ನವೆಂಬರ್ ,29, ಭಾನುವಾರ 65ನೇ ಕನ್ನಡ ರಾಜ್ಯೋತ್ಸವವನ್ನ ‘ಪ್ರಧಾನಮಂತ್ರಿ ಜನ ಕಲ್ಯಾಣಕಾರಿ ಯೋಜನಾ ಪ್ರಚಾರ ಪ್ರಸಾರ ಅಭಿಯಾನದ’ ಬೆಂಗಳೂರು ಗ್ರಾಮಾಂತರ ವಿಭಾಗದ ವತಿಯಿಂದ ಪ್ರಥಮ ವರ್ಷದ ಆಚರಣೆಯನ್ನು ಅದ್ದೂರಿಯಾಗಿ ರಾಜರಾಜೇಶ್ವರಿನಗರದ ಬಿ.ಹೆಚ್.ಇ.ಎಲ್ ಬಡಾವಣೆಯಲ್ಲಿ ಆಚರಿಸಲಾಯಿತು. ಬೆಳಗ್ಗೆ ‘ಒಂಬತ್ತು’ ಗಂಟೆಗೆ ಧ್ವಜಾರೋಹಣ ನೆರವೇರಿಸಿ, ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಈ ಸಮಾರಂಭದ ಉಪಾಧ್ಯಕ್ಷತೆ ವಹಿಸಿಕೊಂಡಿದ್ದ ಶ್ರೀ ಪಟ್ಟಣಗೆರೆ ಜಯಣ್ಣರವರು ಮಾತನಾಡಿ ‘ಕಸುಬು ಅರಸಿ ಕರ್ನಾಟಕಕ್ಕೆ ಬಂದಿರುವವರು ಹೊಟ್ಟೆಪಾಡಿಗೆ ತಮ್ಮ ವೃತ್ತಿ ನಿರ್ವಹಿಸಲಿ ಅದರೊಂದಿಗೆ ಈ ನಾಡಿನ ಕನ್ನಡ ಭಾಷೆ ಕಲಿಯಲು ಪ್ರಯತ್ನಿಸಬೇಕು, ಕನ್ನಡ ಬರುವುದಿಲ್ಲ ಎಂಬ ಕೀಳರಿಮೆಯನ್ನು ಬಿಟ್ಟು ಕನ್ನಡ ಕಲಿಯಲು ಮುಂದಾಗಬೇಕು’ ಎಂದು ನುಡಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಡಾಕ್ಟರ್ ಶಿವಕುಮಾರ್‌ರವರು ಮಾತನಾಡಿ ‘ಕನ್ನಡ ಶಾಸ್ತ್ರೀಯ ಸ್ಥಾನಮಾನ ದೊರೆತಿರುವ ಬಹಳ ಪುರಾತನ ಭಾಷೆಯಾಗಿದ್ದು ಮನೆಯಲ್ಲಿ ತಂದೆ-ತಾಯಿ ಮಕ್ಕಳೊಂದಿಗೆ ಕನ್ನಡ ಭಾಷೆಯನ್ನು ಹೆಚ್ಚು ಬಳಸುವುದರ ಮುಖಾಂತರ ಮುಂದಿನ ಪೀಳಿಗೆಗೆ ಕನ್ನಡವನ್ನು ಬಳುವಳಿಯಾಗಿ ನೀಡಿ ನಾಡುನುಡಿಯನ್ನು ಉಳಿಸಬೇಕು ಮತ್ತು ಕನ್ನಡಕ್ಕೆ ಎಂಟು ಜ್ಞಾನಪೀಠ ಪ್ರಶಸ್ತಿ ದೊರೆತಿದ್ದು ಇದು ಕನ್ನಡದ ಹಿರಿಮೆಗೆ ಸಾಕ್ಷಿ’ ಎಂದು ನುಡಿದರು. ಇನ್ನು ಈ ಸಮಾರಂಭದಲ್ಲಿ ಹಾಜರಿದ್ದ ಅಭಿಯಾನದ ರಾಜ್ಯಾಧ್ಯಕ್ಷರಾದ ಶ್ರೀಮತಿ ಅಮಿತಾ ರಾಣಿ ಪಾಂಡೆಯವರು ಈ ಅಭಿಯಾನದ ಧ್ಯೇಯೋದ್ದೇಶಗಳನ್ನು ಸಾರ್ವಜನಿಕರಿಗೆ ವಿವರಿಸಿದರು. ಈ ಸಮಯದಲ್ಲಿ ಕೇಂದ್ರ ಸರ್ಕಾರದ ‘ಆಯುಷ್ಮಾನ್ ಭಾರತ್’ ಯೋಜನೆಯ ಫಲಾನುಭವಿ ಹೆಚ್. ಎಂ.ಶ್ರೀನಿವಾಸ್ ‘ತಾನು ಅಂಗವಿಕಲ ಮತ್ತು ಕಡುಬಡವ ನಾಗಿದ್ದು ಆಯುಷ್ಮಾನ್ ಕಾರ್ಡ್ ನಿಂದ ತನ್ನ ಶಸ್ತ್ರಚಿಕಿತ್ಸೆಗೆ ಬಹಳ ಅನುಕೂಲವಾಗಿದೆ’ ಎಂದು ಭಾವಪೂರ್ಣವಾಗಿ ತಮ್ಮ ಮನದಾಳವನ್ನು ಹಂಚಿಕೊಂಡರು.
ಇದೇ ಸಂದರ್ಭದಲ್ಲಿ ಅಭಿಯಾನದ ಬೆಂಗಳೂರು ಅರ್ಬನ್ ಅಧ್ಯಕ್ಷರಾಗಿ ಶ್ರೀ ಸಪ್ತಗಿರಿ ಪ್ರಕಾಶ್, ಸ್ಟೇಟ್ ರೂರಲ್ ಡೆವಲಪ್ಮೆಂಟ್ ಪ್ರೆಸಿಡೆಂಟ್ ಆಗಿ ಶ್ರೀ ಶಂಕರ್ ರಾಕೇಶ್ ಮತ್ತು ಸ್ಟೇಟ್ ಲೀಗಲ್ ಅಡ್ವೈಸರ್ ಆಗಿ ಶ್ರೀ ಕುಮಾರ್ ಪಾಟೀಲ್ರವರು ಆಯ್ಕೆಗೊಂಡರು. ಇನ್ನು ಈ ಸಮಾರಂಭವು ಶ್ರೀ ರಘುಪತಿ ನಾಯ್ಡು ಬೆಂಗಳೂರು ಗ್ರಾಮಾಂತರದ ಅಧ್ಯಕ್ಷರ ಸಹಯೋಗದೊಂದಿಗೆ ಡಾ.ಕೆ .ಜಿ .ರಾವ್ ,ಲಕ್ಷ್ಮಿ ಅರಳಿಕಟ್ಟೆ, ಶೋಭಾ ಶಿವಾನಂದ್ ,ಸುನಿಲ್ ಗಾಯತ್ರಿ, ಶಿವನಂಜಪ್ಪ ,ಎಲ್ಲಾ ಸದಸ್ಯರ ಸಹಕಾರದೊಂದಿಗೆ ಯಶಸ್ವಿಯಾಗಿ ನೆರವೇರಿತು.