www.karnatakatv.net :ಬೈಲಹೊಂಗಲ: ಶುಕ್ರವಾರ ಸಾಯಂಕಾಲ ಸುರಿದ ಬಾರಿ ಮಳೆಯಿಂದ ಬೈಲಹೊಂಗಲ ಮುನವಳ್ಳಿ ರಾಜ್ಯ ಹೆದ್ದಾರಿ ಹೊಸೂರ ಸಮೀಪದ ಯಕ್ಕುಂಡಿ ಸೇತುವೆ ಸಂಪೂರ್ಣ ನೀರಿನಿಂದ ಮುಳಗಡೆಯಾಗಿ ಸಂಪರ್ಕ ಕಳೆದುಕೊಂಡಿದೆ.
ಶುಕ್ರವಾರ ಸಂಜೆ ಸಮಯದಲ್ಲಿ ಧಾರಾಕಾರ ಮಳೆ ಸುರಿದ ಪರಿಣಾಮ ಬೈಲಹೊಂಗಲದಿಂದ ಹೊಸೂರ ಮಾರ್ಗವಾಗಿ ಮುನವಳ್ಳಿ, ಸೋಗಲ ಕ್ಷೇತ್ರ, ಮಲ್ಲೂರ, ಯಕ್ಕುಂಡಿ, ಬಡ್ಲಿ, ಮಾಟೋಳ್ಳಿ, ದೂಪದಾಳ, ಕಾರ್ಲಕಟ್ಟಿ,ವೆಂಕಟೇಶ ನಗರಗಳಿಗೆ ತೆರಳುವ ಮಾರ್ಗ ಮಧ್ಯದಲ್ಲಿರುವ ಹೊಸೂರ ಗ್ರಾಮದ ದೊಡ್ಡ ಹಳ್ಳದ ಸೇತುವೆ ಸಂಪೂರ್ಣವಾಗಿ ನೀರಿನಲ್ಲಿ ಮುಳಗಿ ಹೋಗಿದೆ. ಇದರಿಂದ ನೂರಾರು ಪ್ರಯಾಣಿಕರು ತಮ್ಮ ಗ್ರಾಮಗಳಿಗೆ ತೆರಳದೆ ಸೇತುವೆ ದಡದಲ್ಲಿ ಕಾಲ ಕಳೆಯುವಂತಾಗಿದೆ.
ಕಳೆದ ಸಾಲಿನಲ್ಲಿ ಸುಮಾರು 47 ಕೋಟಿ ರೂಪಾಯಿಗಳಲ್ಲಿ ಬೈಲಹೊಂಗಲದಿಂದ ಬಡ್ಲಿ ಗ್ರಾಮದವರೆಗೆ ಹೊಸ ರಸ್ತೆ ನಿರ್ಮಾಣವಾಗಿದೆ. ಆದರೆ ಈ ಸೇತುವೆಯನ್ನು ನಿರ್ಮಾಣ ಮಾಡದೆ ಸೇತುವೆಯ ಮೇಲೆ ಡಾಂಬರಿಕರಣ ಮಾಡಿ ಲೊಕೊಪಯೋಗಿ ಇಲಾಖೆ ತನಗೂ ಇದಕ್ಕು ಸಂಬಂಧವೆ ಇಲ್ಲ ಎನ್ನುವ ರೀತಿಯಲ್ಲಿ ಇದೆ.
ಸೇತುವೆ ಎತ್ತರಿಸಲೂ ಗ್ರಾಮದ ಅನೇಕ ಮುಖಂಡರು ಕಳೆದ ಹತ್ತಾರು ವರ್ಷದಿಂದ ಆಗ್ರಹಿಸಿದರು ಇದಕ್ಕೆ ಕವಡೆ ಕಾಸಿನ ಕಿಮ್ಮತ್ತು ಸಿಕ್ಕಿಲ್ಲ. ಮಳೆ ಆವಾಂತರದಿಂದ ಪ್ರತಿ ವರ್ಷ ಈ ಸಮಸ್ಯೆ ಇದ್ದೆ ಇದೆ. ಸೇತುವೆ ಆಚೆಗೆ ಜಮೀನುಗಳಿಗೆ ಹೋದ ರೈತರು ಸಾಯಂಕಾಲ ಮನೆಗೆ ಬರಲಾಗದೆ ಸುರಿಯುವ ಮಳೆಯಲ್ಲಿ ಕಾಲ ಕಳೆಯುವ ಅನಿವಾರ್ಯತೆ ಒಂದು ಕಡೆಯಾದರೆ ಹತ್ತಾರು ಹಳ್ಳಿಗಳಿಗೆ ಹೋಗಬೇಕಾದ ಪ್ರಯಾಣಿಕರು ನಡು ರಸ್ತೆಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗುವವರೆಗೆ ಸೇತುವೆ ಪಕ್ಕದಲ್ಲಿ ಕಾಲಕಳೆಯುವಂತಾಗಿದ್ದು ಇತ್ತಕಡೆ ಜನಪ್ರತಿನಿಧಿಗಳು ಅಧಿಕಾರಿಗಳು ತಕ್ಷಣ ಗಮನ ಹರಿಸಿ ಸೇತುವೆ ಎತ್ತರಿಸಲು ಕ್ರಮ ತಗೆದುಕೊಳ್ಳಬೇಕು ಎಂದು ಊರಿನ ಮುಖಂಡರು ಆಗ್ರಹಿಸಿದರು.
ಹಾಗೇಯೆ ಈ ಸಂದರ್ಭದಲ್ಲಿ ಗ್ರಾಮದ ಶಿವರಾಜ ಮಾಕಿ, ಮಹೇಶ ಮತ್ತಿಕೊಪ್ಪ, ಮಂಜು ಬೂದಿಹಾಳ, ರವಿ ಮಾಕಿ, ಮೋಹನ ವಕ್ಕುಂದ, ಸೋಮು ಹುರಳಿ, ವಿಶ್ವನಾಥ ಬುಡಶೆಟ್ಟಿ, ಪ್ರಶಾಂತ ಚಿಕ್ಕೊಪ್ಪ, ಮಾರುತಿ ಕಿತ್ತೂರ, ಸುನೀಲ ಮೇಟಿ, ಮಹೇಶ ಅಡಕಿ ಮುಂತಾದ ಪ್ರಜ್ಞಾವಂತ ನಾಗರಿಕರು ಇದ್ದರು.
ನಾಗೇಶ್ ಕುಂಬಳಿ, ಕರ್ನಾಟಕ ಟಿವಿ- ಬೆಳಗಾವಿ.