ಬೆಂಗಳೂರು: ನಿನ್ನೆ ತಡರಾತ್ರಿ ಗೋಡೆಯೊಂದಕ್ಕೆ ಕಾರು ಡಿಕ್ಕಿ ಹೊಡೆದು ಶಾಸಕನ ಪುತ್ರ ಸೇರಿ 7 ಮಂದಿ ದಾರುಣವಾಗಿ ಮೃತಪಟ್ಟಿದ್ದಾರೆ.
ನಿನ್ನೆ ತಡರಾತ್ರಿ ಸಿಲಿಕಾನ್ ಸಿಟಿ ಭೀಕರ ರಸ್ತೆ ಅಪಘಾತಕ್ಕೆ ಸಾಕ್ಷಿಯಾಗಿದೆ. ನಗರದ ಹೃದಯ ಭಾಗದಲ್ಲಿರೋ ಆಡುಗೋಡಿ ಬಳಿ ಈ ದುರ್ಘಟನೆ ನಡೆದಿದ್ದು, ಘಟನೆಯಲ್ಲಿ ತಮಿಳುನಾಡಿನ ಡಿಎಂಕೆ ಶಾಸಕ ಪ್ರಕಾಶ್ ಪುತ್ರ ಕರುಣಾ ಸಾಗರ್ ಸೇರಿದಂತೆ ಆತನ ೬ ಮಂದಿ ಸ್ನೇಹಿತರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮೂಲತಃ ತಮಿಳುನಾಡಿನ ಕರುಣಾಸಾಗರ್ ನಿನ್ನೆ ತಮ್ಮ ಭಾವೀ ಪತ್ನಿ ಬಿಂದು ಎಂಬಾಕೆಯನ್ನು ಭೇಟಿಯಾಗಲು ಸ್ನೇಹಿತ ಉತ್ಸವ್ ಜೊತೆ ನಗರಕ್ಕೆ ಬಂದಿದ್ದ ಎನ್ನಲಾಗಿದೆ. ಬಿಂದು ಜೊತೆ ಸ್ನೇಹಿತರಾದ ಇಶಿಕಾ, ಕಾರ್ತಿಕ್, ಧನುಷಾ, ಅಕ್ಷಯ್,ರೋಹಿತ್ ಕೂಡ ಕರುಣಾಸಾಗರ್ ಕಾರಿನಲ್ಲೇ ಸುತ್ತಾಡಲು ತೆರಳಿದ್ರು. ಈ ವೇಳೆ ರಾತ್ರಿ ಊಟ ಮುಗಿಸಿಕೊಂಡು ಎಲ್ಲರೂ ಹಿಂದಿರುಗುತ್ತಿದ್ದಾಗ, ಆಡುಗೋಡಿಯ ಬಳಿ ನಿಯಂತ್ರಣ ತಪ್ಪಿದ ಕಾರು ಗೋಡೆಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಐಶಾರಾಮಿ ಆಡಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಪರಿಣಾಮ ಕಾರಿನಲ್ಲಿದ್ದ ೬ ಮಂದಿ ಸ್ಥಳದಲ್ಲೇ ಪ್ರಾಣಬಿಟ್ಟರೆ, ಓರ್ವ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಇನ್ನು ಈ ಘಟನೆಗೆ ಅತಿಯಾದ ವೇಗದಲ್ಲಿ ಕಾರು ಚಲಾಯಿಸುತ್ತಿದ್ದೇ ಕಾರಣ ಎಂದು ಹೇಳಲಾಗ್ತಿದೆ. ಕಾರಿನ ವೇಗ ಎಷ್ಟಿತ್ತು ಅಂದ್ರೆ, ಕಾರಿನ ಚಕ್ರವೊಂದು ಕಳಚಿಕೊಂಡು ಹತ್ತಾರು ಅಡಿ ದೂರಕ್ಕೆ ಹಾರಿ ಬಿದ್ದಿದೆ.
ಇನ್ನು ಕಾರಿನಲ್ಲದ್ದ ಎಲ್ಲರೂ ಸೀಟ್ ಬೆಲ್ಟ್ ಹಾಕದೇ ಇದ್ದದ್ದು ಮೃತ್ಯುಪಾಷವಾಗಿದೆ. ಕನಿಷ್ಟ ಪಕ್ಷ ಸೀಟ್ ಬೆಲ್ಟ್ ಹಾಕಿದ್ದರೆ ಒಂದಿಬ್ಬರಾದ್ರೂ ಬದುಕುಳಿಯುತ್ತಿದ್ದರು. ಕಾರಿನಲ್ಲಿ ಸೀಟ್ ಬೆಲ್ಟ್ ಹಾಕದ ಹೊರತು ಏರ್ ಬ್ಯಾಗ್ ತೆರೆದುಕೊಂಡು ಜೀವಕ್ಷಕವಾಗಿ ಕಾಪಾಡ್ತಿತ್ತು. ಆದ್ರೆ ದುರಾದೃಷ್ಟವಶಾತ್ ಸೀಟ್ ಬೆಲ್ಟ್ ಹಾಕಲು ಮೆರೆತು ನಿರ್ಲಕ್ಷ್ಯ ವಹಿಸಿದ್ದು ಅವಘಡಕ್ಕೆ ಕಾರಣವಾಗಿದೆ. ಇನ್ನು ಸದ್ಯ ಪ್ರಕರಣ ದಾಖಲಿಸಿಕೊಂಡಿರೋ ಆಡುಗೋಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.




