www.karnatakatv.net : ಹುಬ್ಬಳ್ಳಿ: ಪಕ್ಷದಲ್ಲಿ ಸಾಮಾಜಿಕ ನ್ಯಾಯದ ಆಧಾರದ ಮೇಲೆ ಟಿಕೆಟ್ ಹಂಚಿಕೆ ಮಾಡಲಾಗಿದೆ. ಈ ಬಾರಿಯೂ ಪಕ್ಷದ ಎಲ್ಲ ಕಾರ್ಯಕರ್ತರು ಒಗ್ಗೂಡಿ ಅಭ್ಯರ್ಥಿಗಳನ್ನು ಗೆಲಿಸುವಲ್ಲಿ ಶ್ರಮಿಸಲಾಗುವುದು. ಈ ಬಾರಿಯೂ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಹ್ಯಾಟ್ರಿಕ್ ಗೆಲುವು ಸಾಧಿಸುವುದು ನಿಶ್ಚಿತ ಎಂದು ಸಚಿವ ಶಂಕರಪಾಟೀಲ ಮುನೇನಕೊಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಈಗಾಗಲೇ ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯ 82 ವಾರ್ಡ್ ಗಳಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ನಾಮಪತ್ರ ಸಲ್ಲಿಕೆ ಕೂಡ ಪೂರ್ಣಗೊಂಡಿದೆ. ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಜನರಿಗೆ ಕೊರೋನಾ ಸಂದರ್ಭದಲ್ಲಿ ಆಕ್ಸಿಜನ್ ಕಿಟ್, ಬೆಡ್ ಒದಗಿಸುವುದು ಸೇರಿದಂತೆ ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗಿದ್ದು, ಯಾವುದೇ ಪಕ್ಷ ನೋಡದೇ ಎಲ್ಲರಿಗೂ ಸರ್ಕಾರದ ಯೋಜನೆಯನ್ನು ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಿದ್ದೇವೆ.
ಇನ್ನು ರಾಷ್ಟ್ರೀಯ ಪಕ್ಷದಲ್ಲಿ ಬಂಡಾಯ ಸರ್ವೇಸಾಮಾನ್ಯ ಅದನ್ನು ಬಗೆಹರಿಸಿ ಮತ್ತೆ ಕಾರ್ಯಕರ್ತರು ಪಕ್ಷಕ್ಕಾಗಿ ದುಡಿಯಲಿದ್ದಾರೆ. ಹು-ಧಾ ಮಹಾನಗರ ಅಭಿವೃದ್ಧಿಯ ಪಕ್ಷದ ಪ್ರಣಾಳಿಕೆ ತಯಾರಿಸಲಾಗುತ್ತಿದ್ದು, ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದರು.
ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಮಾತನಾಡಿ, ಹು-ಧಾ ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರನ್ನು ಒಗ್ಗೂಡಿಸುವ ಕೆಲಸ ಮಾಡಲಾಗುತ್ತಿದೆ. ಸಚಿವ ಶಂಕರಪಾಟೀಲ ಮುನೇನಕೊಪ್ಪ ಅವರ ಉಸ್ತುವಾರಿಯಲ್ಲಿ ಗ್ರಾಮಾಂತರ ಪಕ್ಷದ ಪದಾಧಿಕಾರಿಗಳನ್ನು ನಗರ ಘಟಕಕ್ಕೆ ಸೇರಿಸಲಾಗುತ್ತಿದೆ. ಈ ಮೂಲಕ ಪಾಲಿಕೆ ಚುನಾವಣೆ ಗೆಲುವು ಸಾಧಿಸಲು ಎಲ್ಲ ರೀತಿಯ ಸಿದ್ದತೆ ನಡೆಸಲಾಗಿದೆ ಎಂದರು.
ಕರ್ನಾಟಕ ಟಿವಿ- ಹುಬ್ಬಳ್ಳಿ

