ತನ್ನ ಪತ್ನಿ ವ್ಯಭಿಚಾರ ಮಾಡುತ್ತಿದ್ದಾಳೆಂದು ತಿಳಿದ ಬಳಿಕ ಇರಾನಿ ವ್ಯಕ್ತಿಯೋರ್ವ ತನ್ನ ಪತ್ನಿಯ ರುಂಡವನ್ನು ಕತ್ತರಿಸಿ, ಅದರ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಬಿಟ್ಟಿದ್ದಾನೆ. ವೀಡಿಯೋ ಭೀಕರವಾಗಿದ್ದು, ನೋಡುಗರನ್ನು ಬೆಚ್ಚಿ ಬೀಳಿಸಿದೆ. ಮೋನಾ ಹೈದರಿ(17) ಎಂಬಾಕೆಯನ್ನ ಆಕೆಯ ಪತಿ ಮತ್ತು ಮೈದುನ ಸೇರಿ ಕೊಲೆ ಮಾಡಿದ್ದಾರೆ. ನಂತರ ರುಂಡವನ್ನು ಹಿಡಿದ ಆಕೆಯ ಪತಿ, ವೀಡಿಯೋ ಮಾಡಿದ್ದಾನೆ. ಇಬ್ಬರೂ ಆರೋಪಿಗಳನ್ನು ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ.
ಈ ಬಗ್ಗೆ ಅಲ್ಲಿನ ರಾಜಕೀಯ ನಾಯಕರು ಚರ್ಚಿಸಿದ್ದು, ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಬೇಕು. ಮತ್ತೊಮ್ಮೆ ಇಂಥ ಘಟನೆ ನಡೆಯದಂತೆ ಕ್ರಮ ಕೈಗೊಳ್ಳಬೇಕು ಎಂದು ಚರ್ಚೆಯಾಗುತ್ತಿದೆ. ಅಲ್ಲದೇ ನೆಟ್ಟಿಗರು ಕೂಡ ಈ ಬಗ್ಗೆ ಆಕ್ರೋಶ ಹೊರಹಾಕಿದ್ದು, ಅವನು ಪತ್ನಿಯ ಮೇಲೆ ಆರೋಪ ಹೊರಿಸಿ, ಕೊಲೆ ಮಾಡಿದ್ದಾನೆ. ಅಂಥ ಕೆಲಸ ಮಾಡಿ, ಹೆಮ್ಮೆ ಪಡುತ್ತಿದ್ದಾನೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಸ್ಥಳೀಯ ಚಲನಚಿತ್ರ ನಿರ್ಮಾಪಕಿ, ತಹ್ಮಿನೆ ಮಿಲಾನಿ ಎಂಬಾಕೆ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ, ಮೋನಾ ವಿನಾಶಕಾರಿ ಅಜ್ಞಾನಕ್ಕೆ ಬಲಿಯಾಗಿದ್ದಾರೆ. ಈ ಅಪರಾಧಕ್ಕೆ ನಾವೆಲ್ಲರೂ ಜವಾಬ್ದಾರರು ಎಂದು ಬರೆದುಕೊಂಡಿದ್ದಾರೆ. ಇನ್ನು ಈ ಕೊಲೆಯ ಬಳಿಕ, ಸ್ತ್ರೀಯರ ರಕ್ಷಣೆಯ ಬಗ್ಗೆ ಹೆಚ್ಚಿನ ಚರ್ಚೆ ನಡೆಯಬೇಕು. ಅದಕ್ಕಾಗಿ ಹಲವು ಯೋಜನೆಯನ್ನು ತರಬೇಕೆಂದು ಅಲ್ಲಿನ ಸರ್ಕಾರಕ್ಕೆ ಒತ್ತಡ ಬರುತ್ತಿದೆ.
ಅಲ್ಲದೇ ಹೆಣ್ಣು ಮಕ್ಕಳ ಮದುವೆಯ ವಯಸ್ಸನ್ನು ಹೆಚ್ಚಿಸಬೇಕು ಎಂದು ಒತ್ತಾಯಿಸಲಾಗುತ್ತಿದೆ. ಸದ್ಯ ಅಲ್ಲಿ ಹೆಣ್ಣು ಮಕ್ಕಳ ಮದುವೆ ವಯಸ್ಸು 13 ವರ್ಷವಾಗಿದೆ. ಅಲ್ಲದೇ ಕೊಲೆಯಾಗಿರುವ ಮಹಿಳೆ 12 ವರ್ಷ ವಯಸ್ಸಿಗೇ ಮದುವೆಯಾಗಿದ್ದು, ಆಕೆಗೆ ಓರ್ವ ಮಗನಿದ್ದಾನೆ.