ಬಿಹಾರದ ಬಾಹುಬಲಿ ಎಂದೇ ಖ್ಯಾತಿ ಪಡೆದಿರುವ ಶಾಸಕ ಅನಂತ್ ಸಿಂಗ್ ಅವರ ಪುತ್ರಿ ಶಿವಂಗಿ ಸಿಂಗ್ ಅವರ ವಿವಾಹ ಮಹೋತ್ಸವವು ಈಗ ಇಡೀ ದೇಶದ ಗಮನ ಸೆಳೆದಿದೆ. ಮಗಳ ಮದುವೆಗೆ ಹಣದ ಹೊಳೆಯನ್ನೇ ಹರಿಸುತ್ತಿರುವ ಅನಂತ್ ಸಿಂಗ್, ಕೇವಲ ಬಿಹಾರ ಮಾತ್ರವಲ್ಲದೆ ದೇಶ-ವಿದೇಶಗಳಿಗೂ ಆಹ್ವಾನ ನೀಡಿ ಅಚ್ಚರಿ ಮೂಡಿಸಿದ್ದಾರೆ.
ಬರೋಬ್ಬರಿ 4 ಲಕ್ಷ ಜನರಿಗೆ ಬೃಹತ್ ಔತಣಕೂಟದ ವ್ಯವಸ್ಥೆ ಮಾಡಲಾಗಿದ್ದು, ನವೆಂಬರ್ 25 ರಂದು ಲದ್ಮಾದಲ್ಲಿರುವ ಅನಂತ್ ಸಿಂಗ್ ಮನೆಯಲ್ಲಿ ಈ ಮದುವೆ ನಡೆಯಲಿದೆ. ಉತ್ತರ ಪ್ರದೇಶದ ಕುಶಲಕರ್ಮಿಗಳಿಂದ ಭವ್ಯವಾದ ಪೆಂಡಾಲ್ ನಿರ್ಮಾಣವಾಗುತ್ತಿದ್ದು, ವಿವಿಐಪಿ ಅತಿಥಿಗಳಿಗಾಗಿಯೇ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ.
ಈ ಮದುವೆಯ ಮತ್ತೊಂದು ಹೈಲೈಟ್ ಅಂದ್ರೆ, ನವದಂಪತಿಗಾಗಿ ಬರೋಬ್ಬರಿ 100 ಅಡಿ ಉದ್ದದ ಬೃಹತ್ ಸಿಮೆಂಟ್ ವೇದಿಕೆಯನ್ನು ನಿರ್ಮಿಸಲಾಗುತ್ತಿದ್ದು, ಅದನ್ನು ಅಂದಾಜು 150 ಕ್ವಿಂಟಾಲ್ ಆಭರಣಗಳಿಂದ ವಿಶಿಷ್ಟವಾಗಿ ಅಲಂಕರಿಸಲಾಗುತ್ತಿದೆ! ವರನ ಕಡೆಯಿಂದ ಬಿಹ್ತಾದಲ್ಲಿ ಹೊಸ ಮನೆಯೂ ಸಿದ್ಧವಾಗುತ್ತಿದ್ದು, ಮೆರವಣಿಗೆ ಅಲ್ಲಿಂದಲೇ ಹೊರಡಲಿದೆ.
ಇನ್ನು ಈ ಮದುವೆಗೆ ರಾಜಕೀಯ ಮತ್ತು ಸಿನಿಮಾ ರಂಗದ ದಿಗ್ಗಜರ ದಂಡೇ ಹರಿದುಬರಲಿದ್ದು, ಸೋನು ಸೂದ್, ಮನೋಜ್ ತಿವಾರಿ, ಮೈಥಿಲಿ ಠಾಕೂರ್ ಹಾಗೂ ಪವನ್ ಸಿಂಗ್ ಸೇರಿದಂತೆ ಹಲವು ತಾರೆಯರು ಭಾಗವಹಿಸುವ ನಿರೀಕ್ಷೆಯಿದೆ. ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಆಹ್ವಾನ ನೀಡುವುದಾಗಿ ಅನಂತ್ ಸಿಂಗ್ ತಿಳಿಸಿದ್ದಾರೆ.
ಅಷ್ಟೇ ಅಲ್ಲದೆ, “ನಮ್ಮ ಹಿತೈಷಿಗಳು ಭಾರತದಲ್ಲಿ ಮಾತ್ರವಲ್ಲ, ಪಾಕಿಸ್ತಾನದಲ್ಲೂ ಇದ್ದಾರೆ; ಅವರಿಗೂ ಆಹ್ವಾನ ಕಳುಹಿಸುತ್ತಿದ್ದೇವೆ” ಎಂದು ಅನಂತ್ ಸಿಂಗ್ ಹೇಳಿ ಅಚ್ಚರಿ ಮೂಡಿಸಿದ್ದಾರೆ.




