Bengaluru: ರೈತರ ಹಿತ ಕಾಪಾಡುವ ದೃಷ್ಟಿಯಿಂದ ತುಂಗಭದ್ರಾ ಅಣೆಕಟ್ಟೆಯಿಂದ ರಾಯಚೂರು, ಕೊಪ್ಪಳ, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಯಲ್ಲಿನ ನಿಂತ ಬೆಳೆಗಳಿಗೆ ನ.28ರವರೆಗೆ ನೀರು ಒದಗಿಸಲು ತೀರ್ಮಾನಿಸಲಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರೂ ಆದ ನೀರಾವರಿ ಸಲಹಾ ಸಮಿತಿ ಅಧ್ಯಕ್ಷರು ಶಿವರಾಜ್. ಎಸ್. ತಂಗಡಗಿ ಅವರು ಹೇಳಿದ್ದಾರೆ.
ವಿಕಾಸಸೌಧದಲ್ಲಿ ಬುಧವಾರ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಸಭೆ ಬಳಿಕ ಮಾತನಾಡಿದ ಸಚಿವರು, ನಾಲ್ಕೂವರೆ ಟಿಎಂಸಿ ನೀರನ್ನು ಬೆಳೆ ರಕ್ಷಣೆಗೆ ನೀರು ಒದಗಿಸಲಾಗುವುದು ಎಂದು ತಿಳಿಸಿದರು.
ಪ್ರಸ್ತುತ ಜಲಾಶಯದಲ್ಲಿ ನೀರಿನ 27.61 ಟಿಎಂಸಿ ಇದ್ದು, ಇದರಲ್ಲಿ ಇದರಲ್ಲಿ ಡೆಟ್ ಸ್ಟೋರೆಜ್ 2 ಟಿಎಂಸಿ, ಅವಿಯಾಗುವಿಕೆ 2.85 ಟಿಎಂಸಿ, ಈ ಪೈಕಿ ರಾಜ್ಯದ ಪಾಲು 9.6ಟಿಎಂಸಿ, ಆಂಧ್ರಪ್ರದೇಶ 11 ಟಿಎಂಸಿ, ತೆಲಂಗಾಣದ ಪಾಲು ಇಲ್ಲ. ನಮ್ಮ ರಾಜ್ಯದ ಪಾಲಿನ 9.6 ಟಿಎಂಸಿ ಇದ್ದು, ಈ ಪೈಕಿ ನಾಲ್ಕು ಜಿಲ್ಲೆಯ ಕುಡಿಯುವ ನೀರಿಗಾಗಿ 5.5 ಟಿಎಂಸಿ ನೀರನ್ನು ಸಂಗ್ರಹಿಸಿಡಲಾಗಿದೆ. ಕುಡಿಯುವ ನೀರಿಗೆ ಯಾವುದೇ ತೊಂದರೆಯಾಗದಂತೆ ತೀರ್ಮಾನಕೈಗೊಳ್ಳಲಾಗಿದೆ ಎಂದು ತಿಳಿಸಿದರು.
3000 ಕ್ಯೂಸೆಕ್ಸ್ ನೀರು:
ತುಂಗಭದ್ರಾ ಎಡದಂಡೆ ಮುಖ್ಯಕಾಲುವೆ ಮೂಲಕ ನ.21ರಿಂದ ನ.28ರವರೆಗೆ 3000 ಕ್ಯೂಸೆಕ್ಸ್, ಬಲದಂಡೆ ಕೆಳಮಟ್ಟದ ಕಾಲುವೆಗೆ ನ.21ರಿಂದ ನ.28ರ ವರೆಗೆ ಕಾಲುವೆಗೆಕ್ಯೂಸೆಕ್, ಬಲದಂಡೆ ಮೇಲ್ಮಟ್ಟದ ಕಾಲುವೆಗೆ ನ.21ರಿಂದ ನ.30ರವರೆಗೆ (ನೀರು ನಿಲುಗಡೆ) ಡಿಸೆಂಬರ್ 1ರಿಂದ ಡಿ.8ರತನಕ 1000 ಕ್ಯೂಸೆಕ್ಸ್ ನಂತೆ ನೀರು ಹರಿಸಲಾಗುವುದು.
ಇನ್ನು ರಾಯಬಸವಣ್ಣ ಕಾಲುವೆಗೆ ನ.21ರಿಂದ ನ.30ರವರೆಗೆ (ನೀರು ನಿಲುಗಡೆ), ಡಿ.1ರಿಂದ ಡಿ.12ರವರೆಗೆ 180 ಕ್ಯೂಸೆಕ್ಸ್ ನಂತೆ, ಡಿ.11ರಿಂದ ಜ.10ರವರೆಗೆ ನೀರು ನಿಲುಗಡೆ, ಜ.11ರಿಂದ ಮೇ 31ರವರೆಗೆ 150 ಕ್ಯೂಸೆಕ್ಸ್ ನಂತೆ ಕ್ರಮವಾಗಿ 10 ದಿನ ನಿಲ್ಲಿಸಿ, ಹತ್ತು ದಿನ ನೀರನ್ನು ಹರಿಸಲಾಗುವುದು. ಉಳಿದಂತೆ ಎಡದಂಡೆ ವಿಜಯನಗರ ಕಾಲುವೆಗೆ ನ.29ರಿಂದ ಜ.10ರವರೆಗೆ ನೀರು ನಿಲುಗಡೆ, ಜ.11ರಿಂದ ಮೇ 10ರವರೆಗೆ 60 ಕ್ಯೂಸೆಕ್ಸ್ ನಂತೆ ಕ್ರಮವಾಗಿ ಹತ್ತು ದಿನ ನೀರು ನಿಲ್ಲಿಸಿ, ಹತ್ತು ದಿನ ನೀರನ್ನು ಹರಿಸಲಾಗುವುದು ಎಂದು ವಿವರಿಸಿದರು.
