ರಾಜ್ಯ ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿಗಳು ಕೇವಲ ‘ಸುಳ್ಳಿನ ಗ್ಯಾರಂಟಿ’, ‘ವಂಚನೆಯ ಗ್ಯಾರಂಟಿ’: Chalawadi Narayanaswamy

Political News: ರಾಜ್ಯದ ಜನತೆಗೆ ಐದು ಗ್ಯಾರಂಟಿಗಳ ಆಸೆ ತೋರಿಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ, ಇಂದು ಒಂದು ಕೈಯಲ್ಲಿ ಕೊಟ್ಟು ಮತ್ತೊಂದು ಕೈಯಲ್ಲಿ ಜನರ ಜೇಬಿಗೆ ಕತ್ತರಿ ಹಾಕುತ್ತಿದೆ ಎಂದು ಬಿಜೆಪಿ ನಾಯಕ ಛಲವಾದಿ ನಾರಾಯಣಸ್ವಾಮಿ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಬಸ್ ದರ ಏರಿಕೆ & ಸಾರಿಗೆ ಇಲಾಖೆ ನಷ್ಟ: ಹೆಂಡತಿಗೆ ಉಚಿತ ಬಸ್ ಪ್ರಯಾಣ ಎಂದು ಹೇಳಿ, ಪಕ್ಕದಲ್ಲೇ ಕೂರುವ ಗಂಡನಿಗೆ ಡಬಲ್ ಚಾರ್ಜ್ ಮತ್ತು ತೆರಿಗೆ ಹೊರೆ ಹಾಕಲಾಗುತ್ತಿದೆ. ಈ ಸರ್ಕಾರದ ದುರಾಡಳಿತದಿಂದ ಸಾರಿಗೆ ಇಲಾಖೆ ನಷ್ಟಕ್ಕೆ ಸಿಲುಕಿದ್ದು, ಬಸ್ ದರವನ್ನು ಶೇ. 35 ರಿಂದ 45 ರಷ್ಟು ಏರಿಕೆ ಮಾಡಲಾಗಿದೆ ಎಂದು ಛಲವಾದಿ ವಾಗ್ದಾಳಿ ನಡೆಸಿದ್ದಾರೆ.

ಗೃಹಲಕ್ಷ್ಮಿ ಹೆಸರಿನಲ್ಲಿ ‘ಗ್ಯಾರಂಟಿ ಚೋರಿ’: ಮನೆಯಲ್ಲಿ ಗೌರವದಿಂದ ಬದುಕುತ್ತಿದ್ದ ತಾಯಂದಿರನ್ನು ₹2,000 ನೆಪದಲ್ಲಿ ಅಪಹಾಸ್ಯಕ್ಕೆ ಈಡುಮಾಡಲಾಗಿದೆ. ವಿಳಾಸ ಸರಿ ಇಲ್ಲ, ತೆರಿಗೆ ಪಾವತಿಸುತ್ತಿದ್ದೀರಿ, ಬೇರೆಯವರ ಹೆಸರಿನಲ್ಲಿ ಖಾತೆ ಇದೆ ಎಂಬ ನಾನಾ ನೆಪಗಳನ್ನು ಹೇಳಿ ಫಲಾನುಭವಿಗಳ ಸಂಖ್ಯೆಯನ್ನು ಕಡಿತಗೊಳಿಸಲಾಗುತ್ತಿದೆ. ‘ವೋಟ್ ಚೋರಿ’ ಎಂದು ಬೊಬ್ಬೆ ಹೊಡೆಯುತ್ತಿದ್ದವರು, ಇಂದು ಸ್ವತಃ ‘ಗ್ಯಾರಂಟಿ ಚೋರಿ’ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ವ್ಯಂಗ್ಯವಾಡಿದ್ದಾರೆ.

ಹೆಸರಿಗೆ ಮಾತ್ರ ಯುವನಿಧಿ: ರಾಜ್ಯದ ಯುವಕರಿಗೆ ನೀಡಿದ ‘ಯುವನಿಧಿ’ ಭರವಸೆ ಕೇವಲ ಕಾಗದಕ್ಕೆ ಸೀಮಿತವಾಗಿದೆ. ಇದುವರೆಗೂ ಯುವಕರಿಗೆ ಈ ಯೋಜನೆ ಸಮರ್ಪಕವಾಗಿ ತಲುಪಿಲ್ಲ ಎಂದು ಛಲವಾದಿ ನಾರಾಯಣಸ್ವಾಮಿ ಆರೋಪಿಸಿದ್ದಾರೆ.

ಅನ್ನಭಾಗ್ಯದ ಸುಳ್ಳು: 10 ಕೆಜಿ ಅಕ್ಕಿ ನೀಡುತ್ತೇವೆ ಎಂದು ಭರವಸೆ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನೀಡುತ್ತಿರುವ 5 ಕೆಜಿ ಅಕ್ಕಿಗೇ ತಮ್ಮ ಗ್ಯಾರಂಟಿ ಹೆಸರಿಟ್ಟುಕೊಂಡಿದ್ದಾರೆ. ಉಳಿದ 5 ಕೆಜಿ ಅಕ್ಕಿಯ ಬದಲಿಗೆ ‘ಇಂದಿರಾ ಕಿಟ್’ ನೀಡುವುದಾಗಿ ಹೇಳಿದ್ದ ಭರವಸೆಯೂ ಹುಸಿಯಾಗಿದೆ.

ವಿದ್ಯುತ್ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆ: ವಿದ್ಯುತ್ ದರ ಸೇರಿದಂತೆ ಎಲ್ಲಾ ಅಗತ್ಯ ವಸ್ತುಗಳ ಬೆಲೆ ನಿಯಂತ್ರಣವಿಲ್ಲದೆ ಗಗನಕ್ಕೇರಿದೆ. ಜನಸಾಮಾನ್ಯರ ಬದುಕನ್ನು ದುಸ್ತರಗೊಳಿಸಿರುವ ಈ ಸರ್ಕಾರದ ವಂಚನೆ ಮತ್ತು ಸುಳ್ಳಿನ ಗ್ಯಾರಂಟಿಗಳ ಸತ್ಯಾಸತ್ಯತೆಯನ್ನು ರಾಜ್ಯದ ಪ್ರತಿ ಮನೆಗೂ ತಲುಪಿಸುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.

About The Author