www.karnatakatv.net : ಹುಕ್ಕೇರಿ: ಬೆಳಗಾವಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರ ನೇತೃತ್ವದಲ್ಲಿ ಕಾಂಗ್ರೆಸ್ ನಿಯೋಗ ಇಂದು ಭೇಟಿ ನೀಡಿತು. ಮುಖಂಡರು ಪ್ರವಾಹ ಪೀಡಿತ ಪ್ರದೇಶ ಹಾಗೂ ಪರಿಹಾರ ಕೇಂದ್ರಗಳಿಗೆ ತೆರಳಿ ನಿರಾಶ್ರಿತರಿಗೆ ಸಾಂತ್ವನ ಹೇಳಿದರು.

ಹಿರಣ್ಯಕೇಶಿ ನದಿಯಿಂದ ಪ್ರವಾಹ ಪೀಡಿತವಾಗಿರುವ ಹುಕ್ಕೇರಿ ತಾಲೂಕಿನ ಚಿಕ್ಕಾಲಗುಡ್ಡ, ಕುರಣಿ, ಹೆಬ್ಬಾಳ, ಪಾಶ್ಚಾಪುರ ಹಾಗೂ ಸಂಕೇಶ್ವರ ಪಟ್ಟಣಕ್ಕೆ ಕಾಂಗ್ರೆಸ್ ನಾಯಕರು ಇಂದು ತೆರಳಿ, ಪ್ರವಾಹ ಪೀಡಿತರಿಗೆ ಧೈರ್ಯ ತುಂಬಿದರು. ಸಂತ್ರಸ್ತರಿಗೆ ಸೂಕ್ತ ಸೌಲಭ್ಯ ಕಲ್ಪಿಸುವಂತೆ ಜಿಲ್ಲಾಡಳಿತ ಹಾಗೂ ಸರ್ಕಾರದ ಮೇಲೆ ಒತ್ತಡ ಹಾಕುವ ಭರವಸೆ ನೀಡಿದರು.
ಸಂತ್ರಸ್ತರಿಗೆ ಸಾಂತ್ವನ ಹೇಳಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ, ಸರ್ಕಾರವನ್ನು ಎಚ್ಚರಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ನಿಯೋಗದಿಂದ ಪ್ರವಾಹ ಪೀಡಿತ ಸ್ಥಳಗಳಿಗೆ ಭೇಟಿ ನೀಡುತ್ತಿದ್ದೇವೆ. ಸರ್ಕಾರ ಕೂಡಲೇ ಸಂತ್ರಸ್ಥರಿಗೆ ಸಕಲ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಸಂತ್ರಸ್ತರ ಸಮಸ್ಯೆ ಕೇಳಬೇಕಾದ ಶಾಸಕರು ಹಾಗೂ ಮಂತ್ರಿಗಳೆಲ್ಲ ಬೆಂಗಳೂರಿನಲ್ಲಿದ್ದಾರೆ. ಸರ್ಕಾರವನ್ನು ಉಳಿಸಿಕೊಳ್ಳುವುದರಲ್ಲಿಯೇ ಅವರು ತೊಡಗಿದ್ದಾರೆ ಎಂದು ಸತೀಶ ಆಕ್ರೋಶ ವ್ಯಕ್ತಪಡಿಸಿದರು. ಶಾಸಕರು ಹಾಗೂ ಸರ್ಕಾರ ಕೂಡಲೇ ಸಂತ್ರಸ್ತರ ಸಮಸ್ಯೆಗಳನ್ನು ಆಲಿಸಬೇಕು ಎಂದು ಆಗ್ರಹಿಸಿದರು.

ಕೆಪಿಸಿಸಿ ಅಧ್ಯಕ್ಷರ ಸೂಚನೆಯ ಮೇರೆಗೆ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಸಂತ್ರಸ್ತರ ಸಮಸ್ಯೆಗಳನ್ನು ಆಲಿಸುತ್ತಿದ್ದೇವೆ. ಇಂದು ಹುಕ್ಕೇರಿ ತಾಲೂಕಿನ ವ್ಯಾಪ್ತಿಯ ಗ್ರಾಮಗಳಿಗೆ ಭೇಟಿ ನೀಡಲಾಗಿದ್ದು, ನಾಳೆ ಬೆಳಗಾವಿ, ಖಾನಾಪುರ ತಾಲೂಕು ಸೇರಿ ಇನ್ನಿತರ ಕಡೆಯೂ ಭೇಟಿ ನೀಡುತ್ತೇವೆ ಎಂದು ತಿಳಿಸಿದರು.
ಶಾಸಕರಾದ ಲಕ್ಷ್ಮಿ ಹೆಬ್ಬಾಳಕರ್, ಮಹಾಂತೇಶ ಕೌಜಲಗಿ, ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ವಿನಯ ನಾವಲಗಟ್ಟಿ, ಚಿಕ್ಕೋಡಿ ಜಿಲ್ಲಾ ಘಟಕದ ಅಧ್ಯಕ್ಷ ಲಕ್ಷ್ಮಣರಾವ ಚಿಂಗಳೆ, ಮುಖಂಡರಾದ ಎ.ಬಿ. ಪಾಟೀಲ, ರಾಜೇಂದ್ರ ಪಾಟೀಲ್, ಕಿರಣ ರಜಪೂತ, ಹುಕ್ಕೇರಿ ತಹಶೀಲ್ದಾರ್ ಡಿ.ಎಚ್. ಹೂಗಾರ, ಉಮೇಶ ಸಿದ್ನಾಳ, ತಾಲೂಕಾ ವೈದ್ಯಾಧಿಕಾರಿ ಡಾ. ಉದಯ ಕುಡಚಿ, ಸಂಕೇಶ್ವರ ಪುರಸಭೆ ಅಧಿಕಾರಿ ಜಗದೀಶ ಇಟಿ, ಯಮಕಮರಡಿ ಪಿಎಸ್‍ಐ ಬಿ.ಬಿ. ನ್ಯಾಮಗೌಡ, ಮಹಾಂತೇಶ ಮಗದುಮ, ಇಲಿಯಾಸ ಇನಾಮದಾರ, ಪಪ್ಪುಗೌಡ ಪಾಟೀಲ, ಈರಣ್ಣಾ ಬಿಸಿರೊಟ್ಟಿ, ಗಣಪತಿ ಕೊಗನೊಳ್ಳಿ ಸೇರಿ ಇನ್ನಿತರರು ಇದ್ದರು.

