ಸಿದ್ದರಾಮಯ್ಯರನ್ನ ಡಿಕೆ ಭೇಟಿ ಆಗಿದ್ದೇಕೆ? ಅಸಲಿ ಮಾತುಕತೆಯ ವಿಚಾರ ಇಲ್ಲಿದೆ!

ದೀಪಾವಳಿ ಶುಭಾಶಯ ಕೋರುವ ನೆಪದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾವೇರಿ ನಿವಾಸಕ್ಕೆ ಸಿಎಂ ಡಿ.ಕೆ. ಶಿವಕುಮಾರ್ ಅವರು ನಿನ್ನೆ ದಿಢೀರ್ ಭೇಟಿ ನೀಡಿರುವುದು ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. ಸುಮಾರು ಒಂದೂವರೆ ಗಂಟೆಗೂ ಹೆಚ್ಚು ಕಾಲ ನಡೆದ ಈ ಸಭೆಯಲ್ಲಿ ರಾಜ್ಯ ರಾಜಕೀಯದ ಹಲವು ಬಿಸಿಬಿಸಿ ವಿಚಾರಗಳು ಚರ್ಚೆಗೆ ಬಂದಿವೆ ಎಂದು ಹೇಳಲಾಗ್ತಿದೆ.

ಹೈಕಮಾಂಡ್ ಸೂಚನೆ ಹಾಗೂ ಸಿಎಂ ರಾಜಕೀಯ ಕಾರ್ಯದರ್ಶಿ ಪೊನ್ನಣ್ಣ ಅವರ ಮಧ್ಯಸ್ಥಿಕೆಯಲ್ಲಿ ಈ ಮಹತ್ವದ ಭೇಟಿಗೆ ಮುಹೂರ್ತ ಫಿಕ್ಸ್ ಆಗಿತ್ತು ಎನ್ನಲಾಗಿದೆ. ಈ ವೇಳೆ ಇತ್ತೀಚೆಗೆ ರಾಜ್ಯ ರಾಜಕೀಯದಲ್ಲಿ ಸದ್ದು ಮಾಡಿದ್ದ ನಕಲಿ ‘ಸ್ಟಿಂಗ್ ಆಪರೇಷನ್’ ಪ್ರಕರಣದ ಬಗ್ಗೆಯೂ ಸುದೀರ್ಘ ಚರ್ಚೆ ನಡೆದಿದೆ. ತನಿಖೆಯ ಸಂಪೂರ್ಣ ಮಾಹಿತಿಯನ್ನು ಸಿಎಂ ಡಿಕೆಶಿ ಅವರು ಸಿದ್ದರಾಮಯ್ಯ ಅವರಿಗೆ ವಿವರಿಸಿದ್ದು, ಅನುಮಾನಕ್ಕೆ ಅವಕಾಶವಿಲ್ಲದೆ ತನಿಖೆ ನಡೆಸಿ ಸತ್ಯ ಹೊರಬರಬೇಕು ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.

ಇದು ಜೆಡಿಎಸ್‌ನ ರಾಜಕೀಯ ಷಡ್ಯಂತ್ರ, ಇದಕ್ಕೆ ಬಲಿಯಾಗಬೇಡಿ ಎಂದು ಡಿ.ಕೆ. ಶಿವಕುಮಾರ್ ಸಲಹೆ ನೀಡಿದರೆ, “ನಾನೇನು ಕುಮಾರಸ್ವಾಮಿ ಪರವಾಗಿಲ್ಲ, ಆದರೆ ತನಿಖೆಯಿಂದ ಸತ್ಯ ಹೊರಬರಬೇಕು” ಎಂದು ಸಿದ್ದು ಸ್ಪಷ್ಟಪಡಿಸಿದ್ದಾರೆ. ಅಷ್ಟೇ ಅಲ್ಲದೆ, ಪೊನ್ನಣ್ಣ ಅವರೇ ತನಿಖೆಯ ಕಾನೂನಾತ್ಮಕ ವಿವರಣೆ ನೀಡಲಿದ್ದಾರೆ ಎಂದ ಸಿಎಂ, “ನೀವು ನಮ್ಮ ಹಿರಿಯ ನಾಯಕರು, ನಿಮ್ಮ ನಾಯಕತ್ವ ನಮಗೆ ಬೇಕು, ಒಟ್ಟಾಗಿ ಕೆಲಸ ಮಾಡೋಣ” ಎಂದು ಸಿದ್ದರಾಮಯ್ಯಗೆ ಭರವಸೆ ನೀಡಿದ್ದಾರೆ.

ಇನ್ನು ಇತ್ತೀಚಿನ ವಿಧಾನ ಪರಿಷತ್ ಚುನಾವಣೆ ಫಲಿತಾಂಶ ಕಾಂಗ್ರೆಸ್ ಪಕ್ಷಕ್ಕೆ ಮುಜುಗರ ತಂದಿದೆ ಎಂದ ಸಿದ್ದರಾಮಯ್ಯ, ನಮ್ಮ ಮೂಲ ಹಾಗೂ ಸೈದ್ಧಾಂತಿಕ ಮತದಾರರನ್ನು ನಾವು ಕಾಪಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದ್ದಾರೆ. ಇದಕ್ಕೆ ಡಿಕೆಶಿಯೂ ಸಹಮತ ವ್ಯಕ್ತಪಡಿಸಿದ್ದಾರೆ. ಇದರ ಜೊತೆಗೆ, ಮೈಸೂರು ದಸರಾಗೆ ಬರೋಬ್ಬರಿ 22 ಮಂತ್ರಿಗಳನ್ನು ಉಸ್ತುವಾರಿಯನ್ನಾಗಿ ಮಾಡಿದ್ದರ ಬಗ್ಗೆಯೂ ಸಿದ್ದು ಪ್ರಶ್ನಿಸಿದ್ದು, ದಸರಾ ಅಚ್ಚುಕಟ್ಟಾಗಿ ನಡೆಯಲಿ ಎಂದು ಹಾಗೆ ಮಾಡಿದ್ದಾಗಿ ಡಿಕೆಶಿ ಸ್ಪಷ್ಟನೆ ನೀಡಿದ್ದಾರೆ ಎನ್ನಲಾಗಿ ತಿಳಿದುಬಂದಿದೆ.

About The Author