ಜಯನಗರದ ‘ಓಂ ಕನ್ನಡ ಮಾರಿಯಮ್ಮನ ಕರುನಾಡ ಸಂಘ’ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಆಚರಣೆ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ರಾಷ್ಟ್ರಕವಿ ಕುವೆಂಪು ಅವರ ಹಾಡನ್ನ ತಿರುಚಿದ್ದು, ಇದಕ್ಕೆ ತೀವ್ರ ಅಸಮಾಧಾನ ಹೊರಬಿದ್ದಿತ್ತು. ಇದರಲ್ಲಿ ಸೌಮ್ಯ ರೆಡ್ಡಿ ಫೋಟೋ ಹಾಕಿ, ಅವರನ್ನ ಆಹ್ವಾನಿಸಲಾಗಿತ್ತು. ಈ ಕಾರಣಕ್ಕೆ ಸೌಮ್ಯ ರೆಡ್ಡಿ ವಿರುದ್ಧ ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ವಿಷಯಕ್ಕೆ ಸಂಬಂಧಿಸಿದಂತೆ ಸೌಮ್ಯ ರೆಡ್ಡಿ, ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕುವ ಮೂಲಕ ಸ್ಪಷ್ಟನೆ ನೀಡಿದ್ದಾರೆ.

” ಜಯನಗರದ ‘ಓಂ ಕನ್ನಡ ಮಾರಿಯಮ್ಮನ ಕರುನಾಡ ಸಂಘ’ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಆಚರಣೆ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ರಾಷ್ಟ್ರಕವಿ ಕುವೆಂಪು ಅವರ ಗೀತೆಯನ್ನು ತಿರುಚಿರುವುದರ ಕುರಿತ ವಿವಾದದಲ್ಲಿ ಅನಗತ್ಯವಾಗಿ ನನ್ನ ಹೆಸರನ್ನು ಎಳೆದು ತರುತ್ತಿರುವುದು ನನ್ನ ಗಮನಕ್ಕೆ ಬಂದಿದೆ.
ರಾಷ್ಟ್ರಕವಿ ಕುವೆಂಪು ಅವರ ಮೇಲೆ ಅಪಾರ ಗೌರವವಿರುವ ನನಗೆ ಕನ್ನಡ ರಾಜ್ಯೋತ್ಸವ ಆಚರಣೆಯ ಈ ಆಮಂತ್ರಣ ಪತ್ರಿಕೆ ತಲುಪಿದ ಕೂಡಲೇ ದಿನಾಂಕ 18-11-20 ರಂದು ಮೇಲ್ಕಂಡ ಸಂಘಟನೆಯ ಅಧ್ಯಕ್ಷರಿಗೆ ಪತ್ರ ಬರೆದು ಆಹ್ವಾನ ಪತ್ರಿಕೆಯಲ್ಲಿ ಉಂಟಾಗಿರುವ ಅಕ್ಷರ ತಪ್ಪನ್ನು “ತಿದ್ದುಪಡಿ ಮಾಡುವ ಜೊತೆಗೆ ಕಾರ್ಯಕ್ರಮದ ದಿನಾಂಕವನ್ನು 22-11-20 ಬದಲಾಗಿ 23-11-20ಕ್ಕೆ ಮುಂದೂಡುವಂತೆ” ತಿಳಿಸಿದ್ದೆ.
ಜಯನಗರ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಕನ್ನಡ ಸಂಘಟನೆಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಶಾಸಕಿಯಾದ ನಾನು ಎಲ್ಲಾ ಕಾರ್ಯಕ್ರಮಗಳಲ್ಲೂ ಭಾಗವಹಿಸುತ್ತ ಬಂದಿದ್ದೇನೆ. ಕಳೆದ ತಿಂಗಳು ಸಹ ಶಾಸಕರ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಆಯುಧ ಪೂಜೆ ಆಚರಣೆಯ ಸಂದರ್ಭದಲ್ಲಿ, ಕಚೇರಿಯಲ್ಲಿ ಮುಂಚಿತವಾಗಿ ಇದ್ದ ಭಾವಚಿತ್ರವನ್ನೇ ಸಂವಿಧಾನದ ಪ್ರತಿಯೊಂದಿಗೆ ಪೂಜೆಗೆ ನಮ್ಮ ಸಿಬ್ಬಂದಿ ಬಳಸಿದ್ದರು. ಆಗಲು ಕೂಡ ಇದೇ ರೀತಿ ಕೆಲವರು ತಮ್ಮ ರಾಜಕೀಯ ಲಾಭಕ್ಕಾಗಿ ಅನಗತ್ಯ ವಿವಾದ ಎಬ್ಬಿಸಿದ್ದರು.
ಕ್ಷೇತ್ರದಲ್ಲಿ ಅವಿರತವಾಗಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳನ್ನು ಸಹಿಸದ ಕೆಲವರು ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿ ಮಾಡುವ ಸಲುವಾಗಿ ಈ ರೀತಿಯ ವ್ಯರ್ಥ ಪ್ರಯತ್ನಗಳನ್ನು ಪದೇ ಪದೇ ಮಾಡುತ್ತಿದ್ದಾರೆ.
