ಮಳೆಯ ಬಗ್ಗೆ ಭವಿಷ್ಯ ನುಡಿದ ಕೋಡಿಮಠ ಶ್ರೀಗಳು.

ಧಾರವಾಡ: ರಾಜ್ಯದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಅಕ್ಷರಶಃ ಜನಜೀವನ ಅಸ್ತವ್ಯಸ್ತಗೊಂಡಿದೆ. ಹಲವೆಡೆ ರೈತರ ಬೆಳೆಗಳು, ರಸ್ತೆ, ಮನೆಗಳು ಸಂಪೂರ್ಣ ಹಾನಿಯಾಗಿದ್ದು, ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ. ಮಳೆ ಸೃಷ್ಟಿಸಿದ ಅವಾಂತರಕ್ಕೆ ಹತ್ತಾರು ಜನರ ಪ್ರಾಣವೂ ಹೋಗಿದೆ.

ಬಯಲು ಸೀಮೆಯಂತಹ ಪ್ರದೇಶವೂ ಮಲೆನಾಡಿನಂತೆ ಭಾಸವಾಗುತ್ತಿದೆ. ಮೋಡ ಮುಸುಕಿದ ವಾತಾವರಣ, ಚಳಿ, ಮಳೆಗೆ ಹೈರಾಣಾಗಿರುವ ಜನತೆ, ಸಾಕಪ್ಪ ಸಾಕು ಈ ಮಳೆ ಸಹವಾಸ ಎನ್ನುತ್ತಿದ್ದಾರೆ. ಚಂಡಮಾರುತದ ಪ್ರಭಾವದಿಂದ ನವೆಂಬರ್​ ತಿಂಗಳಲ್ಲಿ ದಶಕದಲ್ಲೇ ಕಂಡು ಕೇಳರಿಯದ ಮಳೆಗೆ ಜನ ಕಂಗೆಟ್ಟಿದ್ದಾರೆ.

ಇನ್ನು ಎಷ್ಟು ದಿನ ಇದೇ ಪರಿಸ್ಥಿತಿ? ಸದ್ಯಕ್ಕೆ ಮಳೆ ನಿಲ್ಲೋದಿಲ್ವಾ? ಎಂಬ ಪ್ರಶ್ನೆ ದಟ್ಟವಾಗಿದ್ದೆ. ಈ ನಡುವೆ ಕೋಡಿಮಠದ ಶ್ರೀಗಳು ನುಡಿದ ಭವಿಷ್ಯವಾಣಿ ಮತ್ತಷ್ಟು ಆತಂಕ ಸೃಷ್ಟಿಸಿದೆ.

‘ರಾಜ್ಯದಲ್ಲಿ ಇನ್ನೂ ಮಳೆ ಕಾಟ ಇದೆ. ಕಾರ್ತಿಕ ಮಾಸ ಮುಗಿಯುವವರೆಗೆ ಮಳೆ ನಿಲ್ಲುವುದಿಲ್ಲ’ ಎಂದು ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. ಮಳೆ ಇನ್ನೂ ಹೆಚ್ಚಳವಾಗುವ ಲಕ್ಷಣ ಇದೆ. ಕಾರ್ತಿಕ ಕಳೆಯುವವರೆಗೂ ಇರುತ್ತದೆ. ಸದ್ಯ ಪ್ರಕೃತಿ ವಿಕೋಪವಾಗಿದೆ. ಏನೂ ಮಾಡಲು ಆಗುವುದಿಲ್ಲ. ಅನಾಹುತಗಳು ಹೆಚ್ಚಾಗುವ ಸಾಧ್ಯತೆ ಇದೆ. ಸಂಕ್ರಾಂತಿವರೆಗೂ ಮಳೆ ಇರುತ್ತದೆ’ ಎಂದರು. ರಾಜಕೀಯದ ಕುರಿತು ಕೇಳಿದಾಗ ಭವಿಷ್ಯ ಹೇಳಲು ಅವರು ನಿರಾಕರಿಸಿದರು.

About The Author