www.karnatakatv.net :ತುಮಕೂರು : ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಕುಪ್ಪೂರು ಗದ್ದುಗೆ ಮಠದ ಶ್ರೀ ಯತೀಂದ್ರ ಶಿವಾಚಾರ್ಯ ಸ್ವಾಮೀಜಿ ಕೊರೊನಾ ಸೋಂಕಿನಿಂದ ಮೃತಪಟ್ಟಿರುವುದು ದೃಢವಾಗಿದೆ. ರೋಗದ ಗುಣ ಲಕ್ಷಣಗಳನ್ನ ಪತ್ತೆ ಹಚ್ಚುವಲ್ಲಿ ವಿಫಲರಾದ ಸ್ಥಳೀಯ ಖಾಸಗಿ ವೈದ್ಯರಿಗೆ ಕಾರಣ ಕೇಳಿ ನೋಟೀಸ್ ನೀಡಿದೆ ಅರೋಗ್ಯ ಇಲಾಖೆ.
ಜನಸಾಮಾನ್ಯರಿಗೆ ಕೋವಿಡ್ ಸಂದರ್ಭದಲ್ಲಿ ಸರಿಯಾದ ಚಿಕಿತ್ಸೆ ಸಿಗದೆ ಅದೆಷ್ಟೋ ಸಾವು ಸಂಭವಿಸಿದೆ. ದುರಂತ ಅಂದ್ರೆ ಲಕ್ಷಾಂತರ ಭಕ್ತರನ್ನ ಹೊಂದಿದ್ದ ತುಮಕೂರಿನ ಚಿಕ್ಕನಾಯಕಹಳ್ಳಿಯ ಕುಪ್ಪೂರು ಮಠದ ಶ್ರೀಗಳು ಮೃತಪಟ್ಟಿದ್ದರು. ಕೋವಿಡ್ ನಿಯಮಗಳ ಅಡಿ ಅಂತ್ಯಸಂಸ್ಕಾರ ಕೂಡ ನೆರವೇರಿಸಲಾಗಿತ್ತು. ಅಂತ್ಯ ಸಂಸ್ಕಾರದ ಬಳಿಕ ಈಗ ಕೋವಿಡ್ ವರದಿ ವೈದ್ಯರ ಕೈ ಸೇರಿದೆ. ಇದಕ್ಕೆ ಕಾರಣ ತಕ್ಷಣ ಚಿಕಿತ್ಸೆ ದೊರೆಯದೆ ಇರೋದು. ಜೊತೆಗೆ ರೋಗದ ಗುಣ ಲಕ್ಷಣಗಳನ್ನು ಪತ್ತೆ ಹಚ್ಚುವಲ್ಲಿ ಹಾಗೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸಲಹೆ ನೀಡದ ಸ್ಥಳೀಯ ಖಾಸಗಿ ವೈದ್ಯರಿಗೆ ಕಾರಣ ಕೇಳಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗೇಂದ್ರಪ್ಪ ನೋಟಿಸ್ ಜಾರಿ ಮಾಡಿದ್ದಾರೆ.