GST, ನೆರೆ ಪರಿಹಾರ ಬಿಡುಗಡೆ, IBPS ಪರೀಕ್ಷೆ, ಹಿಂದಿ ಹೇರಿಕೆ, ಮಹದಾಯಿ ನದಿ ನೀರು ಹಂಚಿಕೆ ಮುಂತಾದ ವಿಷಯಗಳಲ್ಲಿ ಕೇಂದ್ರ ಸರ್ಕಾರ ನಿರಂತರವಾಗಿ ಕನ್ನಡಿಗರ ಮೇಲೆ ಮಲತಾಯಿ ಧೋರಣೆ ತೋರಿದಾಗ ರಾಜ್ಯದಿಂದ ಆಯ್ಕೆಯಾದ 25 ಸಂಸದರಲ್ಲಿ ಎಷ್ಟು ಜನ ಪ್ರತಿಭಟಿಸಿದ್ದರು? ಮೈತ್ರಿ ಸರ್ಕಾರದ ಸಂದರ್ಭದಲ್ಲಿ ಜಯನಗರ ಕ್ಷೇತ್ರಕ್ಕಾಗಿ ಬಿಡುಗಡೆಯಾದ 320 ಕೋಟಿ ರೂ ಅನುದಾನದಲ್ಲಿ ಶೇ 61ರಷ್ಟನ್ನು ಹಾಲಿ ಬಿಜೆಪಿ ಸರ್ಕಾರ ಕಡಿತಗೊಳಿಸಿದೆ. ಇದನ್ನು ಪ್ರಶ್ನಿಸಿ ಪ್ರತಿಭಟಿಸುವ ಧೈರ್ಯವಿಲ್ಲದ ಮಾಜಿ ಪಾಲಿಕೆ ಸದಸ್ಯರು ಈಗ ಇಂತಹ ಕ್ಷುಲಕ ವಿಚಾರಕ್ಕೆ ಪ್ರತಿಭಟಿಸುತ್ತಿದ್ದಾರೆ.
ನೂತನವಾಗಿ ಅಭಿವೃದ್ಧಿ ನಿಗಮಗಳನ್ನು ಸ್ಥಾಪಿಸಿ ಅನುದಾನ ನೀಡುವ ಸರ್ಕಾರಕ್ಕೆ, ವೃದ್ಧರ, ವಿಧವೆಯರ, ವಿಚಲಚೇತನರಿಗೆ ಪಿಂಚಣಿ ನೀಡಲು ಹಣವಿಲ್ಲವಾಗಿದೆ. ಕನ್ನಡದ ಕುರಿತು ನಿಜವಾದ ಕಾಳಜಿಯುಳ್ಳವರು ಇಂತಹ ಅತ್ಯಗತ್ಯವಾದ ಜನಪರ ಕಾರಣಗಳಿಗೆ ಪ್ರತಿಭಟಿಸಬೇಕು.
ನನ್ನ ಪ್ರತಿಯೊಂದು ಕಾರ್ಯಕ್ರಮ, ಯೋಜನೆಗಳ ಕುರಿತಂತೆ ಮಾಹಿತಿ ನೀಡಲು ಕಡ್ಡಾಯವಾಗಿ ನಾನು ಕನ್ನಡವನ್ನೇ ಬಳಕೆ ಮಾಡುವುದನ್ನು ತಾವುಗಳು ಈಗಾಗಲೇ ನನ್ನ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಗಮನಿಸಿರುತ್ತೀರ.
ಕನ್ನಡ ನಾಡು ನುಡಿಯ ಕುರಿತು ನನಗಿರುವ ಅಭಿಮಾನ ಮತ್ತು ಬದ್ಧತೆ ಎಂದೆಂದಿಗೂ ಪ್ರಶ್ನಾತೀತ ಎಂಬುದು ಈಗಾಗಲೇ ಎಲ್ಲರಿಗೂ ತಿಳಿದಿದೆ. ನಮ್ಮ ನಾಡಿನ ಶ್ರೀಮಂತ ಸಂಸ್ಕೃತಿಯ ರಕ್ಷಣೆಗೆ ನಾನು ಸದಾ ಸಿದ್ಧಳಿದ್ದೇನೆ.
ಸಾರ್ವಜನಿಕರು ಈ ರೀತಿಯ ವದಂತಿಗಳಿಗೆ ಕಿವಿಗೊಡಬಾರದು ಎಂದು ಈ ಮೂಲಕ ಕೋರುತ್ತೇನೆ.
ಇಂತಿ ನಿಮ್ಮ,
ಸೌಮ್ಯ ರೆಡ್ಡಿ
ಶಾಸಕರು – ಜಯನಗರ”
ಹೀಗೆ ಪೋಸ್ಟ್ ಹಾಕುವ ಮೂಲಕ ಸೌಮ್ಯ ರೆಡ್ಡಿ ಸ್ಪಷ್ಟನೆ ನೀಡಿದ್ದಾರೆ. ಆಹ್ವಾನ ಪತ್ರಿಕೆಯಲ್ಲಿ ಬಾರಿಸು ಕನ್ನಡ ಡಿಂಡಿಮವ ಓ ಕರ್ನಾಟಕ ಹೃದಯ ಶಿವ ಎಂಬ ಹಾಡನ್ನ ಹೃದಯ ಏಸು ಎಂದು ಪ್ರಿಂಟ್ ಮಾಡಲಾಗಿತ್ತು. ಈ ಕಾರಣಕ್ಕೆ ಎಲ್ಲೆಡೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.