ಕ್ರೀಡೆ : ವಿಶ್ವಕಪ್ ಟೂರ್ನಿಯಲ್ಲಿ ಭಾರತ ಸತತ ನಾಲ್ಕನೆ ಗೆಲುವು ದಾಖಲಿಸಿದೆ. ನಿನ್ನೆ ಸೌತ್ ಹ್ಯಾಂಪ್ಟನ್ ನ ರೋಸ್ ಬೌಲ್ ನಲ್ಲಿ ನಡೆದ ಅಫ್ಘಾನಿಸ್ತಾನ ಎದುರಿನ ಪಂದ್ಯದಲ್ಲಿ, ರೋಚಕ ಗೆಲುವು ದಾಖಲಿಸಿದ ಕೊಹ್ಲಿ ಪಡೆ ಟೂರ್ನಿಯಲ್ಲಿ ಮತ್ತೊಂದು ಗೆಲುವಿನ ನಗೆ ಬೀರಿತು.
ಟಾಸ್ ಗೆದ್ದ ಭಾರತ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ದೊಡ್ಡ ಮೊತ್ತ ಕಲೆಹಾಕುವ ಲೆಕ್ಕಾಚಾರದಲ್ಲಿ ಬ್ಯಾಟಿಂಗ್ ಆರಂಭಿಸಿದ ಭಾರತಕ್ಕೆ, ಅಫ್ಘಾನ್ ಆರಂಭದಲ್ಲೇ ಶಾಕ್ ನೀಡಿತು. ತಂಡದ ಮೊತ್ತ ಕೇವಲ ಏಳು ರನ್ ಆಗಿದ್ದಾಗ ಹಿಟ್ ಮ್ಯಾನ್ ರೋಹಿತ್ ಶರ್ಮ ವಿಕೆಟ್ ಪಡೆದ ಅಫ್ಘಾನಿಸ್ತಾನದ ಯಂಗ್ ಸ್ಪಿನ್ನರ್ ಮುಜೀಬ್ ಉರ್ ರೆಹಮಾನ್, ಅಫ್ಘಾನ್ ಪಡೆಗೆ ಮೊದಲ ಯಶಸ್ಸು ತಂದುಕೊಟ್ರು. ನಂತರ ಜೊತೆಯಾದ ಕೆ ಎಲ್ ರಾಹುಲ್ ಮತ್ತು ವಿರಾಟ್ ಕೊಹ್ಲಿ, ತಂಡಕ್ಕೆ ಕೊಂಚ ಆಸರೆ ನೀಡಿದ್ದರಾದ್ರು, ದೊಡ್ಡ ಜೊತೆಯಾಟ ಮೂಡಿ ಬರಲಿಲ್ಲ. ಭಾರತದ ಪರ ವಿರಾಟ್ ಕೊಹ್ಲಿ ಮತ್ತು ಕೇದಾರ್ ಜಾಧವ್, ಅರ್ಧ ಶತಕ ಗಳಿಸಿದ್ದು ಬಿಟ್ಟರೆ ಉಳಿದ ಬ್ಯಾಟ್ಸ್ ಮನ್ ಗಳು ಉತ್ತಮ ಪ್ರದರ್ಶನ ನೀಡುವಲ್ಲಿ ಎಡವಿದ್ರು. ಪರಿಣಾಮವಾಗಿ ತಂಡ ನಿಗಧಿತ 50 ಒವರ್ ಗಳಲ್ಲಿ, 8 ವಿಕೆಟ್ ಕಳೆದುಕೊಂಡು 224 ರನ್ ಗಳ ಸಾಧಾರಣ ಮೊತ್ತ ಕಲೆ ಹಾಕಿತು.
ಕೊಹ್ಲಿ ಪಡೆ ನೀಡಿದ್ದ 225 ರನ್ ಟಾರ್ಗೆಟ್ ಬೆನ್ನತ್ತಿದ ಅಫ್ಘಾನ್ ಪಡೆ
49.5 ಓವರ್ಗಳಲ್ಲಿ 213 ರನ್ ಗಳಿಗೆ ಆಲ್ ಔಟ್ ಆಯಿತು. ಪರಿಣಾಮ ವಾಗಿ ಟೂರ್ನಿಯಲ್ಲಿ ಸತತ 6ನೇ ಸೋಲು ಅನುಭವಿಸಿತು. ಆರಂಭಿಕರಾದ ಹಜಾರತುಲ್ಹಾ (10) ಹಾಗೂ ಗುಲ್ಬಾದೀನ್ (27) ಶೀಘ್ರವಾಗಿ ಪೆವಿಲಿಯನ್ ಸೇರಿದ್ರು. ಉಳಿದಂತೆ ಮಿಡಲ್ ಆರ್ಡರ್ ನಲ್ಲಿ, ರಮತ್ ಶಾ (36), ಹಶಾಮತುಲ್ಹಾ ಶಾಹೀದಿ (21), ಅಸ್ಗರ್ ಆಫ್ಘಾನ್ (8), ನಜೀಬುಲ್ಹಾ ಜಾರ್ಡನ್ (21), ರಶೀದ್ ಖಾನ್ (14) ಭಾರತ ಬೌಲರ್ಗಳ ದಾಳಿಗೆ ಸಿಲುಕಿ ಪೆವಿಲಿಯನ್ ಸೇರಿದರು. ಅಫ್ಘಾನ್ ಪರ ಮೊಹಮ್ಮದ್ ನಬಿ 52 ರನ್ ಗಳಿಸುವ ಮೂಲಕ ಅರ್ಧ ಶತಕ ಗಳಿಸಿದ್ದು ಬಿಟ್ಟರೆ, ಉಳಿದ ಆಟಗಾರರು ಪೆವಿಲಿಯನ್ ಪೆರೇಡ್ ನಡೆಸಿದ್ದರು. ಪರಿಣಾಮವಾಗಿ ಭಾರತ 11 ರನ್ ಗಳ ಗೆಲುವು ದಾಖಲಿಸಿತು. ಭಾರತದ ಪರ ಮೊಹಮ್ಮದ್ ಶಮಿ ಹ್ಯಾಟ್ರಿಕ್ ವಿಕೆಟ್ ಸೇರಿದಂತೆ 4 ವಿಕೆಟ್ ಪಡೆದ್ರೆ, ಬುಮ್ರಾ, ಚಾಹಲ್ ಹಾಗೂ ಹಾರ್ದಿಕ್ ಪಾಂಡ್ಯ ತಲಾ 2 ವಿಕೆಟ್ ಉರುಳಿಸಿದರು.