ಈ ಕುರಿತಂತೆ ಸ್ಪಷ್ಟನೆ ನೀಡಿರುವ ಡಾ. ನಾಗೇಂದ್ರಪ್ಪ, ಸೆ.23ರಂದು ಸ್ವಾಮೀಜಿ ಕೊರೊನಾ ಸೋಂಕಿನ ಗುಣಲಕ್ಷಣಗಳನ್ನು ಹೊಂದಿದ್ದರೂ ಅವರಿಗೆ ಅರಿವಿಗೆ ಬಂದಿರಲಿಲ್ಲ. ಅಲ್ಲದೇ ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯರ ಬಳಿ ಚಿಕಿತ್ಸೆ ಪಡೆದಿದ್ದರು. ಆದರೆ, ವೈದ್ಯರು ಸಾಮಾನ್ಯ ಜ್ವರ ಎಂಬಂತೆ ಇದನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ನಂತರ ಸ್ವಾಮೀಜಿ ವಾಪಸ್ ಮಠಕ್ಕೆ ತೆರಳಿ ತಮ್ಮ ಎಂದಿನ ಪೂಜಾ ವಿಧಿ-ವಿಧಾನಗಳಲ್ಲಿ ತೊಡಗಿಸಿಕೊಂಡಿದ್ದರು. ಸೆ.24ರಂದು ಸೋಂಕು ದೇಹದಲ್ಲಿ ವ್ಯಾಪಿಸಿತ್ತು. ಉಸಿರಾಟದ ತೊಂದರೆ ಕಾಣಿಸಿತ್ತು ಹೀಗಾಗಿ, ತಕ್ಷಣ ಚಿಕಿತ್ಸೆಗಾಗಿ ಮಠದ ಭಕ್ತರು ತುಮಕೂರಿನ ಶ್ರೀ ಸಿದ್ಧಗಂಗಾ ಆಸ್ಪತ್ರೆಗೆ ದಾಖಲು ಮಾಡಿದ್ದರು. ನಂತರ ಅವರ ಗಂಟಲು ದ್ರವ ಪರೀಕ್ಷೆಯನ್ನು ನಡೆಸಲಾಯಿತು. ಅವರ ದೇಹದಲ್ಲಿ ಕೊರೊನಾ ಸೋಂಕು ಇರುವುದು ಪತ್ತೆಯಾಗಿತ್ತು.
ಅಷ್ಟೊತ್ತಿಗಾಗಲೇ ಅವರ ಲಂಗ್ಸ್ ಸೇರಿ ದೇಹದ ಬಹುತೇಕ ಕಡೆ ಸೋಂಕು ವ್ಯಾಪಿಸಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸೆ.25ರಂದು ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ಸೇರಿದಂತೆ ಮಠದ ಭಕ್ತರು ಸಿದ್ಧತೆ ಮಾಡಿಕೊಂಡಿದ್ದರು. ಅದರಂತೆ ಸೆ.25ರಂದು ಬೆಳಗ್ಗೆ ಬೆಂಗಳೂರಿಗೆ ಕರೆದುಕೊಂಡು ಹೋಗುವ ಮಾರ್ಗ ಮಧ್ಯೆ ಸ್ವಾಮೀಜಿ ಅಸುನೀಗಿದ್ದರು.
ಕುಪ್ಪೂರು ಗದ್ದುಗೆ ಮಠದ ಶ್ರೀ ಯತೀಂದ್ರ ಶಿವಾಚಾರ್ಯ ಸ್ವಾಮೀಜಿಸ್ವಾಮೀಜಿಯವರ ದೇಹದಲ್ಲಿ ಕಾಣಿಸಿದ್ದ ಸೋಂಕಿನ ಕುರಿತು ಸ್ಥಳೀಯ ವೈದ್ಯರು ಪತ್ತೆ ಮಾಡದೆ ಇರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಈ ಕುರಿತಂತೆ ಸ್ಪಷ್ಟನೆ ನೀಡುವಂತೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಮಾಹಿತಿ ನೀಡಿದ್ದಾರೆ. ಸೆಪ್ಟೆಂಬರ್ 23 ಹಾಗೂ 24ರಂದು ಸ್ವಾಮೀಜಿ ಮಠದಲ್ಲಿ ಕೆಮ್ಮು ಹಾಗೂ ರೋಗದ ಗುಣಲಕ್ಷಣಗಳು ಇದ್ದರೂ ಪೂಜಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು ಎಂದು ತಿಳಿದು ಬಂದಿದೆ. ಸ್ಥಳೀಯ ಖಾಸಗಿ ವೈದ್ಯರು ಕೊಂಚ ಎಚ್ಚರಿಸಿದ್ದರೂ ಶ್ರೀಗಳು ನಮ್ಮನೆಲ್ಲಾ ಬಿಟ್ಟು ಹೋಗುತ್ತಿರಲಿಲ್ಲ.
ದರ್ಶನ್ ಕೆ.ಡಿ.ಆರ್, ಕರ್ನಾಟಕ ಟಿವಿ- ತುಮಕೂರು