ಚಾಣಕ್ಯ ನೀತಿಯಲ್ಲಿ ಚಾಣಕ್ಯರು ಅನೇಕ ಜೀವನ ಪಾಠವನ್ನು ಹೇಳಿದ್ದಾರೆ. ಅವರು ಹೇಳಿದ ಎಲ್ಲ ನೀತಿಯನ್ನು ಯಾರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುತ್ತಾರೋ, ಅಂಥವರು ಖಂಡಿತ ಯಶಸ್ಸು ಗಳಿಸುತ್ತಾರೆ. ಚಾಣಕ್ಯರು ತಮ್ಮ ನೀತಿಯಲ್ಲಿ ಮೂರ್ಖರಿಗೆ ಬೆಲೆ ನೀಡಬೇಡಿ. ಅಂಥವರ ಸಂಗವೂ ಬೇಡ, ಅಂಥವರ ಜೊತೆ ಮಾದವೂ ಬೇಡ ಎನ್ನುತ್ತಾರೆ. ಆ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ..
ಚಾಣಕ್ಯರ ಪ್ರಕಾರ ನಾನೇ ಸರಿ ಎನ್ನುವ ಮೂರ್ಖರೊಟ್ಟಿಗೆ ಎಂದಿಗೂ ವಾದ ಮಾಡಬಾರದು. ಮಾತನಾಡುವ ವಿಷಯದ ಬಗ್ಗೆ ಅಲ್ಪ ಜ್ಞಾನವೂ ಇಲ್ಲದೇ, ತನ್ನ ಮಾತೇ ಮೇಲು ಎಂಬಂತೆ ಮಾತನಾಡುವವರ ಜೊತೆ ಮಾತು ಮಿತಿಯಲ್ಲಿರಬೇಕೇ ಹೊರತು, ಅತಿಯಾಗಿರಬಾರದು. ಅದೇ ರೀತಿ ಯಾವುದಾದರೂ ವಿಷಯದ ಬಗ್ಗೆ ತರ್ಕಕ್ಕಿಳಿಯುವುದಿದ್ದರೆ, ಬುದ್ಧಿವಂತರ ಜೊತೆ ತರ್ಕ ಮಾಡಬೇಕು. ಆಗ ನಮಗೆ ಇನ್ನಷ್ಟು ವಿಷಯಗಳ ಬಗ್ಗೆ ಮಾಹಿತಿ ಸಿಗುತ್ತದೆ. ಆದರೆ ಮೂರ್ಖರ ಜೊತೆ ತರ್ಕ ಮಾಡಿದರೆ, ನಮ್ಮ ಸಮಯ ವ್ಯರ್ಥವಾಗುತ್ತದೆ.
ಹೊಗಳಿಕೆಯಾದರೂ ಅಷ್ಟೇ. ನಿಮ್ಮ ಒಳಿತನ್ನು ಬಯಸುವವರು ನಿಮ್ಮನ್ನು ಹೊಗಳುತ್ತ ಅಟ್ಟಕ್ಕೇರಿಸಿ ಬಿಡುವುದಿಲ್ಲ. ಬದಲಾಗಿ ಬೈದು ಬುದ್ಧಿ ಹೇಳುತ್ತಾರೆ. ನೀವು ಯಶಸ್ಸು ಕಂಡಾಗ, ನೋಡಿ ಮನಸ್ಸಿನಲ್ಲೇ ಸಂತೋಷ ಪಡುತ್ತಾರೆ. ಆದ್ರೆ ನಿಮ್ಮ ಯಶಸ್ಸು ಸಹಿಸಲಾಗದವರು ನಿಮ್ಮನ್ನು ಹೊಗಳಿ ಅಟ್ಟಕ್ಕೇರಿಸುತ್ತಾರೆ. ಆ ಹೊಗಳಿಕೆಯಿಂದ ನೀವು ಹಿರಿ ಹಿರಿ ಹಿಗ್ಗಿ ಅಲ್ಲೇ ಇರಲಿ ಎಂಬುದು ಅವರ ಆಶಯ. ಆದ್ರೆ ನಿಮ್ಮ ಒಳಿತವನ್ನು ಬಯಸುವವರು, ನಿಮಗೆ ಬಯ್ಯುತ್ತಲಿರುತ್ತಾರೆ. ಯಾಕಂದ್ರೆ ಅವರು ಬೈದಷ್ಟು ನೀವು ನಿಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಕಲಿಯುತ್ತೀರಿ.
ಇನ್ನು ನೀವು ಯಾರ ವರ್ತಮಾನವನ್ನು ನೋಡಿ, ಅವರ ಭವಿಷ್ಯದ ಬಗ್ಗೆ ಅಪಹಾಸ್ಯ ಮಾಡಬಾರದು. ಯಾಕಂದ್ರೆ ಇಂದು ಬಡವನಾಗಿದ್ದವ ಮುಂದೆಯೂ ಅದೇ ಸ್ಥಿತಿಯಲ್ಲಿರುತ್ತಾನೆಂದು ಹೇಳಲು ಬಾರದು. ಅವನು ತನ್ನ ಕೆಲಸದಲ್ಲಿ ಲಕ್ಷ್ಯ ವಹಿಸಿ, ಉತ್ತಮ ಕೆಲಸಗಾರನಾಗಬಹುದು. ಬುದ್ಧಿವಂತಿಕೆ ಉಪಯೋಗಿಸಿ, ವ್ಯಾಪಾರದಲ್ಲಿ ಲಾಭ ಗಳಿಸಬಹುದು. ಒಳ್ಳೆಯ ಶಿಕ್ಷಣ ಪಡೆದು ಶ್ರೀಮಂತನಾಗಬಹುದು. ಅದೇ ರೀತಿ ಶ್ರೀಮಂತರರಾಗಿದ್ದವರು ಎಂದಿಗೂ ಹಾಗೆ ಇರುತ್ತಾರೆಂದು ಹೇಳಲು ಬರುವುದಿಲ್ಲ. ಆ ಶ್ರೀಮಂತಿಕೆಯನ್ನು ಹಾಗೆ ಕಾಪಾಡಿಕೊಂಡು ಹೋಗುವುದು ಮಕ್ಕಳಿಗೆ ಗೊತ್ತಿರಬೇಕು. ಅಪ್ಪ ಮಾಡಿಟ್ಟಿದ್ದನ್ನ ಮಗ ಕೂತು ತಿಂದರೆ ಭವಿಷ್ಯದಲ್ಲಿ ಸಾಲ ಮಾಡುವ ಪರಿಸ್ಥಿತಿ ಬರುವುದು ಖಂಡಿತ.