫ್‌ಒ ತನ್ನ ಉದ್ಯೋಗಿಗಳ ಪಿಂಚಣಿ ಯೋಜನೆ ಅಡಿಯಲ್ಲಿ ನೀಡಲಾಗುವ ಕನಿಷ್ಠ ಮಾಸಿಕ ಪಿಂಚಣಿಯನ್ನು ಈಗ ಪ್ರಸ್ತುತವಿರುವ 1,000 ರೂಪಾಯಿಗಳಿಂದ ಬರೋಬ್ಬರಿ 3,000 ರೂಪಾಯಿಗಳಿಗೆ ಹೆಚ್ಚಿಸಲು ಗಂಭೀರ ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ.

ಕೇಂದ್ರ ಹಣಕಾಸು ಸಚಿವಾಲಯದೊಂದಿಗೆ ಸಮಾಲೋಚನೆ ನಡೆಸಿದ ಬಳಿಕ, ಕೇಂದ್ರ ಕಾರ್ಮಿಕ ಸಚಿವಾಲಯ ಈ ಮಹತ್ವದ ಪ್ರಸ್ತಾವನೆಗೆ ಅಂತಿಮ ರೂಪ ನೀಡಿದೆ. ಮುಂಬರುವ ನವೆಂಬರ್ 19 ರಂದು ನಡೆಯಲಿರುವ ಇಪಿಎಫ್‌ಒ ಕೇಂದ್ರ ಧರ್ಮದರ್ಶಿಗಳ ಮಂಡಳಿ ಸಭೆಯಲ್ಲಿ ಈ ಪ್ರಸ್ತಾವನೆಯನ್ನು ಪ್ರತ್ಯೇಕವಾಗಿ ಚರ್ಚಿಸಿ, ಅಂತಿಮ ನಿರ್ಧಾರ ಕೈಗೊಳ್ಳುವ ನಿರೀಕ್ಷೆಯಿದೆ ಅಂತ ಹೇಳಲಾಗ್ತಿದೆ.

ಸದ್ಯ ದೇಶಾದ್ಯಂತ ಒಟ್ಟು 81.48 ಲಕ್ಷ ಇಪಿಎಸ್ ಪಿಂಚಣಿದಾರರಿದ್ದು, ಇವರಲ್ಲಿ ಸುಮಾರು 73.55 ಲಕ್ಷ ಜನರು ತಿಂಗಳಿಗೆ 3,000 ರೂಪಾಯಿಗಿಂತ ಕಡಿಮೆ ಪಿಂಚಣಿ ಪಡೆಯುತ್ತಿದ್ದಾರೆ. ಕೇವಲ 1,000 ರೂ. ಪಿಂಚಣಿ ಪಡೆಯುತ್ತಿದ್ದ ಈ ಲಕ್ಷಾಂತರ ಜನರಿಗೆ, ಈ ಹೊಸ ಪ್ರಸ್ತಾವನೆ ಜಾರಿಯಾದರೆ ದೊಡ್ಡ ಮಟ್ಟದ ಆರ್ಥಿಕ ನೆರವು ಸಿಗಲಿದೆ.

ನೆನಪಿರಲಿ, 2014ರಲ್ಲಿ ವೇತನ ಮಿತಿಯನ್ನು 15,000 ರೂ.ಗಳಿಗೆ ಹೆಚ್ಚಿಸಿದಾಗ ಕನಿಷ್ಠ ಪಿಂಚಣಿಯನ್ನು 1,000 ರೂ.ಗೆ ನಿಗದಿಪಡಿಸಲಾಗಿತ್ತು. ಅಂದಿನಿಂದಲೂ ಇದನ್ನು ಹೆಚ್ಚಿಸುವಂತೆ ಕಾರ್ಮಿಕ ಸಂಘಟನೆಗಳು ನಿರಂತರವಾಗಿ ಒತ್ತಾಯಿಸುತ್ತಿದ್ದವು. ಇತ್ತೀಚೆಗಷ್ಟೇ ಇಪಿಎಫ್‌ಒ ಗರಿಷ್ಠ ವೇತನ ಮಿತಿಯನ್ನು 25,000 ರೂ.ಗಳಿಗೆ ಹೆಚ್ಚಿಸಿರುವ ಹಿನ್ನೆಲೆಯಲ್ಲಿ, ಈಗ ಕನಿಷ್ಠ ಪಿಂಚಣಿಯನ್ನು 3,000 ರೂ.ಗೆ ಏರಿಸುವ ಪ್ರಸ್ತಾವನೆಗೆ ಮರುಜೀವ ಬಂದಿದೆ.

ಒಟ್ಟಾರೆಯಾಗಿ, ಈ ತಿಂಗಳ 19 ರಂದು ನಡೆಯಲಿರುವ ಸಿಬಿಟಿ ಸಭೆಯಲ್ಲಿ ಈ ಪ್ರಸ್ತಾವನೆಗೆ ಅಧಿಕೃತ ಮುದ್ರೆ ಬಿದ್ದರೆ, ದೇಶದ ಕೋಟ್ಯಂತರ ಪಿಂಚಣಿದಾರರ ಮುಖದಲ್ಲಿ ಮಂದಹಾಸ ಮೂಡುವುದು ಖಚಿತ. ಈ ಜನಪರ ನಿರ್ಧಾರದ ಕುರಿತು ನಿಮ್ಮ ಅಭಿಪ್ರಾಯವೇನು? ಕಮೆಂಟ್ ಮಾಡಿ ತಿಳಿಸಿ.

About The Author