ಕುಡಿಯುವ ನೀರು ಕೂಡ ಬಹಳ ಮುಖ್ಯ:
ರಾಜ್ಯದಲ್ಲಿ ಬರಗಾಲ ಎದುರಾಗಿದ್ದು, ರೈತರ ಹಿತದ ಜೊತೆಗೆ ಕುಡಿಯುವ ನೀರು ಒದಗಿಸುವುದು ಬಹಳ ಮುಖ್ಯ. ಶಾಸಕರು ಮತ್ತು ಅಧಿಕಾರಿಗಳೊಂದಿಗೆ ಸುದೀರ್ಘವಾದ ಚರ್ಚೆ ನಡೆಸಿ ಒಮ್ಮತದಿಂದ ಈ ಮೇಲಿನ ತೀರ್ಮಾನ ತೆಗೆದುಕೊಳ್ಳಲಾಗಿದೆ. ಕೆಲವೆಡೆ ರೈತರು ಪ್ರತಿಭಟನೆ ನಡೆಸುತ್ತಿದ್ದು, ನೀರಿನ ಲಭ್ಯತೆ ಆಧಾರದ ಮೇಲೆ ನೀರು ಹೊಂದಿಸುವ ಕೆಲಸ ಮಾಡಲಾಗಿದೆ ಎಂದರು.
ಆಂಧ್ರಪ್ರದೇಶದ ಪಾಲನ್ನು ಉಳಿಸಿಕೊಳ್ಳುವ ಪ್ರಯತ್ನದ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಆಂಧ್ರದಲ್ಲಿ ಎರಡನೇ ಬೆಳೆಯನ್ನು ಹಾಕಿಲ್ಲ. ಬದಲಾಗಿ ಈ ಬಾರಿ ಕುಡಿಯಲೆಂದೇ ತಮ್ಮ ಪಾಲಿನ ನೀರನ್ನು ಹಾಗೇ ಬಿಟ್ಟಿದ್ದಾಗೆ ಹೇಳಿ, ನಮ್ಮ ಬಳಕೆಗೆ ಒಪ್ಪಿಲ್ಲ. ನಮ್ಮಲ್ಲಿ ಏಳುವರೆ ಲಕ್ಷ ರೈತರು ಬೆಳೆ ಹಾಕಿಕೊಂಡಿದ್ದಾರೆ. ರೈತರಿಗೂ ತೊಂದರೆಯಾಗದಂತೆ ಕುಡಿಯುವ ನೀರಿಗೂ ತೊಂದರೆಯಾಗಬಾರದು ಎಂದು ಮುಖ್ಯಮಂತ್ರಿಗಳು ಸೂಚನೆ ಕೊಟ್ಟಿದ್ದರು. ಅದರಂತೆ ನಾವು ನಮ್ಮ ರೈತರ ರಕ್ಷಣೆ ಮಾಡುವ ಪ್ರಯತ್ನ ಮಾಡಿದ್ದೇವೆ ಎಂದು ತಿಳಿಸಿದರು.
ಸಭೆಯಲ್ಲಿ ಮಾಜಿ ಸಚಿವರಾದ ಬೋಸರಾಜ್, ಶಾಸಕರಾದ ಜಿ.ಜನಾರ್ದನ್ ರೆಡ್ಡಿ, ಕೆ.ರಾಘವೇಂದ್ರ ಹಿಟ್ನಾಳ್, ಶಿವರಾಜ್ ಪಾಟೀಲ್, ನಾಗರಾಜ್, ಹಂಪನಗೌಡ ಬಾದರ್ಲಿ, ಗಣೇಶ್, ಬಸವರಾಜ್ ತೂರ್ವಿಹಾಳ್, ಬಸನಗೌಡ ಬಾದರ್ಲಿ, ಹೇಮಲತಾ ನಾಯಕ್, ವಸಂತಕುಮಾರ್, ನಾಲ್ಕು ಜಿಲ್ಲೆ ಜಿಲ್ಲಾಧಿಕಾರಿಗಳು ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳು ಹಾಜರಿದ್ದರು.
ನೀರಾವರಿ ಸಲಹಾ ಸಮಿತಿ ಸಭೆಗೆ ಹಾಜರಾಗಿದ್ದ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರಿಗೆ, ಕೇಂದ್ರ ಸಚಿವರ ಮೂಲಕ ಆಂಧ್ರಪ್ರದೇಶದ ಮುಖ್ಯಮಂತ್ರಿಗಳ ಚರ್ಚೆ ನಡೆಸಿ, ನಾಲ್ಕು ಟಿಎಂಸಿ ಉಳಿಸಲು ಮನವಿ ಮಾಡಲಿ. ನೀರಿನ ವಿಚಾರದಲ್ಲಿ ಯಾರು ಕೂಡ ರಾಜಕೀಯ ಮಾಡಬಾರದು ಎಂದು ಮಾರ್ಮಿಕವಾಗಿ ನುಡಿದರು.




