ತುಳಸಿ ಹಬ್ಬ ಹೇಗೆ ಆಚರಿಸಬೇಕು..? ಏನಿದರ ಹಿನ್ನೆಲೆ..?

ಕಾರ್ತಿಕ ಮಾಸದಲ್ಲಿ ಬರುವ ಪ್ರಥಮ ಮತ್ತು ಪ್ರಮುಖ ಹಬ್ಬವೆಂದರೆ ದೀಪಾವಳಿ. ಅದಾದ ಮೇಲೆ ಬರುವ ಹಬ್ಬ ಅಂದ್ರೆ ತುಳಸಿ ಹಬ್ಬ. ವಿಷ್ಣು ಮತ್ತು ವಿಷ್ಣುಪ್ರಿಯ ತುಳಸಿಯನ್ನ ಪೂಜಿಸುವ ಹಬ್ಬ ಇದಾಗಿದೆ. ಹಾಗಾದ್ರೆ ಬನ್ನಿ ತುಳಸಿ ಹಬ್ಬವನ್ನ ಹೇಗೆ ಆಚರಿಸಬೇಕು ಅನ್ನೋ ಬಗ್ಗೆ ತಿಳಿಯೋಣ.

ತುಳಸಿ ಮದುವೆ ಅಂದ್ರೆ ವಿಷ್ಣು ಸ್ವರೂಪವಾದ ನೆಲ್ಲಿಕಾಯಿ ಗಿಡ ಮತ್ತು ಲಕ್ಷ್ಮೀ ಸ್ವರೂಪವಾದ ತುಳಸಿ ಗಿಡವನ್ನ ಇಟ್ಟು ಪೂಜೆ ಮಾಡಲಾಗುತ್ತದೆ. ಪುರಾಣ ಕಥೆಯ ಪ್ರಕಾರ ನಾಲ್ಕು ತಿಂಗಳಿಂದ ಮಲಗಿದ್ದ ವಿಷ್ಣು ತುಳಸಿ ಪೂಜೆಯ ಸಮಯದಲ್ಲಿ ಏಳುತ್ತಾನೆ, ಭಕ್ತರ ಕಷ್ಟವನ್ನ ಕೇಳುತ್ತಾನೆ ಎನ್ನಲಾಗಿದೆ.

ಇನ್ನು ತುಳಸಿ ಪೂಜೆಯನ್ನ ಯಾವ ಸಮಯದಲ್ಲಿ ಮಾಡಬೇಕು ಅನ್ನೋ ಪ್ರಶ್ನೆಗೆ ಉತ್ತರ, ಗೋಧೂಳಿ ಸಮಯದಲ್ಲಿ ತುಳಸಿ ಪೂಜೆ ಮಾಡಲಾಗುತ್ತದೆ. ಹಾಗಾಗಿ ಮುಸ್ಸಂಜೆಯಾಗುವ ಮೊದಲೇ, ಅಂಗಳ ಗುಡಿಸಿ, ಒರೆಸಿ. ತುಳಸಿ ಕಟ್ಟೆ ಶುದ್ಧಗೊಳಿಸಿ, ರಂಗೋಲಿ ಹಾಕಿ ಅಲಂಕರಿಸಲಾಗುತ್ತದೆ.

ಈ ವೇಳೆ ಹತ್ತಿಯ ಮಾಲೆಯನ್ನ ಮಾಡಿ, ತುಳಸಿ ಗಿಡಕ್ಕೆ ಮತ್ತು ನೆಲ್ಲಿ ಗಿಡಕ್ಕೆ ಹಾಕಲಾಗುತ್ತದೆ. ಇದನ್ನ ವಸ್ತ್ರಮಾಲೆ ಅಂತಾ ಕರೆಯುತ್ತಾರೆ. ಇನ್ನು ಅಕ್ಷತೆಯ ರೂಪದಲ್ಲಿ ಕೆಲವರು ಅಕ್ಕಿ ಕಾಳನ್ನೇ ಹಾಕುತ್ತಾರೆ. ಮತ್ತೆ ಕೆಲವರು ಅವಲಕ್ಕಿಯನ್ನ ಹಾಕುತ್ತಾರೆ. ಈ ದಿನ ಪ್ರಸಾದವಾಗಿ ವಿಷ್ಣುವಿಗೆ ಇಷ್ಟವಾಗುವ ಅವಲಕ್ಕಿ ಮತ್ತು ಲಕ್ಷ್ಮೀಗೆ ಇಷ್ಟವಾಗುವ ಬೆಲ್ಲ ಹಾಕಿ ಸಿಹಿ ಅವಲಕ್ಕಿ ಮಾಡುತ್ತಾರೆ. ಪೂಜೆ ವೇಳೆ ಗಂಟೆ, ಜಾಗಟೆ, ಶಂಖ ಬಾರಿಸಿದರೆ ಇನ್ನೂ ಉತ್ತಮ. ಯಾಕಂದ್ರೆ ಲಕ್ಷ್ಮೀ ಗಂಟೆ, ಜಾಗಟೆ, ಶಂಖದ ಸದ್ದು ಕೇಳಲು ಬಲು ಇಷ್ಟವಂತೆ.

ಮುತ್ತೈದೇಯರು ಸೇರಿ ತುಳಸಿ ಗಿಡಕ್ಕೆ ಆರತಿ ಎತ್ತಿ, ಪೂಜೆ ಮಾಡುತ್ತಾರೆ. ಈ ವೇಳೆ ಮುತ್ತೈದೇಯರಿಗೆ ಅರಿಷಿನ, ಕುಂಕುಮ ಕೊಟ್ಟು ಉಡಿ ತುಂಬಲಾಗುತ್ತದೆ. ಈ ದಿನ ಮನೆಯಲ್ಲಿ ಸಾತ್ವಿಕ ಆಹಾರವನ್ನ ತಿನ್ನಬೇಕು ಎಂಬ ಪದ್ಧತಿ ಕೆಲವೆಡೆ ಇದೆ. ಇನ್ನು ತುಳಸಿಗೆ ತಾಳಿ, ಸರ, ಬಳೆಯನ್ನ ಕೆಲವರು ಹಾಕಿದರೆ, ಇನ್ನು ಕೆಲವರು ತುಳಸಿ ಕಟ್ಟೆಯಲ್ಲಿ ಲಕ್ಷ್ಮೀಯ ವಿಗ್ರಹವನ್ನಿಟ್ಟು, ಅದಕ್ಕೆ ಪಂಚಾಮೃತ ಅಭಿಷೇಕ ಮಾಡುತ್ತಾರೆ.

About The Author