ಬೈಕ್ ಟ್ಯಾಕ್ಸಿಗೆ ಹೊಸ ರೂಲ್ಸ್ ಫಿಕ್ಸ್ – ಚಾಲಕರಿಗೆ ಸರ್ಕಾರದ ಷರತ್ತುಗಳೇನು?

ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಸೇವೆ ಆರಂಭಕ್ಕೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್ ನೀಡಿದ ಬೆನ್ನಲ್ಲೇ, ಇದೀಗ ರಾಜ್ಯ ಸರ್ಕಾರ ಹೊಸ ನಿಯಮಗಳನ್ನು ಜಾರಿಗೆ ತರಲು ಸಿದ್ಧತೆ ನಡೆಸಿದೆ. ಬೈಕ್ ಟ್ಯಾಕ್ಸಿಗಳಿಗೆ ಅವಕಾಶ ನೀಡಿದರೂ, ಬೇಕಾಬಿಟ್ಟಿಯಾಗಿ ಸೇವೆ ನಡೆಸಲು ಅವಕಾಶ ನೀಡದಿರಲು ಸರ್ಕಾರ ನಿರ್ಧರಿಸಿದೆ. ಹೀಗಾಗಿ ಸಾರಿಗೆ ಇಲಾಖೆಗೆ ಕಠಿಣ ನಿಯಮಾವಳಿ ರೂಪಿಸುವಂತೆ ಸೂಚನೆ ನೀಡಲಾಗಿದೆ.

ಹಾಗಾದ್ರೆ ಬೈಕ್ ಟ್ಯಾಕ್ಸಿಗಳಿಗೆ ಬರಲಿರುವ ಹೊಸ ರೂಲ್ಸ್ ಏನು? ಮೊದಲನೆಯದಾಗಿ, ಬೈಕ್ ಟ್ಯಾಕ್ಸಿ ಸೇವೆ ನೀಡುವ ವಾಹನಗಳನ್ನು ವಾಣಿಜ್ಯ ಸಾರಿಗೆ ವಾಹನಗಳಾಗಿ ನೋಂದಾಯಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ. ಇದಕ್ಕಾಗಿ ಹಳದಿ ನಂಬರ್ ಪ್ಲೇಟ್ ಕಡ್ಡಾಯ ಮಾಡುವ ಸಾಧ್ಯತೆಯೂ ಇದೆ. ಜೊತೆಗೆ ಚಾಲಕರು ಸಾರಿಗೆ ಇಲಾಖೆಯ ನಿಯಮಗಳ ಅಡಿಯಲ್ಲೇ ಸೇವೆ ನೀಡಬೇಕಾಗುತ್ತದೆ.

ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲು ಸರ್ಕಾರ ಮುಂದಾಗಿದೆ. ಅದರಲ್ಲೂ ಮಹಿಳಾ ಪ್ರಯಾಣಿಕರ ಸುರಕ್ಷತೆಗಾಗಿ ಜಿಪಿಎಸ್ ಅಳವಡಿಕೆ ಕಡ್ಡಾಯ ಮಾಡುವ ಸಾಧ್ಯತೆಯಿದೆ. ಬೈಕ್ ಟ್ಯಾಕ್ಸಿಗಳಿಗೆ ವಿಮೆ, ಚಾಲಕರ ದಾಖಲೆಗಳು ಹಾಗೂ ವಾಹನದ ಅರ್ಹತೆ ಕಡ್ಡಾಯವಾಗಬಹುದು.

ಇನ್ನು ಚಾಲಕ ಮತ್ತು ಪ್ರಯಾಣಿಕರಿಗೆ ಗುಣಮಟ್ಟದ ಹೆಲ್ಮೆಟ್, ವಾಹನದ ನಿರ್ವಹಣೆ, ಅಪಘಾತವಾದರೆ ಚಾಲಕ, ಮಾಲೀಕ ಮತ್ತು ಕಂಪನಿಯ ಹೊಣೆಗಾರಿಕೆ ಬಗ್ಗೆಯೂ ನಿಯಮ ರೂಪಿಸುವ ಸಾಧ್ಯತೆಯಿದೆ. ಕಿಲೋಮೀಟರ್ ಆಧಾರದಲ್ಲಿ ದರ ನಿಗದಿಪಡಿಸುವ ಬಗ್ಗೆಯೂ ಪರಿಶೀಲನೆ ನಡೆಯುತ್ತಿದೆ. ಸದ್ಯ ಸಾರಿಗೆ ಇಲಾಖೆ ಅಡ್ವೊಕೇಟ್ ಜನರಲ್ ಸಲಹೆ ಪಡೆದು ನಿಯಮಾವಳಿ ಸಿದ್ಧಪಡಿಸಲಿದೆ. ಶೀಘ್ರದಲ್ಲೇ ಸರ್ಕಾರ ಅಧಿಕೃತ ಮಾರ್ಗಸೂಚಿ ಪ್ರಕಟಿಸುವ ನಿರೀಕ್ಷೆಯಿದೆ.

About The Author