ಆಸ್ತಿ ದಾಖಲೆಗಳಿಗಾಗಿ ಇನ್ಮುಂದೆ ಸರ್ಕಾರಿ ಕಚೇರಿಗಳಿಗೆ ಅಲೆಯುವ ಹಗರಣಕ್ಕೆ ರಾಜ್ಯ ಸರ್ಕಾರ ಬ್ರೇಕ್ ಹಾಕಿದೆ. ಹೌದು, ಗ್ರಾಮೀಣ ಭಾಗದ ಜನರಿಗೆ ಆಸ್ತಿ ಹಕ್ಕು ನೀಡುವ ‘ಭೂಗ್ಯಾರಂಟಿ’ ಯೋಜನೆಯಡಿ ಇ-ಸ್ವತ್ತು 2.0ಗೆ ಚಾಲನೆ ಸಿಕ್ಕಿದ್ದರೆ, ಇತ್ತ ಬೆಂಗಳೂರಿನಲ್ಲಿ ವಾಟ್ಸಾಪ್ ಮುಖಾಂತರವೇ ಇ-ಖಾತಾ ನೀಡುವ ಬ್ರಹ್ಮಾಂಡ ಯೋಜನೆ ಶುರುವಾಗಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಖಂಡ್ರೆ ಅವರು ಇ-ಸ್ವತ್ತು 2.0ಗೆ ಚಾಲನೆ ನೀಡಿದ್ದಾರೆ. ತಲೆತಲಾಂತರಗಳಿಂದ ವಾಸಿಸುತ್ತಿದ್ದು, ಹಳೆಯ ದಾಖಲೆಗಳಿಲ್ಲದೆ ಪರದಾಡುತ್ತಿದ್ದ ಗ್ರಾಮೀಣ ಜನರಿಗೆ ಇದು ಭರ್ಜರಿ ಗುಡ್ ನ್ಯೂಸ್. ಸಮಿತಿಯ ವರದಿ ಆಧರಿಸಿ ನಿಯಮಗಳಲ್ಲಿ ಬದಲಾವಣೆ ಮಾಡಲಾಗಿದ್ದು, ವಿದ್ಯುತ್ ಬಿಲ್ ಹೊಂದಿರುವವರು ಹಾಗೂ ಕೃಷಿ ಜಮೀನಿನಲ್ಲಿ ಮನೆ ಕಟ್ಟಿಕೊಂಡಿರುವವರಿಗೂ ಇನ್ಮುಂದೆ ನಿಯಮಾನುಸಾರ ಇ-ಸ್ವತ್ತು ಸಿಗಲಿದೆ. ಅಧಿಕಾರಿಗಳೇ ಮನೆ ಮನೆಗೆ ಭೇಟಿ ನೀಡಿ ದಾಖಲೆಗಳನ್ನು ವಿತರಿಸಲಿದ್ದು, 2027ರ ಅಂತ್ಯದೊಳಗೆ ಬಾಕಿ ಇರುವ ಎಲ್ಲ ಇ-ಸ್ವತ್ತುಗಳನ್ನು ನೀಡುವ ಟಾರ್ಗೆಟ್ ಹಾಕಿಕೊಳ್ಳಲಾಗಿದೆ.
ಪಂಚತಂತ್ರ ತಂತ್ರಾಂಶದಲ್ಲಿ ಒಟ್ಟು ಒಂದೂವರೆ ಕೋಟಿ ಆಸ್ತಿಗಳ ದಾಖಲೆಗಳಿದ್ದು, ಈಗಾಗಲೇ ಸುಮಾರು 53 ಲಕ್ಷ ಇ-ಸ್ವತ್ತುಗಳನ್ನು ವಿತರಿಸಲಾಗಿದೆ. ಉಳಿದ 97 ಲಕ್ಷ ದಾಖಲೆಗಳನ್ನು ವಿತರಿಸಲು ಪ್ರತಿ ಪಂಚಾಯಿತಿಗೂ ಪ್ರತ್ಯೇಕ ಗುರಿ ನಿಗದಿಪಡಿಸಲಾಗಿದೆ. ಈ ವರ್ಷದ ಅಂತ್ಯದೊಳಗೆ ಬರೋಬ್ಬರಿ 8 ಲಕ್ಷ ಇ-ಸ್ವತ್ತುಗಳನ್ನು ವಿತರಿಸಲು ಸರ್ಕಾರ ಸಜ್ಜಾಗಿದೆ ಎಂದು ತಿಳಿದುಬಂದಿದೆ.
ಇನ್ನು ಬೆಂಗಳೂರಿನ ಜನರಿಗಂತೂ ಜಿಬಿಎ ಕಡೆಯಿಂದ ಸಕ್ಕತ್ ಗಿಫ್ಟ್ ಸಿಕ್ಕಿದ್ದು, ಜಿಬಿಎ ವ್ಯಾಪ್ತಿಯ 5 ನಗರ ಪಾಲಿಕೆಗಳ ಸುಮಾರು 24 ಲಕ್ಷ ಆಸ್ತಿ ಮಾಲೀಕರಿಗೆ ಉಚಿತವಾಗಿ ವಾಟ್ಸಾಪ್ ಮೂಲಕವೇ ಇ-ಖಾತಾ ಕಳುಹಿಸಿಕೊಡಲು ಮುಂದಾಗಿದ್ದಾರೆ. ಪಿಡಿಎಫ್ ರೂಪದಲ್ಲಿ ವಿಶಿಷ್ಟವಾದ ePID ಸಂಖ್ಯೆಯೊಂದಿಗೆ ನೋಂದಾಯಿತ ಮೊಬೈಲ್ ನಂಬರ್ಗೆ ಇ-ಖಾತಾ ತಲುಪಲಿದೆ. ಇದರ ಜೊತೆಗೆ ಆಸ್ತಿ ವಿವರಗಳ ತಿದ್ದುಪಡಿ ಹಾಗೂ ಮಾಲೀಕತ್ವ ಬದಲಾವಣೆಗೂ ಆನ್ಲೈನ್ನಲ್ಲೇ ಅರ್ಜಿ ಸಲ್ಲಿಸುವ ಸೌಲಭ್ಯ ಕಲ್ಪಿಸಲಾಗಿದೆ.
ಒಟ್ಟಿನಲ್ಲಿ, ಡಿಜಿಟಲ್ ತಂತ್ರಜ್ಞಾನದ ಬಳಕೆಯಿಂದ ಜನಸಾಮಾನ್ಯರ ಸೋಗು-ನೋವುಗಳಿಗೆ ಹಾಗೂ ಅಲೆದಾಟಕ್ಕೆ ಇದೀಗ ದೊಡ್ಡ ಮಟ್ಟದ ಮುಕ್ತಿ ಸಿಕ್ಕಂತಾಗಿದೆ ಅಂತಾನೆ ಹೇಳಬಹುದು.




