“ಯಡಿಯೂರಪ್ಪ ಬೆಂಬಲಿತ ಲಿಂಗಾಯತರನ್ನ ಕಾಂಗ್ರೆಸ್ ಗೆ ಕರೆತರ್ತೀನಿ”

ಬೆಳಗಾವಿ: 2023ರ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬೆಂಬಲಿತ ಲಿಂಗಾಯತ ನಾಯಕರನ್ನು ಕಾಂಗ್ರೆಸ್ ಗೆ ಕರೆತರುವ ಪ್ರಯತ್ನ ನಡೆಸಲಾಗುವುದು ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ ಹೇಳಿದರು.

ಶುಕ್ರವಾರ ಬೆಳಗಾವಿಯಲ್ಲಿ ನಗರದಲ್ಲಿರುವ ನಾಗನೂರು ಮಠಕ್ಕೆ ಭೇಟಿ ನೀಡಿ ಮಾಧ್ಯಮದವರೊಂದಿಗೆ ಮಾತನಾಡಿದರು. ಲಿಂಗಾಯತ ಸಮುದಾಯದ ಮಾಸ್ ಲೀಡರ್ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬರುವ ವಿಧಾನಸಭಾ ಚುನಾವಣೆಯ 2023ರಲ್ಲಿ ಯಡಿಯೂರಪ್ಪ ಬೆಂಬಲಿತ ನಾಯಕರನ್ನು ಕಾಂಗ್ರೆಸ್ ಗೆ ಕರೆ ತರಲಾಗುವದು ಎಂದರು.

ಲಿಂಗಾಯತ ನಾಯಕರನ್ನು ಕಾಂಗ್ರೆಸ್ ನಲ್ಲಿ ಕಡೆಗಣನೆ ಮಾಡುತ್ತಿರುವ ವಿಷಯವನ್ನು ರಾಜ್ಯ ಕಾಂಗ್ರೆಸ್ ನಾಯಕರು ಹೈಕಮಾಂಡ್ ಗೆ ತಿಳಿಸುವ ಕಾರ್ಯ ಮಾಡಲಾಗಿದೆ. ವೀರೇಂದ್ರ ಪಾಟೀಲ ಬಳಿಕ ಕಾಂಗ್ರೆಸ್ ಗೆ ಸದ್ಯ ಹಿನ್ನಡೆಯಾಗಿದೆ. ಹಿರಿಯ ಕಾಂಗ್ರೆಸ್ ಲಿಂಗಾಯತ ನಾಯಕರ ಸಲಹೆ ಪಡೆದು ಮತ್ತೇ ಕಾಂಗ್ರೆಸ್ ಅಧಿಕಾರ ತರುವ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.

 ಸ್ವಯಂ ಘೋಷಿತ ನಾನೇ ಮುಖ್ಯಮಂತ್ರಿ, ನಾನೇ ಲಿಂಗಾಯತ ನಾಯಕ ಎಂದು ಹೇಳಲು ಸಾಧ್ಯವಿಲ್ಲ. ಅದು ಜನ ಬಯಸಬೇಕು ಎಂದ ಅವರು, ಕಾಂಗ್ರೆಸ್ ಗೆ ಮೊದಲು ಜನಾದೇಶ ಬರಬೇಕು. 150 ಕ್ಷೇತ್ರಗಳನ್ನು ಗೆಲ್ಲಬೇಕು. ಸಿದ್ದರಾಮಯ್ಯ ನವರ ಆಡಳಿತದಲ್ಲಿ ಉತ್ತಮವಾದ ಸ್ಥೀರವಾದ ಆಡಳಿತ ನೀಡಿದ್ದರು. ಆ ನಿಟ್ಟಿನಲ್ಲಿ ಪಕ್ಷ ಅಧಿಕಾರಕ್ಕೆ ಬರಲಿ ಮುಂದೆ ಸಿಎಂ ವಿಷಯ. ನಮ್ಮಲ್ಲಿ ಹೈಕಮಾಂಡ್, ಕಾಂಗ್ರೆಸ್ ಶಾಸಕರು ಹೇಳಬೇಕು. ಸ್ವಯಂ ಘೋಷಣೆ ಮಾಡಿಕೊಂಡರೆ ಸಾಲದು ಎಂದು ತೀಕ್ಷ್ಣವಾಗಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು.

ಲಿಂಗಾಯತ ಸ್ವತಂತ್ಯ ಧರ್ಮದ ಹೋರಾಟ 12ನೇ ಶತಮಾನದಲ್ಲಿ ಪ್ರಾರಂಭವಾಗಿದ್ದು, ಬಳಿಕ 1938,40,42 ರಲ್ಲಿ ಎಸ್.ಕೆ.ಒಡೆಯರ ಸೇರಿದಂತೆ ಹಲವಾರು ನಾಯಕರು ಹೋರಾಟ ನಡೆಸಿದ್ದರು. ಈ ವಿಚಾರವಾಗಿ ನಾನು ಮಾತನಾಡಲು ಬೆಳಗಾವಿಗೆ ಬಂದಿಲ್ಲ. ಅಂತರಾಷ್ಟ್ರೀಯ ಬಸವಣ್ಣನವರ ಗ್ರಂಥಾಲಯವನ್ನು ವಿಜಯಪುರ ಅಥವಾ ಬೆಂಗಳೂರಿನಲ್ಲಿ ಸ್ಥಾಪನೆ ಮಾಡಬೇಕೆಂಬುದರ ಕುರಿತು ಶ್ರೀಗಳೊಂದಿಗೆ ಚರ್ಚೆ ನಡೆಸಲು ಬಂದಿರುವೆ ಎಂದರು.

ಪೋ.ಗು.ಹಳಕಟ್ಟಿ ಅವರು ತಾವೇ ಪ್ರಕಟಿಸಿದ್ದ ಶಿವಾನುಭವ ಪತ್ರಿಕೆಯನ್ನು ಶೇಖರಣೆ ಮಾಡುವಲ್ಲಿ ನಾಗನೂರು ರುದ್ರಾಕ್ಷಿಮಠ ಬಹುಮುಖ್ಯ ಪಾತ್ರ ವಹಿಸಿದೆ. ಅದನ್ನು ಮರು ಮುದ್ರಣ ಮಾಡಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರನ್ನು ಭೇಟಿ ಮಾಡಿ ವಿನಂತಿಸಲಾಗುವುದು, ಬಸವಣ್ಣನವರು ಹಾಗೂ ಬಸವಾಧಿಶರಣರ ಬಹಳಷ್ಟು ಪುಸ್ತಕಗಳಿವೆ. ಬಸವಣ್ಣನವರ ಅಂತಾರಾಷ್ಟ್ರೀಯ ಗ್ರಂಥಾಲಯ ಸ್ಥಾಪಿಸುವ ಕುರಿತು ನಾಗನೂರು ಶ್ರೀಗಳ ಜತೆಗೆ ಮಾತು ಕತೆ ನಡೆಸಲು ಬಂದಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಮಾಜಿ ಸಂಸದ ಪ್ರಕಾಶ ಹುಕ್ಕೇರಿ, ಬೆಳಗಾವಿ ಗ್ರಾಮೀಣ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ, ರಾಜ್ಯ ಕಿಸಾನ್ ಕಾಂಗ್ರೆಸ್ ರಾಜ್ಯ ಸಂಚಾಲಕ ರಾಜೇಂದ್ರ ಪಾಟೀಲ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು

About The Author