www.karnatakatv.net: ಪಂಜಾಬ್ ನ ಮಾಜಿ ಮುಖ್ಯ ಮಂತ್ರಿ ಅಮರೀಂದರ್ ಸಿಂಗ್ ಇಂದು ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಲಿದ್ದಾರೆ ಎನ್ನುವ ಮಾತು ಎಲ್ಲರಲ್ಲೂ ಕುತೂಹಲ ಕೆರಳಿಸಿದೆ.
ಹೌದು.. ಅಮರಿಂದರ್ ಸಿಂಗ್ ಅಧಿಕಾರದಿಂದ ಕೆಳಗೆ ಇಳಿದ ನಂತರ ಇದು 3ನೇ ಸಲ ಅಮಿತ್ ಶಾ ಅವರನ್ನು ಭೇಟಿಯಾಗುತ್ತಿರುವುದು. ಕೇಂದ್ರ ಸರ್ಕಾರದ ಕೃಷಿ ಕಾನೂನುಗಳಿಗೆ ಸಂಬoಧಿಸಿದ ಸಮಸ್ಯೆಗಳ ಬಗ್ಗೆ ಚರ್ಚಿಸಲು ಕೃಷಿ ತಜ್ಞರ ಜೊತೆ ಅಮರೀಂದರ್ ಸಿಂಗ್ ಅಮಿತ್ ಶಾ ಅವರನ್ನು ಭೇಟಿಯಾಗಲಿದ್ದಾರೆ. ಉತ್ತರ ರಾಜ್ಯದ ರೈತರು ಕೃಷಿ ಕಾಯ್ದೆಯ ವಿರುದ್ಧ ದೆಹಲಿ ಗಡಿಯಲ್ಲಿ ಪ್ರತಿಭಟೆಯನ್ನು ನಡೆಸುತ್ತಿದ್ದಾರೆ. ರೈತರ ಸಮಸ್ಯೆಗಳನ್ನು ಬಗೆಹರಿಸಿದರೆ ಪಂಜಾಬ್‌ನಲ್ಲಿ ವಿಧಾನಸಭಾ ಚುನಾವಣೆಗೆ ಮುನ್ನ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆಯೂ ಇರುವುದರಿಂದ ಅಮರೀಂದರ್ ಸಿಂಗ್ ಮತ್ತು ಅಮಿತ್ ಶಾ ಭೇಟಿ ಮಹತ್ವವನ್ನು ಪಡೆದುಕೊಂಡಿದೆ.
ಪತ್ರಿಕಾಗೋಷ್ಠಿ ನಡೆಸಿದ ಅಮರೀಂದರ್ ಸಿಂಗ್ ಪಂಜಾಬ್ ನಲ್ಲಿ ಹೊಸ ರಾಜಕೀಯ ಪಕ್ಷವನ್ನು ರಚಿಸುವ ಬಗ್ಗೆ ಮತ್ತು ಅಮಿತ್ ಶಾ ಅವರೊಂದಿಗಿನ ಭೇಟಿಯ ಬಗ್ಗೆ ಘೋಷಿಸಿದರು. ನಾನು ಪಂಜಾಬ್‌ನ ಮುಖ್ಯಮಂತ್ರಿಯಾಗಿರುವುದರಿoದ ಮತ್ತು ಕೃಷಿಕನಾಗಿರುವುದರಿಂದ ರೈತರ ಸಮಸ್ಯೆಗೆ ಪರಿಹಾರವನ್ನು ಕಂಡುಹಿಡಿಯಲು ನನ್ನಿಂದ ಸಹಾಯವಾಗಬಹುದು ಎಂದು ನಾನು ಭಾವಿಸುತ್ತೇನೆ ಎಂದು ಅಮರೀಂದರ್ ಸಿಂಗ್ ನಿನ್ನೆ ಹೇಳಿದ್ದಾರೆ. ಹಾಗೇ, ರಾಷ್ಟ್ರದ ಹಿತಾಸಕ್ತಿಗೆ ಆದ್ಯತೆ ನೀಡುವ ಯಾರೊಂದಿಗಾದರೂ ನಮ್ಮ ಹೊಸ ಪಕ್ಷ ಮೈತ್ರಿಗೆ ಮುಕ್ತವಾಗಿದೆ ಎಂದು ಹೇಳಿದ್ದು ಕುತೂಹಲಕ್ಕೆ ಕಾರಣವಾಗಿತ್ತು.
‘ಸಮಯ ಬಂದಾಗ ನಾವು ಎಲ್ಲಾ 117 ಸ್ಥಾನಗಳಲ್ಲಿ ಹೋರಾಡುತ್ತೇವೆ, ನಾವು ಬೇರೆ ಪಕ್ಷದೊಂದಿಗಿನ ಮೈತ್ರಿಯಲ್ಲಿ ಹೋರಾಡುತ್ತೇವೆಯೇ ಅಥವಾ ನಾವು ನಮ್ಮದೇ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಹೋರಾಡುತ್ತೇವೆಯೇ ಎಂಬುದನ್ನು ಕಾದು ನೋಡಿ. ನನ್ನನ್ನು ಭೇಟಿಯಾಗಲು ಸಾಕಷ್ಟು ಕಾಂಗ್ರೆಸ್ ಕಾರ್ಯಕರ್ತರು ಬರುತ್ತಿದ್ದಾರೆ. ಹೊಸ ಪಕ್ಷದ ಘೋಷಣೆಗೆ ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದೇವೆ’ ಎಂದು ಅಮರಿಂದರ್ ಸಿಂಗ್ ಹೇಳಿದ್ದಾರೆ. ಇಂದು ನಾನು ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಲಿದ್ದೇನೆ. ನನ್ನೊಂದಿಗೆ 25-30 ಜನರು ಕೂಡ ಬರಲಿದ್ದಾರೆ ಎಂದು ಅಮರೀಂದರ್ ಸಿಂಗ್ ನಿನ್ನೆ ಹೇಳಿದ್ದಾರೆ.

