www.karnatakatv.net: ಪಿಂಚಣಿದಾರರಿಗೆ ಹಾಗೂ ಕೇಂದ್ರ ಸರ್ಕಾರಿ ನೌಕರರಿಗೆ ಶೇ 3 ರಷ್ಟು ತುಟ್ಟಿಭತ್ಯೆ ನೀಡುವ ಪ್ರಸ್ತಾವಕ್ಕೆ ಕೇಂದ್ರ ಸಚಿವ ಸಂಪುಟ ಇಂದು ಅನುಮೋದನೆ ನೀಡಿದೆ.
ಕಳೆದ ತಿಂಗಳಲ್ಲಿ ಹಣಕಾಸು ಇಲಾಖೆಯು ಜ್ಞಾಪನಾ ಪತ್ರವೊಂದನ್ನು ಹೊರಡಿಸಿ ನಿವೃತ್ತ ಕೇಂದ್ರ ಸರ್ಕಾರಿ ನೌಕರರಿಗೆ ಗ್ರಾಚ್ಯುಟಿ ಮತ್ತು ನಗದು ಪಾವತಿಯ ವಿವರ ನೀಡಿತ್ತು. ಶೇ 17ರಿಂದ ಶೇ 28ಕ್ಕೆ ತುಟ್ಟಿಭತ್ಯೆ ಹಾಗೂ ಬೆಲೆಏರಿಕೆ ಪರಿಹಾರ ಒದಗಿಸುವ ಪ್ರಸ್ತಾವಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿತ್ತು. ಕೇಂದ್ರ ಸರ್ಕಾರದ ಈ ನಿರ್ಧಾರವು ಕಳೆದ ಜುಲೈ 1, 2021ರಿಂದಲೇ ಪೂರ್ವಾನ್ವಯವಾಗಲಿದೆ. ಈ ಹೊಸ ಪ್ರಸ್ತಾವ ಅನುಷ್ಠಾನಕ್ಕೆ ಬಂದ ನಂತರ ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆಯು ಶೇ 31ಕ್ಕೆ ಏರಿಕೆಯಾಗಲಿದ್ದು, ಈ ಕುರಿತು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಸುದ್ದಿಗೋಷ್ಠಿ ನಡೆಸಿ ವಿವರ ನೀಡುವ ಸಾಧ್ಯತೆಯಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಈ ಅವಧಿಯಲ್ಲಿ ನಿವೃತ್ತರಾಗಿರುವ ಉದ್ಯೋಗಿಗಳಿಗೆ ನೀಡುವ ತುಟ್ಟಿಭತ್ಯೆಯ ವಿವರವನ್ನೂ ಕೇಂದ್ರ ಸರ್ಕಾರ ಒದಗಿಸಿದೆ. ಜನವರಿ 1, 2020ರಿಂದ ಜೂನ್ 30, 2020ರ ಅವಧಿಗೆ ಮೂಲ ವೇತನದ ಶೇ 21, ಜುಲೈ 1, 2020ರಿಂದ ಡಿಸೆಂಬರ್ 31, 2020ರ ಅವಧಿಗೆ ಶೇ 24, ಜನವರಿ 1, 2021ರಿಂದ ಮೇ 30, 2021ರ ಅವಧಿಗೆ ಶೇ 28 ಎಂದು ನಿಗದಿಪಡಿಸಲಾಗಿದೆ.




